ರಾಜ್ಯ ಸರ್ಕಾರ ಹೇಮಾವತಿ ಜಲಾಶಯದಿಂದ ತಮಿಳುನಾಡಿಗೆ ನೀರು ಬಿಡುಗಡೆ ಮಾಡುತ್ತಿರುವುದರಿಂದ ಜಲಾಶಯದ ನೀರು ನಿರಂತರವಾಗಿ ಖಾಲಿಯಾಗುತ್ತಿದೆ. ಹೇಮಾವತಿ ಜಲಾಶಯದಲ್ಲಿ 32 ಟಿ.ಎಂ.ಸಿ ಇದ್ದ ನೀರಿನ ಪ್ರಮಾಣ ಇದೀಗ 22 ಟಿ.ಎಂ.ಸಿಗೆ ಕುಸಿದಿದೆ.
ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ
ಹಾಸನ ಜಿಲ್ಲೆ ಗೊರೂರಿನ ಹೇಮಾವತಿ ಜಲಾಶಯದಿಂದ ತಮಿಳುನಾಡಿಗೆ ನೀರು ಬಿಡುತ್ತಿರುವುದನ್ನು ತಕ್ಷಣವೇ ನಿಲ್ಲಿಸುವಂತೆ ಆಗ್ರಹಿಸಿ ತಾಲೂಕು ರೈತಸಂಘದ ಕಾರ್ಯಕರ್ತರು ಪಟ್ಟಣದ ಹೇಮಾವತಿ ಜಲಾಶಯದ ಎಚ್.ಎಲ್.ಬಿ.ಸಿ ನಂ.3 ಉಪ ವಿಭಾಗದ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.ತಾಲೂಕಿನ ನೀರಾವರಿ ಕಚೇರಿಗೆ ಮುತ್ತಿಗೆ ಹಾಕಿದ ರೈತರು ಹೇಮಾವತಿ ಜಲಾಶಯದಿಂದ ರೈತರ ಕೆರೆ ಕಟ್ಟೆಗಳನ್ನು ತುಂಬಿಸಲು ತಾರತಮ್ಯ ನೀತಿ ಅನುಸರಿಸುತ್ತಿರುವ ರಾಜ್ಯ ಸರ್ಕಾರ ಹಾಗೂ ಹೇಮಾವತಿ ರೈತರ ಹಿತರಕ್ಷಣೆ ಬಗ್ಗೆ ಧ್ವನಿಯೆತ್ತದ ಹೇಮಾವತಿ ಜಲಾನಯನ ಪ್ರದೆಶದ ವ್ಯಾಪ್ತಿಯ ಜನಪ್ರತಿನಿಧಿಗಳ ವಿರುದ್ಧ ಧಿಕ್ಕಾರದ ಘೋಷಣೆ ಕೂಗಿದರು.
ಎ.ಜೆ.ರಾಮಚಂದ್ರರಾವ್ ಕಾಲುವೆ ಮುಖಾಂತರ ಬಿಡುಗಡೆ ಮಾಡಿರುವ ನೀರಿನಿಂದ ತಕ್ಷಣವೇ ತಾಲೂಕಿನ ಎಲ್ಲಾ ಕೆರೆಕಟ್ಟೆಗಳನ್ನು ಸಂಪೂರ್ಣ ಭರ್ತಿ ಮಾಡಬೇಕು. ಮಂದಗೆರೆ ಹಾಗೂ ಹೇಮಗಿರಿ ನದಿ ಅಣೆಕಟ್ಟೆ ನಾಲೆಗಳ ರೈತರ ಕೃಷಿ ಚಟುವಟಿಗಳಿಗೆ ಪೂರ್ಣ ಪ್ರಮಾಣದ ನೀರು ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದರು.ರೈತಸಂಘದ ತಾಲೂಕು ಅಧ್ಯಕ್ಷ ಕಾರಿಗನಹಳ್ಳಿ ಪುಟ್ಟೇಗೌಡ ಮಾತನಾಡಿ, ಎ.ಜೆ.ರಾಮಚಂದ್ರರಾವ್ ಕಾಲುವೆ ಮುಖಾಂತರ ತಾಲೂಕಿನ ಕೆರೆ ಕಟ್ಟೆಗಳನ್ನು ತುಂಬಿಸಿಲು ರಾಜ್ಯ ಸರ್ಕರ ಕಳೆದ 15 ದಿನಗಳಿಂದ ಹೇಮೆ ನೀರು ಹರಿಸುತ್ತಿದ್ದರೂ ಎಂಜಿನಿಯರುಗಳ ಕರ್ತವ್ಯಲೋಪದಿಂದ ಕಾಲುಭಾಗದಷ್ಟು ಕೆರೆಗಳೂ ತುಂಬಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯ ಸರ್ಕಾರ ಹೇಮಾವತಿ ಜಲಾಶಯದಿಂದ ತಮಿಳುನಾಡಿಗೆ ನೀರು ಬಿಡುಗಡೆ ಮಾಡುತ್ತಿರುವುದರಿಂದ ಜಲಾಶಯದ ನೀರು ನಿರಂತರವಾಗಿ ಖಾಲಿಯಾಗುತ್ತಿದೆ. ಹೇಮಾವತಿ ಜಲಾಶಯದಲ್ಲಿ 32 ಟಿ.ಎಂ.ಸಿ ಇದ್ದ ನೀರಿನ ಪ್ರಮಾಣ ಇದೀಗ 22 ಟಿ.ಎಂ.ಸಿ ಗೆ ಕುಸಿದಿದೆ ಎಂದು ಆತಂಕ ವ್ಯಕ್ತಪಡಿಸಿದರು.ರಾಜ್ಯ ಸರ್ಕಾರ ಹೇಮಾವತಿ ನದಿ ಮೂಲಕ ತಮಿಳುನಡಿಗೆ ನೀರು ನೀಡಿ ಹೇಮಾವತಿ ಜಲಾನಯನ ಪ್ರದೇಶದ ರೈತರಿಗೆ ವಂಚನೆ ಮಾಡುತ್ತಿದೆ. ಹೇಮಾವತಿ ನೀರನ್ನು ಕೆಳಬಾಗಕ್ಕೆ ಬಸಿದು ರೈತರಿಗೆ ಘೋರ ಅನ್ಯಾಯ ಮಾಡುತ್ತಿದ್ದರೂ ಹೇಮಾವತಿ ಜಲಾನಯನ ಪ್ರದೇಶದ ಯಾವುದೇ ಶಾಸಕರು ಧ್ವನಿಯೆತ್ತಿ ರೈತರ ರಕ್ಷಣೆಗೆ ನಿಲ್ಲುತ್ತಿಲ್ಲ ಎಂದು ಕಿಡಿಕಾರಿದರು.
ರೈತರ ಹಿತದೃಷ್ಠಿಯಿಂದ ಹೇಮಾವತಿ ಜಲಾನಯನ ಪ್ರದೇಶದ ಎಲ್ಲಾ ಶಾಸಕರೂ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಸರ್ಕಾರದ ಮೇಲೆ ಅಗತ್ಯ ಒತ್ತಡ ಹಾಕುವಂತೆ ಆಗ್ರಹಿಸಿದರು.ರೈತನಾಯಕ ಎಂ.ವಿ.ರಾಜೇಗೌಡ ಮಾತನಾಡಿ, ಹೇಮಾವತಿ ಜಲಾಶಯ ನಿರ್ಮಾಣವಾದ ಕಾಲದಿಂದಲೂ ಈ ಭಾಗದ ರೈತರು ಹೇಮೆ ನೀರಿಗಾಗಿ ಹೋರಾಟ ಮಾಡುತ್ತಲೇ ಇದ್ದಾರೆ. ಹೇಮೆ ನೀರನ್ನು ಖಾಲಿ ಮಾಡಿದರೆ ಈ ಭಾಗದ ರೈತರ ಗತಿಯೇನು? ತಕ್ಷಣವೇ ಜಲಾಶಯದಿಂದ ನದಿಗೆ ಬಿಡುತ್ತಿರುವ ನೀರನ್ನು ನಿಲ್ಲಿಸಬೇಕು ಎಂದು ಒತ್ತಾಯಿಸಿದರು.
ಹೇಮಾವತಿ ಜಲಾಶಯದ ಮುಖ್ಯ ಎಂಜಿನಿಯರ್ ಮತ್ತು ಚನ್ನರಾಯಪಟ್ಟಣದ ವಿಭಾಗದ ಅಧೀಕ್ಷಕ ಎಂಜಿನಿಯರು ದೂರವಾಣಿ ಮೂಲಕ ರೈತ ಹೋರಾಟಗಾರರನ್ನು ಸಂಪರ್ಕಿಸಿ ಶನಿವಾರ (ಸೆ.5) ಕೆ.ಆರ್.ಪೇಟೆಗೆ ಆಗಮಿಸಿ ಕೆರೆ ಕಟ್ಟೆಗಳಿಗೆ ನೀರು ತುಂಬಿಸುವ ಬಗ್ಗೆ ರೈತರ ಸಭೆ ನಡೆಸಿ ಕ್ರಮ ವಹಿಸುವ ಭರವಸೆ ನೀಡಿದ ಅನಂತರ ಪ್ರತಿಭಟನೆ ಹಿಂಪಡೆಯಲಾಯಿತು.ಪ್ರತಿಭಟನೆಯಲ್ಲಿ ರೈತ ಮುಖಂಡರಾದ ಎಲ್.ಬಿ.ಜಗದೀಶ್, ಬೂಕನಕೆರೆ ನಾಗರಾಜು, ಲಕ್ಷ್ಮೀಪುರ ನಾಗರಾಜು, ಮುದ್ದುಕುಮಾರ್, ನಗರೂರು ಕುಮಾರ್, ಮಡುವಿನಕೋಡಿ ಪ್ರಕಾಶ್, ಹೊನ್ನೇಗೌಡ, ಕರೋಟಿ ತಮ್ಮಯ್ಯ, ಲತಾಕೆಶವ, ನೀತಿಮಂಗಲ ಮಹೆಶ್, ಲಿಂಗಾಪುರ ಚನ್ನಬಸಪ್ಪ ಸೇರಿದಂತೆ ನೂರಾರು ರೈತರು ಭಾಗವಹಿಸಿದ್ದರು.