ಸಾರಾಂಶ
ತುಂಗಭದ್ರಾ ಎಡದಂಡೆ ಮುಖ್ಯ ಕಾಲುವೆಗೆ ಶುಕ್ರವಾರ ಕೊಪ್ಪಳ ಸಂಸದ ರಾಜಶೇಖರ ಹಿಟ್ನಾಳ ನೀರು ಹರಿಸಿದ್ದು, ರೈತರ ಮುಂಗಾರು ಬೆಳೆಗೆ ಅನುಕೂಲವಾಗಲಿದೆ. ಇದೇ ಪ್ರಮಾಣದ ಒಳಹರಿವಿದ್ದರೆ ಜಲಾಶಯ ಇನ್ನು ಒಂದು ವಾರದಲ್ಲಿ ಭರ್ತಿಯಾಗಲಿದೆ.
ಮುನಿರಾಬಾದ್: ತುಂಗಭದ್ರಾ ಎಡದಂಡೆ ಮುಖ್ಯ ಕಾಲುವೆಗೆ ಶುಕ್ರವಾರ ಕೊಪ್ಪಳ ಸಂಸದ ರಾಜಶೇಖರ ಹಿಟ್ನಾಳ ನೀರು ಹರಿಸಿದ್ದು, ರೈತರ ಮುಂಗಾರು ಬೆಳೆಗೆ ಅನುಕೂಲವಾಗಲಿದೆ.
ಈ ಸಂದರ್ಭದಲ್ಲಿ ಕಾಡಾ ಅಧ್ಯಕ್ಷರಾದ ಹಸನಸಾಬ್ ದೋಟಿಹಾಳ, ನೀರಾವರಿ ಇಲಾಖೆಯ ಮುಖ್ಯ ಅಭಿಯಂತರ ಬಸವರಾಜ, ಕರ್ನಾಟಕ ರೈತ ಸಂಘದ ರಾಜ್ಯಾಧ್ಯಕ್ಷ ಅಮರೇಶ ಚಾಗಭಾವಿ, ಗೌರವ ಅಧ್ಯಕ್ಷರಾದ ಶರಣೇಗೌಡ, ಕಾಂಗ್ರೆಸ್ ಮುಖಂಡರಾದ ಸಯ್ಯದ, ಬಾಲಚಂದ್ರ, ಜನಾರ್ದನ ಹಾಗೂ ನೀರಾವರಿ ಇಲಾಖೆಯ ಅಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ರಾಜಶೇಖರ ಹಿಟ್ನಾಳ, ಮಲೆನಾಡಿನಲ್ಲಿ ಉತ್ತಮ ಮಳೆಯಾಗುತ್ತಿದ್ದು, ಜಲಾಶಯಕ್ಕೆ ಹರಿದು ಬರುತ್ತಿರುವ ನೀರಿನ ಪ್ರಮಾಣ ಏರಿಕೆಯಾಗುತ್ತಿದೆ. ಎರಡು ದಿನಗಳಲ್ಲಿ ಜಲಾಶಯಕ್ಕೆ 2 ಲಕ್ಷ ಕ್ಯುಸೆಕ್‌ಗಿಂತ ಅಧಿಕ ಪ್ರಮಾಣದ ನೀರು ಹರಿದು ಬಂದಿದೆ. ಇದೇ ಪ್ರಮಾಣದ ಒಳಹರಿವಿದ್ದರೆ ಜಲಾಶಯ ಇನ್ನು ಒಂದು ವಾರದಲ್ಲಿ ಭರ್ತಿಯಾಗಲಿದೆ ಎಂದು ಹೇಳಿದರು.
ಪ್ರಸಕ್ತ ಸಾಲಿನಲ್ಲಿ ರೈತರ ಗದ್ದೆಗಳಿಗೆ ಎರಡು ಬೆಳೆಗಳಿಗೆ ನೀರು ಹರಿಸುವ ಉದ್ದೇಶವಿದೆ. ಇದಕ್ಕಾಗಿ ಐಸಿಸಿ ಸಭೆಗೂ ಮುನ್ನ ಕಾಲುವೆಗಳಲ್ಲಿ ನೀರನ್ನು ಹರಿಸಲಾಗಿದೆ ಎಂದು ಸಂಸದರು ಹೇಳಿದರು.ಇಂದು ಎಡದಂಡೆ ಮುಖ್ಯ ಕಾಲುವೆಗೆ 2,500 ಕ್ಯುಸೆಕ್ ನೀರನ್ನು ಹರಿಸಲಾಗಿದ್ದು, ಇದನ್ನು ಕ್ರಮೇಣವಾಗಿ 4,100 ಕ್ಯುಸೆಕ್‌ಗೆ ಏರಿಸಲಾಗುವುದು ಎಂದರು.
ಎಡದಂಡೆ ಮುಖ್ಯ ಕಾಲುವೆಯ ಪಾಪಾಯ್ಯ ಸುರಂಗದಲ್ಲಿ ನೀರಿನ ಸಾಮರ್ಥ್ಯ ಕೇವಲ 3,500 ಕ್ಯಸೆಕ್ ಆಗಿದೆ. ಅದಕ್ಕಿಂತ ಹೆಚ್ಚುವರಿ ನೀರು ಹರಿಸಿದರೆ ಆ ನೀರು ಪೋಲಾಗುತ್ತದೆ. ಈ ವಿಷಯಕ್ಕೆ ಸಂಬಂಧಿಸಿದಂತೆ ನೀರಾವರಿ ಸಲಹಾ ಸಮಿತಿಯಲ್ಲಿ ಚರ್ಚಿಸಿ ಸೂಕ್ತ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ಸಂಸದರು ತಿಳಿಸಿದರು.