ಅಕ್ಷರ ದಾಸೋಹ ಕಾರ್ಮಿಕರ ಬಾಕಿ ವೇತನ ಬಿಡುಗಡೆಗೊಳಿಸಿ

| Published : Oct 17 2025, 01:01 AM IST

ಸಾರಾಂಶ

ಸರ್ಕಾರಿ, ಅನುದಾನಿತ ಶಾಲೆಗಳಲ್ಲಿ ಮಕ್ಕಳಿಗೆ ಬಿಸಿಯೂಟ ನೀಡುವ ಕಾರ್ಯಕರ್ತೆಯರಿಗೆ ನೀಡುವ ಗೌರವಧನ ಅತ್ಯಲ್ಪವಾಗಿದೆ. ದುಡಿದ ಅವಧಿಗೆ ತಕ್ಕಂತೆ ನಿಯಮಿತವಾಗಿ ಗೌರವಧನ ಬಿಡುಗಡೆಗೊಳ್ಳದ ಹಿನ್ನೆಲೆಯಲ್ಲಿ ಬದುಕು ಅತಂತ್ರವಾಗಿದೆ.

ಹುಬ್ಬಳ್ಳಿ:

ಅಕ್ಷರ ದಾಸೋಹ ಕಾರ್ಮಿಕರ ಬಾಕಿ ಗೌರವಧನ ಕೂಡಲೇ ಬಿಡುಗಡೆ ಮಾಡುವಂತೆ ಒತ್ತಾಯಿಸಿ ಎಐಯುಟಿಯುಸಿ ಸಂಯೋಜಿತ ರಾಜ್ಯ ಸಂಯುಕ್ತ ಅಕ್ಷರ ದಾಸೋಹ ಕಾರ್ಮಿಕರ ಸಂಘದ ಹುಬ್ಬಳ್ಳಿ ಘಟಕದ ಪದಾಧಿಕಾರಿಗಳು ಗುರುವಾರ ತಹಸೀಲ್ದಾರ್ ಕಚೇರಿ ಎದುರು ಪ್ರತಿಭಟನೆ ನಡೆಸಿ ತಹಸೀಲ್ದಾರ್‌ಗೆ ಮನವಿ ಸಲ್ಲಿಸಿದರು.

ಸರ್ಕಾರಿ, ಅನುದಾನಿತ ಶಾಲೆಗಳಲ್ಲಿ ಮಕ್ಕಳಿಗೆ ಬಿಸಿಯೂಟ ನೀಡುವ ಕಾರ್ಯಕರ್ತೆಯರಿಗೆ ನೀಡುವ ಗೌರವಧನ ಅತ್ಯಲ್ಪವಾಗಿದೆ. ದುಡಿದ ಅವಧಿಗೆ ತಕ್ಕಂತೆ ನಿಯಮಿತವಾಗಿ ಗೌರವಧನ ಬಿಡುಗಡೆಗೊಳ್ಳದ ಹಿನ್ನೆಲೆಯಲ್ಲಿ ಬದುಕು ಅತಂತ್ರವಾಗಿದೆ. ಅಧಿಕಾರಿಗಳಿಗೆ ಕೇಳಿದರೆ ಕೇಂದ್ರದಿಂದಲೇ ಬಜೆಟ್ ಬಂದಿಲ್ಲ. ಬಂದಾಗ ನೀಡುತ್ತೇವೆ ಎಂದು ಹೇಳುತ್ತಾರೆ. ಇದರಿಂದ ಕಾರ್ಮಿಕ ವರ್ಗ ಇಕ್ಕಟ್ಟಿಗೆ ಸಿಲುಕಿದಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕೂಡಲೇ ಬಾಕಿ ಇರುವ ಗೌರವಧನ ಬಿಡುಗಡೆ ಮಾಡಬೇಕು. ಪ್ರತಿ ತಿಂಗಳು ನಿಯಮಿತವಾಗಿ ಗೌರವಧನ ಬಿಡುಗಡೆಗೆ ಕ್ರಮ ವಹಿಸಬೇಕು. ಅದರಂತೆ ಮೊಟ್ಟೆ ಹಣ ಖಾತ್ರಿಪಡಿಸಬೇಕು. ಈ ನಿಟ್ಟಿನಲ್ಲಿ ಸರ್ಕಾರ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಜಿಲ್ಲಾಧ್ಯಕ್ಷೆ ಭುವನಾ ಬಳ್ಳಾರಿ, ಲಲಿತಾ ಹೊಸಮನಿ, ಲಕ್ಷ್ಮೀ ದಂಡಿನ, ಲಕ್ಷ್ಮೀ ಬಡಪ್ಪನವರ, ನಾಗವ್ವ ನಾಗಶೆಟ್ಟರ, ಲಲಿತಾ ಎಚ್ ಸೇರಿದಂತೆ ಇತರರು ಇದ್ದರು.