ಬೆಂಗಳೂರಿನಲ್ಲಿ ನಡೆದ ಐಸಿಸಿ (ನೀರು ಬಳಕೆದಾರರ ಸಲಹಾ ಸಮಿತಿ) ಸಭೆಯಲ್ಲಿ ಕೃಷ್ಣಾ ಕೊಳ್ಳದ ರೈತರಿಗೆ ಹಿಂಗಾರಿ ಹಂಗಾಮಿಗೆ ನೀರು ಹರಿಸದಿರಲು ಸರ್ಕಾರ ನಿರ್ಣಯಿಸಿದ್ದು, ಆ ನಿರ್ಧಾರವನ್ನು ತಕ್ಷಣವೇ ವಾಪಸ್ ಪಡೆಯಬೇಕು. ಮಳೆಯಿಲ್ಲದೆ ಕಂಗೆಟ್ಟಿರುವ ಕೃಷ್ಣೆಯ ಭಾಗದ ರೈತರಿಗೆ ಹಿಂಗಾರಿ ಹಂಗಾಮಿಗೆ ನೀರು ಹರಿಸಲೇಬೇಕು ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಗುರುಲಿಂಗಪ್ಪ ಅಂಗಡಿ ಆಗ್ರಹಿಸಿದರು.
ಕನ್ನಡಪ್ರಭ ವಾರ್ತೆ ವಿಜಯಪುರ
ಬೆಂಗಳೂರಿನಲ್ಲಿ ನಡೆದ ಐಸಿಸಿ (ನೀರು ಬಳಕೆದಾರರ ಸಲಹಾ ಸಮಿತಿ) ಸಭೆಯಲ್ಲಿ ಕೃಷ್ಣಾ ಕೊಳ್ಳದ ರೈತರಿಗೆ ಹಿಂಗಾರಿ ಹಂಗಾಮಿಗೆ ನೀರು ಹರಿಸದಿರಲು ಸರ್ಕಾರ ನಿರ್ಣಯಿಸಿದ್ದು, ಆ ನಿರ್ಧಾರವನ್ನು ತಕ್ಷಣವೇ ವಾಪಸ್ ಪಡೆಯಬೇಕು. ಮಳೆಯಿಲ್ಲದೆ ಕಂಗೆಟ್ಟಿರುವ ಕೃಷ್ಣೆಯ ಭಾಗದ ರೈತರಿಗೆ ಹಿಂಗಾರಿ ಹಂಗಾಮಿಗೆ ನೀರು ಹರಿಸಲೇಬೇಕು ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಗುರುಲಿಂಗಪ್ಪ ಅಂಗಡಿ ಆಗ್ರಹಿಸಿದರು.ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಈಗಾಗಲೇ ಸರಿಯಾಗಿ ಮಳೆಯಿಲ್ಲದೆ ಮುಂಗಾರು ಹಂಗಾಮಿನಲ್ಲಿ ರೈತರು ಸಾಕಷ್ಟು ನಷ್ಟ ಅನುಭವಿಸಿದ್ದಾರೆ. ಇದೀಗ ಹಿಂಗಾರಿ ಬೆಳೆಗಳಿಗಾಗಿ ಭರವಸೆಯಿಂದ ಕಾಯುತ್ತಿದ್ದು, ಅದಕ್ಕೂ ನೀರು ಸಿಗದಿದ್ದರೆ ರೈತರು ಏನು ಮಾಡಬೇಕು?. ತಕ್ಷಣವೇ ರಾಜ್ಯ ಸರ್ಕಾರ ಈ ನಿರ್ಧಾರ ವಾಪಸ್ ಪಡೆದು, ಕಾಲುವೆಗಳಿಗೆ ನೀರು ಹರಿಸಬೇಕು. ಒಂದು ವೇಳೆ ಹಿಂಗಾರಿ ಹಂಗಾಮಿಗೆ ನೀರು ಕೊಡದಿದ್ದರೆ ರೈತರೊಂದಿಗೆ ನಾವು ಹೋರಾಟಕ್ಕೆ ಇಳಿಯಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗೆಲ್ಲ ನೀರು ನಿರ್ವಹಣೆಯಲ್ಲಿ ಯಡವಟ್ಟು ಮಾಡುತ್ತಲಿದ್ದು, ಇದನ್ನು ನಾವು ಖಂಡಿಸುತ್ತೇವೆ. ಈ ಹಿಂದೆಯೂ ಕಾಂಗ್ರೆಸ್ ಸರ್ಕಾರದಲ್ಲಿ ಎಂ.ಬಿ.ಪಾಟೀಲರು ನೀರಾವರಿ ಸಚಿವರಿದ್ದಾಗ ನೀರು ನಿರ್ವಹಣೆಯಲ್ಲಿ ಯಡವಟ್ಟು ಮಾಡಿದ್ದರು. ರಾಜ್ಯದ ರೈತರಿಗೇ ನೀರು ಇರದಂತಹ ಸಮಯದಲ್ಲಿ ಮುಖ್ಯಮಂತ್ರಿಗಳು ಮೌಖಿಕವಾಗಿ ಆದೇಶಿಸಿ ಸುಮಾರು 10 ರಿಂದ 15 ಟಿಎಂಸಿ ನೀರನ್ನು ತೆಲಂಗಾಣಕ್ಕೆ ಹರಿಸಿದ್ದು, ಕಾಂಗ್ರೆಸ್ ಸರ್ಕಾರ ರೈತ ವಿರೋಧಿ ಎಂಬುದು ಇದರಿಂದ ಖಚಿತವಾಗಿದೆ. ನಮ್ಮ ರಾಜ್ಯದ ಕೃಷ್ಣಾ ನೀರಾವರಿ ಯೋಜನೆಗೆ ಉದ್ದೇಶಪೂರ್ವಕವಾಗಿಯೇ ತೊಂದರೆ ಕಲ್ಪಿಸಿದ ತೆಲಂಗಾಣ ರಾಜ್ಯಕ್ಕೆ ನೀರು ಬಿಡುವುದು ಸರಿಯಲ್ಲ. ನೀರು ಕೊಡುವುದಿದ್ದರೆ ಅವರಿಂದ ನೀರಾವರಿ ಯೋಜನೆಯ ಒಪ್ಪಂದ ಮಾಡಿಕೊಂಡು ನೀರು ಕೊಡಬೇಕಿತ್ತು ಎಂದರು.ರಾಜ್ಯದಲ್ಲಿ ಸಾಕಷ್ಟು ಸಮಸ್ಯೆಗಳಿದ್ದರೂ ಕಾಂಗ್ರೆಸ್ ಸರ್ಕಾರ, ಸಚಿವರು ರೈತರಿಗೆ ಸ್ಪಂದಿಸುತ್ತಿಲ್ಲ. ಕಬ್ಬು ಬೆಳೆಗಾರರ ಹಾಗೂ ಕಾರ್ಖಾನೆಗಳ ಉಳಿವಿಗಾಗಿ ಮೋದಿಯವರು ಎಂಎಸ್ಪಿ ಜಾರಿಗೆ ತಂದರು. ಇದರಿಂದಾಗಿಯೇ ಇಂದು ರೈತರಿಗೆ ಸಾಕಷ್ಟು ಅನುಕೂಲವಾಗಿದೆ. ಸಹಕಾರಿ ಸಕ್ಕರೆ ಕಾರ್ಖಾನೆಗಳ ಪರಿಸ್ಥಿತಿ ಆರ್ಥಿಕವಾಗಿ ಸಮಸ್ಯೆಯಲ್ಲಿದ್ದು, ಮೋದಿ ಹಾಗೂ ಅಮಿತ್ ಶಾ ಅವರು ರಾಜ್ಯ ಸರ್ಕಾರದ ಮೂಲಕ ಸಾಲ ಕೊಡುವ ಯೋಜನೆ ಜಾರಿಗೆ ತಂದರು. ಆದರೆ, ರಾಜ್ಯ ಕಾಂಗ್ರೆಸ್ ಸರ್ಕಾರ ಅದನ್ನು ಪಡೆದು ಸಹಕಾರಿ ಕಾರ್ಖಾನೆಗಳಿಗೆ ಕೊಡಲಿಲ್ಲ. ಉಸ್ತುವಾರಿ ಸಚಿವರು ಸರ್ಕಾರದ ಮೇಲೆ ಒತ್ತಡ ಹೇರಿ ಕೇಂದ್ರದ ಸಹಾಯ ಪಡೆದು ಸಹಕಾರಿ ಕಾರ್ಖಾನೆಗಳಿಗೆ ನೀಡುವ ಮೂಲಕ ಕಾರ್ಖಾನೆಗಳನ್ನು ಉಳಿಸಿಕೊಳ್ಳಬೇಕು ಎಂದು ಒತ್ತಾಯಿಸಿದರು.ತೀವ್ರ ಬರಗಾಲದ ಹಿನ್ನೆಲೆ ರಾಜ್ಯ ಸರ್ಕಾರ ಬರಗಾಲ ಘೋಷಣೆ ಮಾಡಿ ₹ 2500 ಬರ ಪರಿಹಾರ ಘೋಷಣೆ ಮಾಡಿದ್ದು ನೋಡಿದರೆ ಈ ಸರ್ಕಾರ ಎಷ್ಟು ಹೀನಾಯವಾಗಿದೆ, ಕಾಂಗ್ರೆಸ್ ಸರ್ಕಾರ ರಾಜ್ಯವನ್ನು ದಿವಾಳಿ ಮಾಡಿದೆ ಎಂಬುದು ತಿಳಿಯಲಿದೆ. ಈ ಸರ್ಕಾರವನ್ನು ಜನತೆ ಆದಷ್ಟು ಬೇಗ ಮನೆಗೆ ಕಳುಹಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.ಶಾಸಕ ಯತ್ನಾಳ ಪಕ್ಷಕ್ಕೆ ಬಂದರೆ ಇಲ್ಲಿ ಅಸಮಾಧಾನ ಉಂಟಾಗುತ್ತದೆ. ಪಕ್ಷಕ್ಕಾಗಿ ಜೀವ ತೇಯ್ದ ಕಾರ್ಯಕರ್ತರಿಗೆ ಟಿಕೆಟ್ ಕೊಡದಂತೆ ಯತ್ನಾಳರು ಹಿಂಸೆ ಕೊಟ್ಟಿದ್ದಾರೆ. ಅವರ ವರ್ತನೆ ಬದಲಾವಣೆ ಆಗಬೇಕಿದೆ. ಬಿಜೆಪಿ ಅಧ್ಯಕ್ಷನಾಗಿ ಅವರು ಪಕ್ಷಕ್ಕೆ ಬರಲು ನನಗೆ ವಿರೋಧವಿಲ್ಲ. ಅವರು ತಮ್ಮ ವರ್ತನೆಯಲ್ಲಿ ಬದಲಾವಣೆ ಮಾಡಿಕೊಂಡು, ಹೈಕಮಾಂಡ್ ಸೇರಿಸಿಕೊಂಡರೆ ಅವರು ಪಕ್ಷಕ್ಕೆ ಬರಬಹುದು ಎಂದರು.ಯತ್ನಾಳರು ಬಿಎಸ್ವೈ ಅವರನ್ನು ಸಾಕಷ್ಟು ತೆಗಳಿದ್ದರೂ ಯತ್ನಾಳರಿಗೆ ಅನಾರೋಗ್ಯವಾದಾಗ ಯಡಿಯೂರಪ್ಪನವರೇ ಹೋಗಿ ಮಾತನಾಡಿಸಿದ್ದು, ಅವರ ವ್ಯಕ್ತಿತ್ವ ತೋರಿಸಿತ್ತು. ಇದೀಗ ಅದರಂತೆ ಯತ್ನಾಳರು ರಾಜ್ಯಾಧ್ಯಕ್ಷರಿಗೆ ಸಾಕಷ್ಟು ಹಿಂಸೆ ಮಾಡಿದರೂ ವಿಜಯೇಂದ್ರ ಅವರು ಯತ್ನಾಳರ ಜೊತೆಗೆ ಪ್ರೀತಿಯಿಂದ ಮಾತನಾಡುವುದು ನೋಡಿದರೆ, ಇದು ರಾಜ್ಯಾಧ್ಯಕ್ಷರ ವ್ಯಕ್ತಿತ್ವವನ್ನು ತೋರಿಸುತ್ತದೆ ಎಂದರು.ಗೋಷ್ಠಿಯಲ್ಲಿ ಮುಖಂಡರಾದ ಪರಶುರಾಮ ರಜಪೂತ, ಸಾಬು ಮಾಶಾಳ, ಶಂಕರಗೌಡ ಪಾಟೀಲ, ಈರಣ್ಣ ರಾವೂರ ಇದ್ದರು.