ಯಾವುದೇ ಒತ್ತಡಕ್ಕೆ ಮಣಿದು ಈಗ ನೀರು ಹರಿಸದೆ, ಮುಂಬರುವ ಬೇಸಿಗೆ ಹಂಗಾಮಿಗೆ ಭದ್ರಾ ಅಣೆಕಟ್ಟೆಯಿಂದ ಅಚ್ಚುಕಟ್ಟು ಪ್ರದೇಶಕ್ಕೆ ನೀರು ಕೊಡಬೇಕೆಂದು ಒತ್ತಾಯಿಸಿ ಭಾರತೀಯ ರೈತ ಒಕ್ಕೂಟದಿಂದ ಬುಧವಾರ ಅಪರ ಜಿಲ್ಲಾಧಿಕಾರಿ ಶೀಲವಂತ ಶಿವಕುಮಾರ್ ಮೂಲಕ ಸರ್ಕಾರಕ್ಕೆ ಮನವಿಪತ್ರ ಸಲ್ಲಿಸಲಾಯಿತು.

ಕನ್ನಡಪ್ರಭ ವಾರ್ತೆ ದಾವಣಗೆರೆ

ಯಾವುದೇ ಒತ್ತಡಕ್ಕೆ ಮಣಿದು ಈಗ ನೀರು ಹರಿಸದೆ, ಮುಂಬರುವ ಬೇಸಿಗೆ ಹಂಗಾಮಿಗೆ ಭದ್ರಾ ಅಣೆಕಟ್ಟೆಯಿಂದ ಅಚ್ಚುಕಟ್ಟು ಪ್ರದೇಶಕ್ಕೆ ನೀರು ಕೊಡಬೇಕೆಂದು ಒತ್ತಾಯಿಸಿ ಭಾರತೀಯ ರೈತ ಒಕ್ಕೂಟದಿಂದ ಬುಧವಾರ ಅಪರ ಜಿಲ್ಲಾಧಿಕಾರಿ ಶೀಲವಂತ ಶಿವಕುಮಾರ್ ಮೂಲಕ ಸರ್ಕಾರಕ್ಕೆ ಮನವಿಪತ್ರ ಸಲ್ಲಿಸಲಾಯಿತು.

ಕಳೆದ ಆ.3ರಿಂದ ಒಂದು ತಿಂಗಳು ಮಳೆಗಾಲದ ಬೆಳೆಗೆ ನೀರು ಕೊಡುವಂತೆ ಮಾಜಿ ಸಚಿವ ಎಸ್.ಎ.ರವೀಂದ್ರನಾಥ್, ನೀರಾವರಿ ತಜ್ಞ ಪ್ರೊ.ಸಿ.ನರಸಿಂಹಪ್ಪ ಜತೆಗೂಡಿ ನಮ್ಮ ಸಂಘಟನೆಯಿಂದ ಹೋರಾಟ ಕೈಗೊಂಡರೂ ಸರ್ಕಾರ ಸ್ಪಂದಿಸಲಿಲ್ಲ. ಐಸಿಸಿ ಸಭೆಯಲ್ಲಿ ಅಚ್ಚುಕಟ್ಟು ಪ್ರದೇಶಕ್ಕೆ ನೀರು ಹರಿಸಲು ನಿರ್ಣಯ ಕೈಗೊಳ್ಳಲಿಲ್ಲ. ರೈತರು ಭತ್ತದ ಸಸಿ ನಾಟಿಗೆ ಸಿದ್ಧತೆ ಮಾಡಿಕೊಂಡಿದ್ದರೂ ಸರ್ಕಾರ ನೀರು ಕರುಣಿಸಲಿಲ್ಲ. ಈಗ ಯಾವುದೇ ಕಾರಣಕ್ಕೂ ನೀರು ಬಿಡಬಾರದು. ಮುಂದಿನ ಬೇಸಿಗೆ ಬೆಳೆಗೆ ಜನವರಿಯಿಂದ 130 ದಿನ ನೀರು ಹರಿಸುವ ಮೂಲಕ ರೈತರ ಹಿತ ಕಾಪಾಡಬೇಕು ಎಂದು ಒಕ್ಕೂಟದ ಮುಖಂಡರು ಆಗ್ರಹಿಸಿದರು.

ಭದ್ರಾ ನೀರನ್ನು ನಂಬಿಕೊಂಡು ಭತ್ತದ ಬೆಳೆಗೆ ಸಿದ್ಧತೆ ಮಾಡಿಕೊಂಡಿದ್ದ ರೈತರು ನೀರು ಸಿಗದೆ ನಷ್ಟಕ್ಕೊಳಗಾಗಿದ್ದು, ಅಂತಹವರಿಗೆ ಪ್ರತಿ ಎಕರೆಗೆ 75 ಸಾವಿರ ರು. ಪರಿಹಾರ ಕೊಡಬೇಕು. ಇಲ್ಲದಿದ್ದರೆ ಕಾನೂನು ಮೊರೆ ಹೋಗಬೇಕಾಗುತ್ತದೆ ಎಂದು ಮುಖಂಡರು ಎಚ್ಚರಿಸಿದರು. ಒಕ್ಕೂಟದ ಅಧ್ಯಕ್ಷ ಎಚ್.ಆರ್.ಲಿಂಗರಾಜ್ ಶಾಮನೂರು, ಪದಾಧಿಕಾರಿಗಳಾದ ಎ.ಎಂ.ಮಂಜುನಾಥ್, ಕುಂದುವಾಡ ಹನುಮಂತಪ್ಪ, ಎಚ್.ಎನ್.ಗುರುನಾಥ, ಅಣ್ಣಪ್ಪ, ಪುನೀತ್ ಮತ್ತಿತರರು ಹಾಜರಿದ್ದರು.