ಹೇಮಾವತಿ ಜಲಾಶಯದಿಂದ ನೀರು ಹರಿಸಿ, ರೈತರ ಬೆಳೆ ರಕ್ಷಿಸಿ

| Published : Mar 07 2025, 12:47 AM IST

ಸಾರಾಂಶ

ಬೆಳೆದು ನಿಂತಿರುವ ಬೆಳೆಗಳ ಸಂರಕ್ಷಣೆಗೆ ಹೇಮಾವತಿ ಜಲಾಶಯದಿಂದ ಎಡದಂಡೆ ಕಾಲುವೆಗೆ ನೀರು ಹರಿಸಿ ತಾಲೂಕಿನ ಕೆರೆ-ಕಟ್ಟೆಗಳನ್ನು ತುಂಬಿಸಿ, ರೈತರ ಬೆಳೆಗಳನ್ನು ರಕ್ಷಿಸುವಂತೆ ಶಾಸಕ ಎಚ್.ಟಿ.ಮಂಜು ರಾಜ್ಯ ವಿಧಾನಸಭೆಯಲ್ಲಿ ಆಗ್ರಹಿಸಿದರು. ತಾಲೂಕಿನ ಸಾವಿರಾರು ಎಕರೆ ಪ್ರದೇಶದಲ್ಲಿ ಕಬ್ಬು, ಭತ್ತ ಮತ್ತು ತೆಂಗು ಮತ್ತಿತರ ತೋಟಗಾರಿಕಾ ಬೆಳೆಗಳ ರಕ್ಷಣೆ ಮಾಡಿಕೊಳ್ಳಲು ರೈತರು ನೀರಿಗಾಗಿ ಕಾಯುತ್ತಿದ್ದಾರೆ.

ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ

ಬೆಳೆದು ನಿಂತಿರುವ ಬೆಳೆಗಳ ಸಂರಕ್ಷಣೆಗೆ ಹೇಮಾವತಿ ಜಲಾಶಯದಿಂದ ಎಡದಂಡೆ ಕಾಲುವೆಗೆ ನೀರು ಹರಿಸಿ ತಾಲೂಕಿನ ಕೆರೆ-ಕಟ್ಟೆಗಳನ್ನು ತುಂಬಿಸಿ, ರೈತರ ಬೆಳೆಗಳನ್ನು ರಕ್ಷಿಸುವಂತೆ ಶಾಸಕ ಎಚ್.ಟಿ.ಮಂಜು ರಾಜ್ಯ ವಿಧಾನಸಭೆಯಲ್ಲಿ ಆಗ್ರಹಿಸಿದರು.

ವಿಧಾನ ಸಭೆಯಲ್ಲಿ ಈ ಕುರಿತು ಧ್ವನಿಯೆತ್ತಿದ ಸ್ಥಳೀಯ ಶಾಸಕ ಎಚ್.ಟಿ.ಮಂಜು, ತಾಲೂಕಿನ ಸಾವಿರಾರು ಎಕರೆ ಪ್ರದೇಶದಲ್ಲಿ ಕಬ್ಬು, ಭತ್ತ ಮತ್ತು ತೆಂಗು ಮತ್ತಿತರ ತೋಟಗಾರಿಕಾ ಬೆಳೆಗಳ ರಕ್ಷಣೆ ಮಾಡಿಕೊಳ್ಳಲು ರೈತರು ನೀರಿಗಾಗಿ ಕಾಯುತ್ತಿದ್ದಾರೆ. ಸಕಾಲದಲ್ಲಿ ಹೇಮೆಯ ನೀರು ಬಾರದಿದ್ದರೆ ಬೆಳೆದು ನಿಂತ ಬೆಳೆಗಳು ಒಣಗಿ ರೈತರು ಸಂಕಷ್ಟಕ್ಕೀಡಾಗುತ್ತಾರೆ ಎಂದು ತಿಳಿಸಿದರು.

ಶಾಸಕರ ಮನವಿಗೆ ಜಲ ಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಅವರ ಪರವಾಗಿ ಉತ್ತರಿಸಿದ ಕಾನೂನು ಸಚಿವ ಎಚ್.ಕೆ.ಪಾಟೀಲ್, ಈ ಹಿಂದಿನ ನೀರಾವರಿ ಸಲಹಾ ಸಮಿತಿ ಸಭೆ ನಿರ್ಣಯದಂತೆ ಹೇಮಾವತಿ ಜಲಾಶಯದಿಂದ 2024ರ ಜುಲೈ 30 ರಿಂದ 2025ರ ಜ.4ರ ರವರೆಗೆ ರಬಿ, ಖಾರೀಫ್ ಮತು ಭತ್ತದ ಬೆಳೆಗೆ ಈಗಾಗಲೇ ನೀರು ಹರಿಸಲಾಗಿದೆ ಎಂದು ತಿಳಿಸಿದ್ದಾರೆ.

ಪ್ರಸ್ತುತ ಜಲಾಶಯದಲ್ಲಿ 20.66 ಟಿ.ಎಂ.ಸಿ ನೀರಿನ ಸಂಗ್ರಹವಿದೆ. ಸದರಿ ನೀರನ್ನು ಹಾಸನ, ಮಂಡ್ಯ ಮತ್ತು ತುಮಕೂರು ಜಿಲ್ಲೆಗಳ ಕುಡಿಯುವ ನೀರಿನ ಸಮಸ್ಯೆ ಪರಿಹಾರಕ್ಕೆ ಕಾಯ್ದಿರಿಸಬೇಕಾಗಿರುವುದರಿಂದ ಮುಂದಿನ ಮೇ ತಿಂಗಳ ಅಂತ್ಯದವೆರೆಗೂ ಹೇಮಾವತಿ ಜಲಾಶಯದಿಂದ ಕಾಲುವೆಗಳಿಗೆ ನೀರು ಹರಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

ಸಚಿವರ ಉತ್ತರಕ್ಕೆ ತೃಪ್ತರಾಗದ ಶಾಸಕ ಎಚ್.ಟಿ.ಮಂಜು, ಈ ಭಾಗದ ನದಿ ಅಣೆಕಟ್ಟೆ ನಾಲೆಗಳ ರೈತರು ಯಾವಾಗಲೂ ಎರಡು ಬೆಳೆ ಭತ್ತ ಬೆಳೆಯುತ್ತಿದ್ದಾರೆ. ತಾಲೂಕಿನ ನದಿ ಅಣೆಕಟ್ಟೆ ನಾಲೆಗಳ ವ್ಯಾಪ್ತಿ 15 ಸಾವಿರ ಎಕರೆ ಪ್ರದೇಶದಲ್ಲಿ ಕಬ್ಬು, ತೆಂಗು ಮುಂತಾದ ತೋಟಗಾರಿಕಾ ಬೆಳೆಗಳಿವೆ. ಈ ಬೆಳೆಗಳ ಸಂರಕ್ಷಣೆ ಮಾಡಬೇಕು ಎಂದು ಕೋರಿದರು.

ಈ ನಾಲಾ ವ್ಯಾಪ್ತಿಯ ರೈತರು ಭತ್ತದ ಒಟ್ಟಲು ಹಾಕಿ ನಾಟಿ ಮಾಡಲು ನೀರಿಗಾಗಿ ಕಾಯುತ್ತಿದ್ದಾರೆ. ತಕ್ಷಣ ನಾಲೆಗಳಿಗೆ ನೀರು ಹರಿಸಿ ತಾಲೂಕಿನ ಕೆರೆ -ಕಟ್ಟೆಗಳನ್ನು ಹೇಮೆಯ ನೀರಿನಿಂದ ತುಂಬಿಸಿ ರೈತರನ್ನು ರಕ್ಷಿಸಬೇಕು ಎಂದು ಆಗ್ರಹಿಸಿದರು.