ಮೇ ೩೧ರ ವರೆಗೆ ವಿಜಯನಗರ ಕಾಲುವೆಗೆ ನೀರು ಹರಿಸಿ

| Published : Nov 16 2023, 01:16 AM IST

ಸಾರಾಂಶ

೧೧ ತಿಂಗಳು ಕಾಲ ನೀರು ಪಡೆಯುವ ಮೂಲಭೂತ ಹಕ್ಕು ವಿಜಯನಗರ ಕಾಲುವೆಗಳ ಭಾಗದ ರೈತರದ್ದಾಗಿದೆ. ಮೇ ೩೧ರ ವರೆಗೆ ನೀರು ಹರಿಸಲು ಕ್ರಮ ವಹಿಸಬೇಕು. ಈ ವಿಚಾರವಾಗಿ ತಾತ್ಸಾರ ಧೋರಣೆ ಅನುಸರಿಸಿದರೆ ಮುಂದಿನ ದಿನಗಳಲ್ಲಿ ಹೊಸಪೇಟೆ ಬಂದ್ ಮತ್ತು ಹೆದ್ದಾರಿ ಬಂದ್ ಚಳವಳಿ ಹಮ್ಮಿಕೊಳ್ಳಲಾಗುವುದು ಎಂದು ರೈತರು ಎಚ್ಚರಿಕೆ ನೀಡಿದ್ದಾರೆ.

ಕನ್ನಡಪ್ರಭ ವಾರ್ತೆ ಹೊಸಪೇಟೆವಿಜಯನಗರ ಕಾಲುವೆಗಳಿಗೆ ಮೇ ೩೧ರ ವರೆಗೆ ನೀರು ಹರಿಸಬೇಕು ಎಂದು ಒತ್ತಾಯಿಸಿ ಹೊಸಪೇಟೆ ರೈತ ಸಂಘದ ವತಿಯಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಬುಧವಾರ ರೈತರು ಪ್ರತಿಭಟನೆ ನಡೆಸಿದರು.

ವಿಜಯನಗರ ಕಾಲುವೆಗಳಾದ ರಾಯ, ಬಸವ, ಬೆಲ್ಲ, ತುರ್ತಾ ಹಾಗೂ ಕಾಳಘಟ್ಟ ಕಾಲುವೆಗಳಿಗೆ ಪ್ರತಿದಿನ ೨೦೦ ಕ್ಯುಸೆಕ್‌ ನೀರು ಹರಿಸಬೇಕು. ಈ ಮೂಲಕ ೩೩ ಹಳ್ಳಿಗಳ ಜನ, ಜಾನುವಾರುಗಳಿಗೆ ಕುಡಿಯುವ ನೀರು ಮತ್ತು ರೈತರ ಬೆಳೆಗಳನ್ನು ಸಂರಕ್ಷಣೆಗೆ ಕ್ರಮ ವಹಿಸಬೇಕು ಎಂದು ಆಗ್ರಹಿಸಿದರು.

ತುಂಗಭದ್ರಾ ಅಣೆಕಟ್ಟು ನಿರ್ಮಾಣ ಪೂರ್ವದಿಂದಲೂ ವಿಜಯನಗರ ಕಾಲುವೆಗಳಾದ ರಾಯ, ಬಸವ, ಬೆಲ್ಲ, ತುರ್ತಾ ಮತ್ತು ಕಾಳಘಟ್ಟ ಕಾಲುವೆಗಳಿಂದ ನೀರನ್ನು ಪಡೆಯುವ ರೈತರು ನಿರಂತರವಾಗಿ ಬಹುವಾರ್ಷಿಕ ಬೆಳೆಗಳನ್ನು ಬೆಳೆಯುತ್ತಿದ್ದಾರೆ.

ವಿಜಯನಗರ ಕಾಲುವೆಗಳಿಗೆ ೭ ಟಿಎಂಸಿ ನೀರು ವರ್ಷದ ೧೧ ತಿಂಗಳವರೆಗೆ ನಿಗದಿಯಾಗಿದೆ. ೧೯೫೬ರಲ್ಲಿ ಮೈಸೂರು ಮತ್ತು ಆಂಧ್ರಪ್ರದೇಶಗಳ ನಡುವೆ ಆದ ನೀರಿನ ಹಂಚಿಕೆಯ ಒಪ್ಪಂದ ಪ್ರಕಾರ ವಿಜಯನಗರ ಕಾಲುವಗಳಿಗೆ ೧೧ ತಿಂಗಳು ನೀರನ್ನು ಹರಿಸಲು ಒಪ್ಪಂದವಾಗಿದೆ ಎಂದು ರೈತರು ಮನವಿಯಲ್ಲಿ ಒತ್ತಾಯಿಸಿದರು.

ಈ ಹಿಂದೆಯೂ ಜಲಾಶಯದಲ್ಲಿ ಎಷ್ಟೇ ನೀರಿನ ಕೊರತೆ ಇದ್ದರೂ ವಿಜಯನಗರ ಕಾಲುವೆಗಳಿಗೆ ನೀರು ಹರಿಸುವುದನ್ನು ನೀರಾವರಿ ಸಲಹಾ(ಐಸಿಸಿ) ಸಮಿತಿ ಸ್ಥಗಿತ ಮಾಡುವ ತೀರ್ಮಾನವನ್ನು ಎಂದೂ ತೆಗೆದುಕೊಂಡಿಲ್ಲ. ಆದರೆ, ಕಳೆದ ಅ. ೫ರಂದು ಬೆಂಗಳೂರಿನಲ್ಲಿ ನಡೆದ ಐಸಿಸಿ ಸಭೆಯಲ್ಲಿ ಕಾಲುವೆ ಆಧುನೀಕರಣ ಸಲುವಾಗಿ ಮೇ ತಿಂಗಳವರೆಗೆ ನೀರು ಹರಿಸದಿರಲು ತೀರ್ಮಾನಿಸಲಾಗಿದೆ. ಈ ತೀರ್ಮಾನವನ್ನುರೈತರು ಒಪ್ಪುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

೧೧ ತಿಂಗಳು ಕಾಲ ನೀರು ಪಡೆಯುವ ಮೂಲಭೂತ ಹಕ್ಕು ವಿಜಯನಗರ ಕಾಲುವೆಗಳ ಭಾಗದ ರೈತರದ್ದಾಗಿದೆ. ಮೇ ೩೧ರ ವರೆಗೆ ನೀರು ಹರಿಸಲು ಕ್ರಮ ವಹಿಸಬೇಕು. ಈ ವಿಚಾರವಾಗಿ ತಾತ್ಸಾರ ಧೋರಣೆ ಅನುಸರಿಸಿದರೆ ಮುಂದಿನ ದಿನಗಳಲ್ಲಿ ಹೊಸಪೇಟೆ ಬಂದ್ ಮತ್ತು ಹೆದ್ದಾರಿ ಬಂದ್ ಚಳವಳಿ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.

ಮುಖಂಡರಾದ ಗೋಸಲ ಭರಮಪ್ಪ, ಉತ್ತಂಗಿ ಕೊಟ್ರೇಶ್, ಗಾದಿಲಿಂಗಪ್ಪ, ಅಂಜಿನಪ್ಪ, ಬಿ. ನಾಗರಾಜ, ರಾಂಪುರ ಯಲ್ಲಪ್ಪ, ಮಟ್ಟೆ ಮೈಲಾರಿ, ಆರ್. ಕೊಟ್ರೇಶ್, ರಾಮನಗೌಡ, ಎಸ್. ಗಾಳೆಪ್ಪ, ಪ್ರಶಾಂತ್ ಸಿಂಗ್, ಡಿ. ಜಂಬಯ್ಯ, ಬಿ. ಚಂದ್ರಶೇಖರ್ ಸೇರಿದಂತೆ ಹೊಸಪೇಟೆ ಹಾಗೂ ಕಮಲಾಪುರ ಭಾಗದ ರೈತ ಮುಖಂಡರು ಇದ್ದರು.