ಸಾರಾಂಶ
ಅಡಕೆ ಕೃಷಿಕರಿಗೆ ಪರಿಹಾರ ಘೋಷಣೆ ಮಾಡುವಂತೆ ಪತ್ರ ಮುಖೇನ ಕರ್ನಾಟಕ ಮತ್ತು ಕೇರಳ ರಾಜ್ಯಗಳ ಮುಖ್ಯಮಂತ್ರಿಯವರಲ್ಲಿ ಕ್ಯಾಂಪ್ಕೊ ವಿನಂತಿ ಮಾಡಿದೆ.
ಮಂಗಳೂರು: ಬೇಸಗೆಯಲ್ಲಿ ಬಿಸಿಲ ಬೇಗೆಗೆ ನೀರಿಲ್ಲದೇ ಬಸವಳಿದ ಅಡಕೆ ಬೆಳೆಗಾರ, ಮುಂಗಾರಿನ ಆರ್ಭಟಕ್ಕೆ ಅಡಕೆಗೆ ತಗುಲಿದ ಕೊಳೆ ರೋಗದ ಆಘಾತದಿಂದ ಕಣ್ಣೀರಲ್ಲಿ ಕೈತೊಳೆಯುವಂತಾಗಿದೆ. ನಷ್ಟ ಅನುಭವಿಸಿದ ರೈತರಿಗೆ ಪರಿಹಾರ ಘೋಷಿಸುವಂತೆ ಕರ್ನಾಟಕ ಮತ್ತು ಕೇರಳ ಮುಖ್ಯಮಂತ್ರಿಗಳಿಗೆ ಕ್ಯಾಂಪೊ ಅಧ್ಯಕ್ಷ ಎ. ಕಿಶೋರ್ ಕುಮಾರ್ ಕೊಡ್ಗಿ ಅವರು ಪತ್ರದ ಮೂಲಕ ಮನವಿ ಮಾಡಿದ್ದಾರೆ.
ಹವಾಮಾನ ವೈಪರೀತ್ಯಗಳಿಂದ ಭೂ ತಾಪಮಾನ ಹೆಚ್ಚಾಗಿ ಏಪ್ರಿಲ್ -ಮೇ ತಿಂಗಳಲ್ಲಿ ಅಡಕೆ ಕಾಯಿ ಉದುರುವಿಕೆಯಿಂದಾಗಿ ಅರ್ಧಕ್ಕರ್ಧ ಬೆಳೆ ನಾಶವಾಗಿತ್ತು. ಲಕ್ಷಾಂತರ ಹಣ ವ್ಯಯಿಸಿ ನೀರಿನ ವ್ಯವಸ್ಥೆ ಕಲ್ಪಿಸಿ ಬೆಳೆ ರಕ್ಷಣೆ ಮಾಡಲು ಹೆಣಗಾಡಿದ ರೈತ, ಈಗ ತೀವ್ರತರದಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಅಳಿದುಳಿದ ಅಡಕೆಗೆ ಕೊಳೆರೋಗ ಹರಡಿ ಬೆಳೆಗಾರರ ಬಾಳನ್ನು ಅಕ್ಷರಶಃ ನರಕ ಸದೃಶವಾಗಿಸಿದೆ.ಕ್ಯಾಂಪ್ಕೊ ಮತ್ತು ಇತರ ಸಹಕಾರಿ ಸಂಸ್ಥೆಗಳು ಸರ್ವ ಪ್ರಯತ್ನಗಳ ಮೂಲಕ ಕೆ.ಜಿ ಗೆ 400 ರು. ಆಸುಪಾಸಿನಲ್ಲಿ ಅಡಕೆಯ ದರವನ್ನು ಸ್ಥಿರೀಕರಿಸಿ ರೈತರ ಬೆಂಬಲಕ್ಕೆ ನಿಂತಿವೆ. ಆದರೂ, ಅಡಕೆ ಉದುರುವಿಕೆ ಮತ್ತು ಕೊಳೆರೋಗ ಬಾಧೆಯಿಂದ ಬೆಳೆ ನಷ್ಟವಾಗಿ ಕೈಗೆ ಬಂದ ತುತ್ತು ಬಾಯಿಗಿಲ್ಲ ಎಂಬ ಸ್ಥಿತಿ ಬೆಳೆಗಾರರದ್ದಾಗಿದೆ. ರೈತರ ಸಮಸ್ಯೆಗಳಿಗೆ ಮುಖ್ಯಮಂತ್ರಿಗಳ ಸಹಾಯ ಹಸ್ತಕ್ಕಾಗಿ ಅಡಕೆ ಬೆಳೆಗಾರರು ಎದುರು ನೋಡುತ್ತಿದ್ದಾರೆ.
ರಾಜ್ಯದಲ್ಲಿ ಅಡಕೆ ಬೆಳೆ ನಾಶದ ಬಗ್ಗೆ ತುರ್ತು ಸಮೀಕ್ಷೆ ನಡೆಸುವಂತೆ ಸಂಬಂಧಪಟ್ಟ ಇಲಾಖೆಗೆ ನಿರ್ದೇಶನ ನೀಡಿ, ಆ ಪ್ರಕಾರ ಅಡಕೆ ಕೃಷಿಕರಿಗೆ ಪರಿಹಾರ ಘೋಷಣೆ ಮಾಡುವಂತೆ ಪತ್ರ ಮುಖೇನ ಕರ್ನಾಟಕ ಮತ್ತು ಕೇರಳ ರಾಜ್ಯಗಳ ಮುಖ್ಯಮಂತ್ರಿಯವರಲ್ಲಿ ಕ್ಯಾಂಪ್ಕೊ ವಿನಂತಿ ಮಾಡಿದೆ.