ಹಿಂದೂ ಮಹಾಗಣಪತಿ ಚಿತ್ರದುರ್ಗ ಪ್ರವೇಶ

| Published : Sep 05 2024, 12:32 AM IST

ಸಾರಾಂಶ

ಚಿತ್ರದುರ್ಗ ನಗರ ಪ್ರವೇಶಿಸಿದ ಹಿಂದೂ ಮಹಾಗಣಪತಿಯ ಅದ್ದೂರಿಯಾಗಿ ಸ್ವಾಗತಿಸಲಾಯಿತು.

ಕನ್ನಡಪ್ರಭ ವಾರ್ತೆ ಚಿತ್ರದುರ್ಗ

ರಾಜ್ಯವ್ಯಾಪಿ ಲಕ್ಷಾಂತರ ಜನರ ಮನಸೂರೆಗೊಂಡಿರುವ ಚಿತ್ರದುರ್ಗದ ಹಿಂದೂ ಮಹಾಗಣಪತಿ ಬುಧವಾರ ಸಂಜೆ ನಗರ ಪ್ರವೇಶಿಸಿತು.

ನಗರದ ಹೊರವಲಯದಲ್ಲಿರುವ ಮಾದಾರ ಚನ್ನಯ್ಯ ಗುರುಪೀಠದಿಂದ ಮೆರವಣಿಗೆ ಮೂಲಕ ಹೊರಟ ಹಿಂದೂ ಮಹಾ ಗಣಪತಿ ಹೆದ್ದಾರಿಯಿಂದ ಚಳ್ಳಕೆರೆ ಗೇಟ್ ಮೂಲಕ ಪಂಚಾಚಾರ್ಯ ಕಲ್ಯಾಣ ಮಂಟಪ ಪಕ್ಕದಲ್ಲಿರುವ ಪೆಂಡಾಲ್‍ಗೆ ಆಗಮಿಸಿತು.

ಕೇಸರಿ ಭಾವುಟ, ಜೈಶ್ರೀರಾಮ್ ಎಂದು ಬರೆದಿದ್ದ ಹನುಮನ ಭಾವಚಿತ್ರವುಳ್ಳ ಭಾವುಟಗಳು, ಶಾರದಾ ಬ್ರಾಸ್ ಬ್ಯಾಂಡ್‍ನ ವಾದ್ಯ ಮೆರವಣಿಗೆಯಲ್ಲಿ ರಾರಾಜಿಸಿದವು. ನೂರಾರು ಬೈಕ್‍ಗಳಲ್ಲಿ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದ ಯುವಕರು ಕುಣಿದು ಕುಪ್ಪಳಿಸಿದರು. ಚಳ್ಳಕೆರೆ ಗೇಟ್‍ನಲ್ಲಿ ಡೊಳ್ಳು, ತಮಟೆ ಮೂಲಕ ಹಿಂದೂ ಮಹಾ ಗಣಪತಿಯನ್ನು ಬರಮಾಡಿಕೊಳ್ಳಲಾಯಿತು.

ಚಿಕ್ಕಬಳ್ಳಾಪುರದಲ್ಲಿ ತಯಾರು ಮಾಡಲಾದ ಗಣಪತಿಯನ್ನು ತೆರೆದ ಲಾರಿಯಲ್ಲಿ ತರಲಾಯಿತು. ಗರುಡನ ಮೇಲೆ ವಿರಾಜಮಾನವಾಗಿರುವ ಹಿಂದೂ ಮಹಾಗಣಪತಿಯನ್ನು ವೀಕ್ಷಿಸಲು ಸಹಸ್ರಾರು ಜನ ಜಮಾಯಿಸಿದ್ದರು.

ವಿಶ್ವ ಹಿಂದೂ ಪರಿಷತ್ ಹಾಗೂ ಬಜರಂಗದಳದ ಪ್ರಮುಖರು ಹಿಂದೂ ಮಹಾ ಗಣಪತಿ ಪುರ ಪ್ರವೇಶದಲ್ಲಿ ಭಾಗವಹಿಸಿದ್ದರು. ಜೈನಧಾಮದಲ್ಲಿ ಹಿಂದು ಮಹಾಗಣಪತಿಯನ್ನು ಸ್ಥಾಪನೆ ಮಾಡಲು ಸಕಲ ಸಿದ್ಧತೆ ಮಾಡಲಾಗಿದೆ. ಸಾಗರ, ಕಾರ್ಕಳದಿಂದ ಬಂದ ಶಿಲ್ಪಿಗಳು ಸಭಾ ಮಂಟಪ ನಿರ್ಮಾಣ ಮಾಡುತ್ತಿದ್ದಾರೆ. ಗಣಪತಿ ಕುಳ್ಳರಿಸುವ ಸಭಾ ಮಂಟಪದಲ್ಲಿ ದಶಾವತಾರದ ಮಂಟಪವನ್ನು ನಿರ್ಮಾಣ ಮಾಡಲಾಗುತ್ತಿದೆ. ಮಂಟಪ ಮಹಾರಾಜರ ಆರಮನೆಯ ಮಾದರಿಯನ್ನು ಹೋಲುತ್ತಿದೆ.

21 ದಿನಗಳ ಕಾಲ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. 26 ರಂದು ಕನಕ ವೃತ್ತದಿಂದ ಹೊರಡುವ ಬೈಕ್ ರ‍್ಯಾಲಿ ನಗರದೆಲ್ಲೆಡೆ ಸಂಚರಿಸಲಿದ್ದು, 28 ರಂದು ಶೋಭಾಯಾತ್ರೆ ಮೂಲಕ ಗಣೇಶ ಮೂರ್ತಿ ವಿಸರ್ಜನೆ ಮಾಡಲಾಗುತ್ತದೆ.