ರಾಜ್ಯ ಸರ್ಕಾರ ರೈತರಿಗಾಗಿ ಬಿಡುಗಡೆ ಮಾಡಿರುವ ಬೆಳೆಹಾನಿ ಪರಿಹಾರದ ಹಣವು ರಾಷ್ಟ್ರೀಯ ಹಾಗೂ ಗ್ರಾಮೀಣ ಬ್ಯಾಂಕುಗಳು ಸಾಲದ ಖಾತೆಗಳಿಗೆ ಹೊಂದಿಸಿಕೊಳ್ಳುವುದನ್ನು ಕೂಡಲೇ ನಿಲ್ಲಿಸುವಂತೆ ಜೆಡಿಎಸ್ ಶಾಸಕ ಶರಣಗೌಡ ಕಂದಕೂರ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದು ಆಗ್ರಹಿಸಿದ್ದಾರೆ.
ಕನ್ನಡಪ್ರಭ ವಾರ್ತೆ ಯಾದಗಿರಿ
ರಾಜ್ಯ ಸರ್ಕಾರ ರೈತರಿಗಾಗಿ ಬಿಡುಗಡೆ ಮಾಡಿರುವ ಬೆಳೆಹಾನಿ ಪರಿಹಾರದ ಹಣವು ರಾಷ್ಟ್ರೀಯ ಹಾಗೂ ಗ್ರಾಮೀಣ ಬ್ಯಾಂಕುಗಳು ಸಾಲದ ಖಾತೆಗಳಿಗೆ ಹೊಂದಿಸಿಕೊಳ್ಳುವುದನ್ನು ಕೂಡಲೇ ನಿಲ್ಲಿಸುವಂತೆ ಜೆಡಿಎಸ್ ಶಾಸಕ ಶರಣಗೌಡ ಕಂದಕೂರ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದು ಆಗ್ರಹಿಸಿದ್ದಾರೆ.ಈ ಕುರಿತು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿರುವ ಅವರು, ಈ ಕುರಿತು ಸಂಬಂಧಪಟ್ಟವರಿಗೆ ಕೂಡಲೇ ಕಟ್ಟುನಿಟ್ಟಿನ ಸೂಚನೆ ನೀಡಬೇಕು. ನಿರ್ಲಕ್ಷ್ಯ ವಹಿಸಿದರೆ ರೈತರ ಜೊತೆ ತಾವೇ ಖುದ್ದಾಗಿ ಬ್ಯಾಂಕುಗಳ ಮುಂದೆ ಮುಷ್ಕರ ನಡೆಸುವುದಾಗಿ ಶಾಸಕ ಕಂದಕೂರ ಪತ್ರದಲ್ಲಿ ಎಚ್ಚರಿಸಿದ್ದಾರೆ.
ಜಿಲ್ಲೆಯ 1,22,827 ರೈತರಿಗೆ ಮೊದಲ ಕಂತಿನಲ್ಲಿ 124. 01 ಕೋಟಿ ರು.ಗಳ ಬೆಳೆಹಾನಿ ಪರಿಹಾರದ ಹಣ ನೇರವಾಗಿ ರೈತರ ಖಾತೆಗಳಿಗೆ ಜಮಾ ಮಾಡಲಾಗಿದ್ದು, ಮುಂದೆ ಇನ್ನೂ 2ನೇ ಕಂತಿನಲ್ಲಿ 99 ಕೋಟಿ ರು. ಬಿಡುಗಡೆಯಾಗಲಿದೆ. ಆದರೆ, ಕಷ್ಟದಲ್ಲಿರುವ ರೈತರಿಗೆ ನೆರವಾಗಲು ಸರ್ಕಾರ ಪರಿಹಾರ ನೀಡಿದರೆ ಅದನ್ನು ಸಾಲದ ಬಾಬ್ತಿಗೆ ಜಮಾ ಮಾಡಿಕೊಳ್ಳುತ್ತಿರುವ ಬ್ಯಾಂಕಿನವರ ಕಾರ್ಯವೈಖರಿ ಸರಿಯಲ್ಲ ಎಂದು ಪತ್ರದಲ್ಲಿ ತಿಳಿಸಿರುವ ಅವರು, ಇಂತಹ ಕ್ರಮಗಳಿಂದ ನೊಂದ ಅಥವಾ ಆತಂಕಗೊಳ್ಳುವ ರೈತರು ಆತ್ಮಹತ್ಯೆ ದಾರಿ ತುಳಿಯಲು ಪ್ರೇರಣೆ ನೀಡಿದಂತಿದೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.ಇಂತಹ ಕ್ರಮಗಳಿಂದ ರೈತರು ಆತ್ಮಹತ್ಯೆ ಮಾಡಿಕೊಂಡರೆ ನೇರವಾಗಿ ಬ್ಯಾಂಕಿನವರೇ ಹೊಣೆಯಾಗುತ್ತಾರೆ. ಕಾರಣ, ಕೂಡಲೇ ಜಿಲ್ಲಾಧಿಕಾರಿಗಳು ಸಂಬಂಧಪಟ್ಟ ಬ್ಯಾಂಕುಗಳ ವ್ಯವಸ್ಥಾಪಕರಿಗೆ ಆದೇಶ ನೀಡಿ ಆ ಪ್ರವೃತ್ತಿ ನಿಲ್ಲಿಸಬೇಕು ಮತ್ತು ಕಷ್ಟದ ಸಮಯದಲ್ಲಿ ಸ್ವಲ್ಪ ಸಹಾಯವಾಗಲಿ ಎಂದು ಸರ್ಕಾರ ಪರಿಹಾರ ನೀಡಿದರೆ ಅದನ್ನು ಮುಗುಮ್ಮಾಗಿ ಸಾಲದ ಖಾತೆಗಳಿಗೆ ಹೊಂದಾಣಿಕೆ ಮಾಡಿಕೊಳ್ಳಲು ಮುಂದಾಗಿರುವ ಬ್ಯಾಂಕುಗಳ ಮೇಲೆ ಸೂಕ್ತ ಕಾನೂನಿನ ಕ್ರಮ ಜರುಗಿಸಬೇಕೆಂದು ಶಾಸಕ ಕಂದಕೂರ ಆಗ್ರಹಿಸಿದ್ದಾರೆ.