ಇತಿಹಾಸದಲ್ಲಿ ನೋಡಿದಂತೆ ಹಿಂದೂ ಧರ್ಮ ಶ್ರೇಷ್ಠತೆಯನ್ನು ಎತ್ತಿ ಹಿಡಿದ ಧರ್ಮ. ನಾವು ನಮ್ಮ ಧರ್ಮ ಪಾಲನೆ ಮಾಡುವುದರೊಂದಿಗೆ ಹಲವು ಧರ್ಮಗಳನ್ನೂ ಸಹ ಒಪ್ಪಿದ್ದೇವೆ ಎಂದು ಹೊರನಾಡು ಅನ್ನಪೂರ್ಣೇಶ್ವರಿ ದೇವಸ್ಥಾನದ ಟ್ರಸ್ಟಿ ಗಿರಿಜಾಶಂಕರ ಜೋಷಿ ಹೇಳಿದರು.

ಬಾಳೆಹೊನ್ನೂರು: ಇತಿಹಾಸದಲ್ಲಿ ನೋಡಿದಂತೆ ಹಿಂದೂ ಧರ್ಮ ಶ್ರೇಷ್ಠತೆಯನ್ನು ಎತ್ತಿ ಹಿಡಿದ ಧರ್ಮ. ನಾವು ನಮ್ಮ ಧರ್ಮ ಪಾಲನೆ ಮಾಡುವುದರೊಂದಿಗೆ ಹಲವು ಧರ್ಮಗಳನ್ನೂ ಸಹ ಒಪ್ಪಿದ್ದೇವೆ ಎಂದು ಹೊರನಾಡು ಅನ್ನಪೂರ್ಣೇಶ್ವರಿ ದೇವಸ್ಥಾನದ ಟ್ರಸ್ಟಿ ಗಿರಿಜಾಶಂಕರ ಜೋಷಿ ಹೇಳಿದರು.

ಪಟ್ಟಣದ ಶ್ರೀ ದುರ್ಗಾದೇವಿ ನವರಾತ್ರಿ ಪೂಜಾ ಸಮಿತಿ ಮಾರ್ಕಾಂಡೇಶ್ವರ ದೇವಸ್ಥಾನದ ಆವರಣದಲ್ಲಿ ಸೋಮವಾರದಿಂದ ಆಯೋಜಿಸಿರುವ ಹದಿನಾರನೇ ವರ್ಷದ ನವರಾತ್ರಿ ಮಹೋತ್ಸವಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.ಹಿಂದೆ ಹಲವು ಬಾರಿ ನಮ್ಮ ಧರ್ಮದ ಮೇಲೆ ಆಕ್ರಮಣವಾಗಿದೆ. ಇಂದಿಗೂ ಅದು ಮುಂದುವರಿದಿದೆ. ಆದರೂ ನಮ್ಮ ಧರ್ಮಕ್ಕೆ ಯಾವುದೇ ತೊಂದರೆಯಾಗಿಲ್ಲ. ನಾವು ಇದನ್ನು ಗಮನದಲ್ಲಿಟ್ಟುಕೊಂಡು ನಮ್ಮ ಧರ್ಮವನ್ನು ಉಳಿಸುವ ಕೆಲಸವನ್ನು ಮಾಡಬೇಕಿದೆ. ಧಾರ್ಮಿಕ ಕಾರ್ಯಗಳ ಮೂಲಕ ಧರ್ಮವನ್ನು ಉಳಿಸಲು ಸಾಧ್ಯವಿದೆ ಎಂದರು.ಧರ್ಮ ಕಾರ್ಯಗಳು ನಿರಂತರವಾಗಿ ನಡೆಯುವುದರಿಂದ ಸಂಸ್ಕೃತಿ ಅಳಿಸಿ ಹೋಗಲ್ಲ. ಆಧುನಿಕತೆ ಬಂದಂತೆ ಧರ್ಮದ ಆಚರಣೆ, ಸಂಸ್ಕಾರ, ಸಂಸ್ಕೃತಿಗಳಿಗೆ ಒಂದಷ್ಟು ಕಪ್ಪು ಬಟ್ಟೆ ಮುಚ್ಚಿ ಆಧುನೀಕತೆಗೆ ಒಗ್ಗುತ್ತ ಹೋಗುತ್ತೇವೆ. ಅದರ ಜೊತೆಗೆ ಧರ್ಮ ಕಾರ್ಯಗಳಲ್ಲಿ ಪಾಲ್ಗೊಂಡಾಗ ಜೀವನದ ಮೌಲ್ಯಗಳನ್ನು ಕಾಪಾಡಿ ಶ್ರೇಯಸ್ಸನ್ನು ಪಡೆಯಲು ಸಾಧ್ಯವಾಗಲಿದೆ ಎಂದು ತಿಳಿಸಿದರು. ದುರ್ಗಾಪರಮೇಶ್ವರಿ ವಿಗ್ರಹ ಪ್ರತಿಷ್ಠಾಪನೆ:

ಸೋಮವಾರ ಮುಂಜಾನೆ ಕ್ಷೇತ್ರನಾಥ ಮಾರ್ಕಾಂಡೇಶ್ವರ ಸ್ವಾಮಿಗೆ ರುದ್ರಾಭಿಷೇಕ, ನಾಗದೇವರಿಗೆ ಕ್ಷೀರಾಭಿಷೇಕ, ಮೃತ್ಯಂಬಿಕಾ ಅಮ್ಮನವರಿಗೆ ಅಭಿಷೇಕ, ಸಹಸ್ರನಾಮಾರ್ಚನೆ ಹಾಗೂ ಫಲಸಮರ್ಪಣೆ, ದುರ್ಗಾ ಸನ್ನಿಧಿಯಲ್ಲಿ ಗಣಹೋಮ ನಡೆಸಿ ವಿವಿಧ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ದುರ್ಗಾಪರಮೇಶ್ವರಿ ವಿಗ್ರಹ ಪ್ರತಿಷ್ಠಾಪಿಸಲಾಯಿತು.

ಈ ಸಂದರ್ಭದಲ್ಲಿ ಹೊರನಾಡು ಅನ್ನಪೂರ್ಣೇಶ್ವರಿ ದೇವಾಲಯದಿಂದ ತಂದಿದ್ದ ಬಾಗಿನವನ್ನು ದುರ್ಗಾದೇವಿ ಮತ್ತು ಮೃತ್ಯಂಬಿಕಾ ಅಮ್ಮನವರ ದೇವಸ್ಥಾನಕ್ಕೆ ಗಿರಿಜಾಶಂಕರ ಜೋಷಿ ದಂಪತಿ ಸಮರ್ಪಿಸಿದರು.

ಮಾರ್ಕಾಂಡೇಶ್ವರ ದೇವಾಲಯ ಸಮಿತಿಯ ಅಧ್ಯಕ್ಷ ಎಚ್.ಡಿ.ನಾಗೇಶ್ ಹೆಗ್ಡೆ, ದುರ್ಗಾ ಸಮಿತಿಯ ಕಾರ್ಯಾಧ್ಯಕ್ಷ ಬಿ.ಚನ್ನಕೇಶವ, ಪ್ರಧಾನ ಕಾರ್ಯದರ್ಶಿ ಆರ್.ಡಿ.ಮಹೇಂದ್ರ, ಕೋಶಾಧಿಕಾರಿ ಭಾಸ್ಕರ್ ವೆನಿಲ್ಲಾ, ಜಂಟಿ ಕಾರ್ಯದರ್ಶಿ ಪ್ರಭಾಕರ್ ಪ್ರಣಸ್ವಿ, ಎಚ್.ಡಿ.ಸತೀಶ್, ಉಪಾಧ್ಯಕ್ಷ ಶಿವರಾಮ ಶೆಟ್ಟಿ, ಕೆ.ಟಿ.ವೆಂಕಟೇಶ್, ಸಹ ಕೋಶಾಧಿಕಾರಿ ಚೈತನ್ಯ ವೆಂಕಿ, ಉಪೇಂದ್ರ, ಎಚ್.ಎಚ್.ಕೃಷ್ಣಮೂರ್ತಿ, ಡಿ.ಎನ್.ಸುಧಾಕರ್, ಶ್ರೀಕಾಂತ್, ಬಿ.ಕೆ.ನಾಗರಾಜ್, ನಾರಾಯಣ ಶೆಟ್ಟಿ, ಕೆ.ಪ್ರಶಾಂತ್‌ಕುಮಾರ್, ಬಿ.ಗಿರೀಶ್, ಮಂಜು ಹೊಳೆಬಾಗಿಲು ಸೇರಿದಂತೆ ಸಮಿತಿ ಸದಸ್ಯರು ಪ್ರತಿಷ್ಠಾಪನಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಪ್ರಧಾನ ಅರ್ಚಕರಾದ ಸುಬ್ರಹ್ಮಣ್ಯಭಟ್ ನೇತೃತ್ವದಲ್ಲಿ ಪುರೋಹಿತರು ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಿದರು. ಮಧ್ಯಾಹ್ನ ಹಂಸವಾಹಿನಿ ಬ್ರಾಹ್ಮೀ ಪೂಜೆ, ಸಪ್ತಶತೀ ಪಾರಾಯಣ ಪೂಜೆ ನಡೆಯಿತು.

ಸೆ.23ರ ಮಂಗಳವಾರ ಬೆಳಿಗ್ಗೆ 8.30ರಿಂದ ಮಧ್ಯಾಹ್ನದವರೆಗೆ ವೃಷಭವಾಹಿನಿ, ಮಾಹೇಶ್ವರಿ ಪೂಜಾ ಪಾರಾಯಣ, ಸಂಜೆ 6ರಿಂದ ಭಕ್ತಾಧಿಗಳಿಂದ ಪೂಜಾ ಸೇವೆ ಮಹಾಮಂಗಳಾರತಿ ನಡೆಯಲಿದೆ. ರಾತ್ರಿ 8 ಗಂಟೆಯಿಂದ ಹೇರೂರು ಎ.ಜಿ.ಶಿವಾನಂದಭಟ್ ನೇತೃತ್ವದಲ್ಲಿ ಸುಗಮ ಸಂಗೀತ ವೈಭವ ಕಾರ್ಯಕ್ರಮ ನಡೆಯಲಿದೆ.