ಸಾರಾಂಶ
ಲಕ್ಷ್ಮೇಶ್ವರ: ಸಮಾಜದಲ್ಲಿ ಶಾಂತಿ, ಸಹಬಾಳ್ವೆ ಮೂಡಿಸುವ ನಿಟ್ಟಿನಲ್ಲಿ ಧರ್ಮದ ಜಾಗೃತಿ ಅವಶ್ಯವಾಗಿದೆ. ಪುಟ್ಟರಾಜ ಗವಾಯಿಗಳ ತತ್ವಾದರ್ಶ ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವುದು ಅಗತ್ಯವಾಗಿದೆ ಎಂದು ಬಾಲೆಹೊಸೂರಿನ ದಿಂಗಾಲೇಶ್ವರ ಸ್ವಾಮೀಜಿ ಹೇಳಿದರು.
ಸಮೀಪದ ನೀರಲಗಿ ಗ್ರಾಮದಲ್ಲಿ ಭಾನುವಾರ ಕವಿ ಗವಾಯಿ ಪುಟ್ಟರಾಜರ ಮೂರ್ತಿ ಪ್ರತಿಷ್ಠಾಪನೆ, ಮೈಲಾರಲಿಂಗೇಶ್ವರ ದೇವಸ್ಥಾನದ ಕಳಸಾರೋಹಣ, ಕಲ್ಮೇಶ್ವರ ದೇವಸ್ಥಾನದ ಕಳಸಾರೋಹಣ, ಚೌಡೇಶ್ವರಿ ದೇವರ ಪ್ರಾಣ ಪ್ರತಿಷ್ಠಾಪನೆ ಹಾಗೂ ನಿಜಲಿಂಗ ಮಹಾಸ್ವಾಮಿಗಳ ಗದ್ದುಗೆ ಅನಾವರಣ, ಕರಕಿಕೊಪ್ಪ ಹನಮಪ್ಪನ ಮೂರ್ತಿ ಪ್ರತಿಷ್ಠಾಪನೆ, ಗುರುವಂದನಾ ಹಾಗೂ ಪುರಾಣ ಮಹಾಮಂಗಲ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು.ಸಮಾಜದಲ್ಲಿನ ಹಿರಿಯರ ಮಾತುಗಳಿಗೆ ಗೌರವ ನೀಡುವ ಮೂಲಕ ಧಾರ್ಮಿಕ ಜಾಗೃತಿಯಿಂದ ಗ್ರಾಮದಲ್ಲಿ ಸಾಕಷ್ಟು ಬದಲಾವಣೆಯಾಗುತ್ತವೆ. ಧರ್ಮ ಸಮಾರಂಭದ ಮೂಲಕ ಸಮಾಜದಲ್ಲಿ ಶಾಂತಿ ಸಹಬಾಳ್ವೆ ಮೂಡಿಸಲು ಸಾಧ್ಯ. ಭಾರತದ ಇತಿಹಾಸದಲ್ಲಿ ಮೂರ್ತಿಗಳ ಪ್ರತಿಷ್ಠಾಪನೆ ಮಾಡುವ ಮೂಲಕ ದೇವರ ಆರಾಧನೆ ಮಾಡುವ ಸಂಪ್ರದಾಯ ನಡೆದುಕೊಂಡು ಬಂದಿದೆ. ಗ್ರಾಮದಲ್ಲಿ ಪುಟ್ಟರಾಜರ ಮೂರ್ತಿ ಪ್ರತಿಷ್ಠಾಪನೆ ಮಾಡಿರುವುದು ಸ್ತುತ್ಯಾರ್ಹ ಸಂಗತಿಯಾಗಿದೆ. ಗ್ರಾಮದ ಯುವಕರು ಉತ್ತಮ ಶಿಕ್ಷಣ ಪಡೆಯುವ ಮೂಲಕ ಸಮಾಜದ ಜಾಗೃತಿ ಮೂಡಿಸುವ ಕಾರ್ಯ ಮಾಡಿ ಮಾದರಿ ಗ್ರಾಮವನ್ನಾಗಿ ಮಾಡುವ ಸಂಕಲ್ಪ ಯುವಕರು ಮಾಡಬೇಕು ಎಂದು ಹೇಳಿದರು.
ಗದುಗಿನ ಪುಟ್ಟರಾಜ ಗವಾಯಿಗಳ ವೀರೇಶ್ವರ ಪುಣ್ಯಾಶ್ರಮದ ಕಲ್ಲಯ್ಯಜ್ಜ ಮಾತನಾಡಿ, ಪುಟ್ಟರಾಜ ಗವಾಯಿಗಳು ಸಮಾಜದಲ್ಲಿನ ಅಂದರ ಬಾಳಿಗೆ ಬೆಳಕು ನೀಡುವ ಮೂಲಕ ಸಮಾಜದಲ್ಲಿ ಜಾಗೃತಿ ಮಾಡಿಸುವ ಕಾರ್ಯ ಮಾಡಿರುವುದು ಗಮನಾರ್ಹ ಸಂಗತಿಯಾಗಿದೆ. ಪುಟ್ಟರಾಜರ ಗವಾಯಿಗಳ ನುಡಿಗಳನ್ನು ನಮ್ಮ ಜೀವನದಲ್ಲಿ ಅವಳವಡಿಸಿಕೊಳ್ಳುವುದು ಅಗತ್ಯವಾಗಿದೆ ಎಂದು ಹೇಳಿದರು.ಸಮಾರಂಭದಲ್ಲಿ ಬೆಳ್ಳಟ್ಟಿ-ನೀರಲಗಿ ಗ್ರಾಮದ ಪೀಠಾಧಿಪತಿ ಬಸವರಾಜ ಮಹಾಸ್ವಾಮಿಗಳು, ಚಿಕ್ಕಮಗಳೂರಿನ ಶಂಕರದೇವರಮಠದ ಚಂದ್ರಶೇಖರ ಸ್ವಾಮಿಗಳು, ನೀಲಗುಂದದ ಗುದ್ನೇಶ್ವರಮಠದ ಪ್ರಭುಲಿಂಗ ಸ್ವಾಮಿಗಳು, ಗುಳೇದಗುಡ್ಡದ ನಾಗಭೂಷಣ ಸ್ವಾಮಿಗಳು ಮಾತನಾಡಿದರು.
ಮಾಜಿ ಶಾಸಕ ಶಿವರಾಜ ಸಜ್ಜನರ, ಬ್ಯಾಡಗಿ ಮಾಜಿ ಶಾಸಕ ವಿ.ಆರ್. ಬಳ್ಳಾರಿ ಗವಿಸಿದ್ದಪ್ಪ ದ್ಯಾಮಣ್ಣವರ ಮಾತನಾಡಿದರು, ಅಗಡಿಯ ಅಕ್ಕಿಮಠದ ಗುರುಲಿಂಗ ಮಹಾಸ್ವಾಮಿಗಳು 21 ದಿನಗಳ ಕಾಲ ನಡೆದ ಪುರಾಣ ಪ್ರವಚನ ಹಾಗೂ ಕಾರ್ಯಕ್ರಮ ನಡೆದು ಬಂದ ದಾರಿಯ ಕುರಿತು ಮಾತನಾಡಿದರು. ಹನಮಂತ ಪೂಜಾರ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂಜೀವ ಈಶಾಪೂರ ಸ್ವಾಗತಿಸಿದರು.ಈ ವೇಳೆ ಜಯಣ್ಣ ಮಾಗಡಿ, ಮಾರುತಿ ಗೊರವರ, ರಮೇಶ ಕೋರಿಶೆಟ್ಟರ ಸೇರಿದಂತೆ ಅನೇಕರು ಇದ್ದರು.
ಮೂರ್ತಿ ಅನಾವರಣ ಕಾರ್ಯಕ್ರಮದಲ್ಲಿ ನೂರಾರು ಮಹಿಳೆಯರು ಪೂರ್ಣಕುಂಭ ಹೊತ್ತು ಸಾಗುತ್ತಿದ್ದ ದೃಶ್ಯ ಮನಮೋಹಕವಾಗಿತ್ತು. ಸಮಾರಂಭದಲ್ಲಿ ಆರೋಗ್ಯ ಶಿಬಿರ ಹಾಗೂ ರಕ್ತದಾನ ಶಿಬಿರ ಏರ್ಪಡಿಸುವ ಮೂಲಕ ಉತ್ತಮ ಆರೋಗ್ಯ ಪ್ರತಿಯೊಬ್ಬರಿಗೂ ಅವಶ್ಯವಾಗಿದೆ. ಕಾರ್ಯಕ್ರಮದಲ್ಲಿ ಸಮಾಜ ಸೇವೆಯಲ್ಲಿ ತೊಂಡಗಿಕೊಂಡ ಮಹನೀಯರನ್ನು ಸನ್ಮಾನಿಸಿದ್ದು ಕಂಡು ಬಂದಿತು.ಸಮಾರಂಭದಲ್ಲಿ ಸಾವಿರಾರು ಭಕ್ತರು ಧರ್ಮ ಜಾಗೃತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಗುರುಗಳ ಆಶೀರ್ವಚನ ಆಲಿಸಿದ್ದು ಕಂಡು ಬಂದಿತು. ಇದೇ ವೇಳೆ ಕಲ್ಲಯ್ಯಜ್ಜನವರ, ಬಸವರಾಜ ಮಹಾಸ್ವಾಮಿಗಳ, ಫಕ್ಕೀರೇಶ್ವರ ಸ್ವಾಮಿಗಳ ತುಲಾಭಾರ ಸೇವೆ ಕೂಡಾ ನೆರವೇರಿಸುವ ಕಾರ್ಯ ಭಕ್ತರು ಮಾಡಿದರು.