ಸಾರಾಂಶ
ವೀರಶೈವ ಲಿಂಗಾಯತ ಧರ್ಮದ ಉಳಿವಿಗಾಗಿ ಹೋರಾಟ ನಡೆಸಬೇಕು.
ಜಿಲ್ಲಾ, ತಾಲೂಕು ಘಟಕದ ಪದಾಧಿಕಾರಿಗಳ ಪದಗ್ರಹಣ ಸಮಾರಂಭಕನ್ನಡಪ್ರಭ ವಾರ್ತೆ ಕೊಪ್ಪಳ
ವೀರಶೈವ ಲಿಂಗಾಯತ ಧರ್ಮದಲ್ಲಿ ವಿಶೇಷ ಚೈತನ್ಯ ಹಾಗೂ ಶಕ್ತಿಯಿದೆ. ಇಂಥ ಶಕ್ತಿಯುತ ಧರ್ಮಗಳ ಉಳಿವು ಸಂಘಟನೆಯಿಂದ ಮಾತ್ರ ಸಾಧ್ಯ ಎಂದು ಮೈನಳ್ಳಿ-ಬಿಕನಳ್ಳಿಯ ಶ್ರೀ ಸಿದ್ದೇಶ್ವರ ಶಿವಾಚಾರ್ಯರು ಹೇಳಿದರು.ನಗರದ ಶ್ರೀ ಶಂಕರಾಚಾರ್ಯ ಸಮುದಾಯ ಭವನದಲ್ಲಿ ನಡೆದ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಜಿಲ್ಲಾ ಹಾಗೂ ತಾಲೂಕು ಘಟಕದ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಸಾನಿಧ್ಯ ವಹಿಸಿ ಮಾತನಾಡಿದರು.
ವೀರಶೈವ ಲಿಂಗಾಯತ ಧರ್ಮದ ಉಳಿವಿಗಾಗಿ ಹೋರಾಟ ನಡೆಸಬೇಕು. ಶರಣ ಸಂಸ್ಕೃತಿ ಸೂರ್ಯ ಚಂದ್ರರವರೆಗೂ ಇರಬೇಕು. ನಮ್ಮ ಸಮಾಜ ಒಗ್ಗೂಡಲು ನಮಗೆ ೧೧೭ ವರ್ಷ ಬೇಕಾಯಿತು. ನಮ್ಮ ಹಿಂದಿನ ಹಿರಿಯರು ಮಾಡಿದ ತಪಸ್ಸಿನ ಫಲವಾಗಿ ಮಹಾಸಭಾ ಬೆಳೆದು ಬಂದಿದೆ. ನಾವೆಲ್ಲಾ ಲಿಂಗಾಯತ, ಲಿಂಗತತ್ವದ ಉಳಿವಿಗಾಗಿ ನಾವು ಸಂಘಟನೆ ಮಾಡಬೇಕು. ಇಲ್ಲಿ ನಮ್ಮ ಹಮ್ಮು ಬಿಮ್ಮು ಬಿಡಬೇಕು. ರಾಜಕೀಯ ದೂರ ಇರಬೇಕು. ಎಲ್ಲರ ಮನಸ್ಸು ಒಂದಾಗಿ ಕೆಲಸ ಮಾಡಬೇಕು. ಪ್ರಭಾವಿ ಲಿಂಗಾಯತ ಎನ್ನುವ ನಿಮ್ಮ ಕೊರಳಲ್ಲಿ ಲಿಂಗ ಇಲ್ಲ. ನಮ್ಮ ಧರ್ಮ ಪರಂಪರೆ ಗುರುಲಿಂಗ ಪೂಜೆ ಮಾಡುವುದು, ಪಾದೋದಕ ಪ್ರಸಾದ ಕೊಡುವುದಾಗಿದೆ. ಒಗ್ಗಟ್ಟಿನಲ್ಲಿ ಬಲವಿಲ್ಲದಿದ್ದರೆ ಸಂಘಟನೆ ಕಟ್ಟುವುದು ಅಸಾಧ್ಯ. ನಾವು ಈಗ ಮೆತ್ತಗೆ ಇದ್ದರೆ ನಡೆಯಲ್ಲ, ಗಟ್ಟಿಯಾಗಬೇಕು. ನಾವು ಸಿಎಂ ಎದುರಿಸುವ ಕೆಲಸ ಮಾಡಬೇಕಿಲ್ಲ. ಅವರ ಜೊತೆ ಹೋಗಬೇಕು. ನಮಗೆ ಸರ್ಕಾರ ಮುಖ್ಯವಲ್ಲ ಧರ್ಮ ಮುಖ್ಯ. ಸರ್ಕಾರ ಬರುತ್ತೆ ಹೋಗುತ್ತೆ, ಆದರೆ ಧರ್ಮ ಕಾಪಾಡಬೇಕಿದೆ. ಧರ್ಮ ಉಳಿಸಬೇಕಿದೆ. ನಮ್ಮಲ್ಲಿ ಸಂಘಟನೆ ಮಾಡುವ ಅಪೇಕ್ಷ ಇರಬೇಕು. ಅಂದರೆ ಒಗ್ಗೂಡಲು ಸಾಧ್ಯ. ನಮ್ಮ ಆಚಾರ ವಿಚಾರ ಎಂದೂ ಬಿಡಬಾರದು ಎಂದು ಹೇಳಿದರು.ಕುಕನೂರಿನ ಡಾ. ಮಹಾದೇವ ದೇವರ ಮಾತನಾಡಿ, ವೀರಶೈವ ಲಿಂಗಾಯತರ ಸಂಘಟನೆಗಾಗಿ ಈ ವರೆಗೂ ನಾವು ಬರಿ ಮಾತನಾಡಿದ್ದೇವೆ. ಅದನ್ನು ಬಿಟ್ಟು ಕೆಲಸ ಮಾಡೋಣ. ವೀರಶೈವ ಮಹಾಸಭಾವು ಮಠದ ಬುನಾದಿಯಾಗಿದೆ. ಲಿಂಗಾಯತರು ಲಿಂಗಾಯತರನ್ನೇ ತುಳಿದಿದ್ದಾರೆ. ಈ ಸಮಾಜ ಸಂಘಟನೆಯಾಗಬೇಕಿದೆ. ನಾವೆಲ್ಲಾ ಒಂದಾಗಿ ಹೋಗೋಣ. ಸಮಾಜದಲ್ಲಿ ನೋವು ಇರುತ್ತವೆ. ಅವೆಲ್ಲವೂ ಸಹಿಸಿಕೊಂಡು ಮುಂದೆ ಸಾಗಬೇಕು ಎಂದರು.
ಮುಖಂಡ ಸೋಮನಗೌಡ ಪಾಟೀಲ್ ಪ್ರಾಸ್ತಾವಿಕವಾಗಿ ಮಾತನಾಡಿ, ಜಿಲ್ಲೆಯಲ್ಲಿ ವೀರಶೈವ ಲಿಂಗಾಯತ ಮಹಾಸಭಾದ ಕಾರ್ಯಕ್ರಮ ೧೧೭ ವರ್ಷದ ಬಳಿಕ ನಡೆದಿದೆ. ಜಿಲ್ಲೆಯಲ್ಲಿ ಸದೃಢವಾಗಿ ಸಂಘಟನೆ ಮಾಡಬೇಕಿದೆ. ಹೊಸ ಪದಾಧಿಕಾರಿಗಳಿಗೆ ದೊಡ್ಡ ಜವಾಬ್ದಾರಿ ಇದೆ. ನೂತನ ಪದಾಧಿಕಾರಿಗಳಿಗೆ ಸಂಘಟನೆ ಮಾಡುವುದು ಸವಾಲಿನ ಕೆಲಸ. ಹಾನಗಲ್ ಶ್ರೀಗಳ ಸ್ಮರಣೆ ಅಗತ್ಯವಾಗಿದೆ. ಮುಂದಿನ ಐದು ವರ್ಷಗಳ ಕಾಲ ನೀವು ಮುತುವರ್ಜಿ ವಹಿಸಿ ಕೆಲಸ ಮಾಡಬೇಕು. ಅಖಿಲ ಭಾರತ ವೀರಶೈವ ಮಹಾ ಸಭಾದಲ್ಲಿ ೮೪ ಉಪ ಪಂಗಡ ಇದ್ದರೂ ಸಹ ಕೊಪ್ಪಳ ಜಿಲ್ಲೆಯಲ್ಲಿ ಮಹಾಸಭಾಗೆ ವಿವಿಧ ಸದಸ್ಯರನ್ನು ಅವಿರೋಧ ಆಯ್ಕೆ ಮಾಡಲಾಗಿದೆ. ನಾವೆಲ್ಲಾ ಸಂಘಟನಾತ್ಮಕವಾಗಿ ಕೆಲಸ ಮಾಡಬೇಕು ಎಂದರು.ಸಮಾರಂಭದಲ್ಲಿ ಅಖಿಲ ಕರ್ನಾಟಕ ವೀರಶೈವ ಲಿಂಗಾಯತ ಮಹಾಸಭಾ ಜಿಲ್ಲಾಧ್ಯಕ್ಷ ಕಳಕನಗೌಡ, ತಾಲೂಕು ಅಧ್ಯಕ್ಷ ನಾಗಭೂಷಣ ಸಾಲಿಮಠ, ಡಾ. ಬಸವರಾಜ ಕ್ಯಾವಟರ್, ಕರಿಯಪ್ಪ ಮೇಟಿ ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು.