ಭಾಷಣದಿಂದ ಧರ್ಮ ಉಳಿಯಲ್ಲ, ಆಚರಣೆಯಿಂದ ಧರ್ಮ ಉಳಿಯಲು ಸಾಧ್ಯ. ಮಹಿಳೆಯರು ತಮ್ಮ ಸಂತಾನ ಹಾಗೂ ಪರಿವಾರದ ರಕ್ಷಣೆ ಮಾಡುವಂತೆ ಧರ್ಮದ ರಕ್ಷಣೆ ಹಾಗೂ ಕಾಳಜಿ ವಹಿಸಬೇಕು ಎಂದು ಚರ್ಯಾಶಿರೋಮಣಿ ಮುನಿಶ್ರೀ 108 ವಿದಿತಸಾಗರ ಮಹಾರಾಜರು ಹೇಳಿದರು.
ಹಾವೇರಿ: ಭಾಷಣದಿಂದ ಧರ್ಮ ಉಳಿಯಲ್ಲ, ಆಚರಣೆಯಿಂದ ಧರ್ಮ ಉಳಿಯಲು ಸಾಧ್ಯ. ಮಹಿಳೆಯರು ತಮ್ಮ ಸಂತಾನ ಹಾಗೂ ಪರಿವಾರದ ರಕ್ಷಣೆ ಮಾಡುವಂತೆ ಧರ್ಮದ ರಕ್ಷಣೆ ಹಾಗೂ ಕಾಳಜಿ ವಹಿಸಬೇಕು ಎಂದು ಚರ್ಯಾಶಿರೋಮಣಿ ಮುನಿಶ್ರೀ 108 ವಿದಿತಸಾಗರ ಮಹಾರಾಜರು ಹೇಳಿದರು.ನಗರದ ರಜನಿ ಸಭಾಂಗಣದಲ್ಲಿ ಬೃಹತ್ ಸಿದ್ಧಚಕ್ರ ಮಹಾಮಂಡಲ ವಿಧಾನ ಮಹೋತ್ಸವದ ಮೂರನೇ ದಿನವಾದ ಭಾನುವಾರ ಜರುಗಿದ ಜೈನ ಧಾರ್ಮಿಕ ಸಮಾವೇಶದ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.ಮೊದಲು ಭಾರತ ದೇಶದಾದ್ಯಂತ ಜೈನರು ಇದ್ದರು. ಮೂರರಿಂದ ನಾಲ್ಕು ಕಿ.ಮೀ.ಗೆ ಒಂದು ಜೈನ ಮಂದಿರಗಳು ಇರುತ್ತಿದ್ದವು. ಇಂದು ಧರ್ಮದ ಪಾಲನೆ ಇಲ್ಲದ ಕಾರಣ ಜೈನ ಧರ್ಮ ನಶಿಸುತ್ತಿದೆ. ಮೊದಲು ನಮ್ಮ ಮಕ್ಕಳಿಗೆ ಧರ್ಮದ ಅರಿವು ಮೂಡಿಸಬೇಕು. ಎಲ್ಲರೂ ಸಂಘಟಿತರಾಗಿ ಜ್ಞಾನದ ಅರಿವು ಮೂಡಿಸಬೇಕು. ಎಲ್ಲರೂ ಒಗ್ಗಟ್ಟಾಗಿ ಧರ್ಮದ ಕೆಲಸ ಮಾಡಿದಾಗ ಸಮಾಜ, ಧರ್ಮ ಉಳಿಯಬಹುದು ಎಂದರು.ಯುವ ಸಮ್ಮೇಳನ, ಮಹಿಳಾ ಸಮ್ಮೇಳನ ಹೀಗೆ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಎಲ್ಲರಿಗೂ ಧರ್ಮದ ಬಗ್ಗೆ ಅರಿವು ಮೂಡಿಸಲಾಗುತ್ತಿದೆ. ಎಲ್ಲರೂ ಈ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಧರ್ಮದ ಲಾಭ ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು.ಶಾಸಕ, ವಿಧಾನಸಭೆ ಉಪಾಧ್ಯಕ್ಷ ರುದ್ರಪ್ಪ ಲಮಾಣಿ ಮಾತನಾಡಿ, ಪ್ರಪಂಚದಲ್ಲೇ ಜೈನ ಧರ್ಮ ಶ್ರೇಷ್ಠವಾಗಿದೆ. ''ಜೀವಿಸು ಜೀವಿಸಲು ಬಿಡು'' ಎಂಬ ತತ್ವವನ್ನು ಅರಿತುಕೊಂಡರೆ ಸಾಕು. ನಾವು ಬರುವಾಗ ಏನು ತರಲ್ಲ, ಹೋಗುವಾಗ ಏನು ತೆಗೆದುಕೊಂಡು ಹೋಗಲ್ಲ. ಇದನ್ನು ಜೈನ ಧರ್ಮ ಅರ್ಥಮಾಡಿಸುತ್ತದೆ ಎಂದು ಹೇಳಿದರು.ನಾನು ಮುಜರಾಯಿ ಸಚಿವನಾಗಿದ್ದಾಗ ಶ್ರವಣಬೆಳಗೊಳದ ಭಗವಾನ ಗೊಮ್ಮಟೇಶ್ವರ ಮಸ್ತಕಾಭಿಷೇಕ ಜರುಗಿತು. ನಾನು ಭಗವಂತರಿಗೆ ಅಭಿಷೇಕ ಮಾಡಿದ್ದು ನನ್ನ ಸೌಭಾಗ್ಯ. ಇದನ್ನು ಜೀವನದಲ್ಲಿ ಮರೆಯಲ್ಲ. ಹಾವೇರಿಯಲ್ಲಿ ಒಂದು ಕೋಟಿ ರು. ವೆಚ್ಚದಲ್ಲಿ ಜೈನ ಸಮುದಾಯ ಭವನಕ್ಕೆ ಅಡಿಗಲ್ಲು ಹಾಕಲಾಗಿದೆ. ಹೆಚ್ಚಿನ ಅನುದಾನದ ಅವಶ್ಯಕತೆ ಇದ್ದಲ್ಲಿ ಅದನ್ನು ಮಂಜೂರು ಮಾಡಲಾಗುವುದು ಎಂದು ಭರವಸೆ ನೀಡಿದರು.ಉದ್ಘಾಟನೆ ನೆರವೇರಿಸಿದ ಜಿಪಂ ಮಾಜಿ ಅಧ್ಯಕ್ಷ ಕೊಟ್ರೇಶಪ್ಪ ಬಸೇಗಣ್ಣಿ ಮಾತನಾಡಿ, ಆರಾಧನೆಯಲ್ಲಿ ಪ್ರತಿ ದಿನ ಒಂದು ಸಮಾವೇಶ ಹಮ್ಮಿಕೊಂಡಿದ್ದು ಶ್ಲಾಘನೀಯವಾಗಿದೆ. ಜೈನ ಧರ್ಮದವರ ಶಿಸ್ತು ಮತ್ತು ಸಂಘಟನೆ ಇತರರಿಗೆ ಮಾದರಿಯಾಗಿದೆ. ಜೈನ ಸಮುದಾಯ ಭವನ ನಿರ್ಮಾಣಕ್ಕೆ ಅಗತ್ಯ ಸಹಕಾರ ನೀಡುವುದಾಗಿ ಭರವಸೆ ನೀಡಿದರು.ಬೃಹತ್ ಸಿದ್ಧಚಕ್ರ ಮಹಾಮಂಡಲ ವಿಧಾನ ಮಹೋತ್ಸವ ಸಮಿತಿ ಉಪಾಧ್ಯಕ್ಷ ಭರತರಾಜ ಹಜಾರಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಶಿವಮೊಗ್ಗ ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿ ಸವಿತಾ ನವೀನಕುಮಾರ ಸಾಗರ ಹಾಗೂ ಡಾ. ಸುಧಾರಾಣಿ, ಜೈನ ಧರ್ಮದ ಕುರಿತು ಮಾತನಾಡಿದರು. ಇದೇ ಸಂದರ್ಭದಲ್ಲಿ ಗಣ್ಯರು ಆಚಾರ್ಯ ವಿದ್ಯಾಸಾಗರ ಮಹಾರಾಜರ ಭಾವಚಿತ್ರ ಅನಾವರಣಗೊಳಿಸಿದರು. ಪದ್ಮಶ್ರೀ ಮಾತಾಜಿ, ಪ್ರತಿಷ್ಠಾಚಾರ್ಯರಾದ ಮಾಣಿಕ ಶ್ರೀಪಾಲ ಚಂದಗಡೆ ಮತ್ತು ಪ್ರತಿಮಾಧಾರಿಗಳಾದ ಸಿದ್ದಗೌಡ ಪಾಟೀಲ, ಸಾಧನಾ ದೀದಿ, ಬಾಲ ಬ್ರಹ್ಮಚಾರಿ ಮಹಾವೀರ ಭಯ್ಯಾಜಿ ಹಾಗೂ ಬ್ರ. ಜಯಕುಮಾರ ಭಯ್ಯಾಜಿ, ಜಿನೇಂದ್ರ ಬಂಗ, ಸಾದನಾ ದೀದಿ, ತಾಲೂಕು ಮಟ್ಟದ ಗ್ಯಾರಂಟಿ ಯೋಜನೆಗಳ ಪ್ರಾಧಿಕಾರ ಅನುಷ್ಠಾನ ಸಮಿತಿ ಅಧ್ಯಕ್ಷ ಎಂ.ಎಂ. ಮೈದೂರ, ಹಾವೇರಿ ಹಾಲು ಒಕ್ಕೂಟದ ನಿರ್ದೇಶಕ ಬಸವೇಶಗೌಡ ಪಾಟೀಲ, ಬೃಹತ್ ಸಿದ್ಧಚಕ್ರ ಮಹಾಮಂಡಲ ವಿಧಾನ ಮಹೋತ್ಸವ ಸಮಿತಿ ಅಧ್ಯಕ್ಷ ಸುಭಾಸ ಪಾಟೀಲ, ಕಾರ್ಯದರ್ಶಿ ಎಸ್.ಎ. ವಜ್ರಕುಮಾರ, ಹಾವೇರಿ ಜಿಲ್ಲಾ ದಿಗಂಬರ ಜೈನ ಸಮಾಜದ ಉಪಾಧ್ಯಕ್ಷ ಶಿವರಾಯಪ್ಪ ಜಿ. ಅಪ್ಪಣ್ಣನವರ, ಮಹಾವೀರ ಹಜಾರಿ, ಡಾ.ರಾಜೇಶ ಪಾಟೀಲ ಇತರರು ಇದ್ದರು.ವಿಮಲ ಬೋಗಾರ ಸ್ವಾಗತಿಸಿರು. ಕುಮುದಾ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮಕ್ಕೂ ಮೊದಲು ಬೆಳಿಗ್ಗೆ ಜಿನಭಗವಂತರ ಜಲಾಭಿಷೇಕ, ಗಂಧಾಭಿಷೇಕ, ಪುಷ್ಪವೃಷ್ಟಿ, ಬೃಹತ್ ಶಾಂತಿಧಾರೆ, ನಿತ್ಯಪೂಜೆ, ದೇವಶಾಸ್ತ್ರ ಗುರುಪೂಜೆ, ಬೃಹತ್ ಶ್ರೀ ಸಿದ್ಧಚಕ್ರ ಮಹಾಮಂಡಲ ವಿಧಾನ ಸೇರಿದಂತೆ ವಿಶೇಷ ಪೂಜಾ ಕಾರ್ಯಕ್ರಮಗಳು ಜರುಗಿದವು.