ಸಮಾಜದಲ್ಲಿ ಶಾಂತಿ ಸ್ಥಾಪನೆಗೆ ಧರ್ಮ ಪಾಲನೆ ಮುಖ್ಯ: ಶ್ರೀಗಳು

| Published : Feb 08 2024, 01:32 AM IST

ಸಮಾಜದಲ್ಲಿ ಶಾಂತಿ ಸ್ಥಾಪನೆಗೆ ಧರ್ಮ ಪಾಲನೆ ಮುಖ್ಯ: ಶ್ರೀಗಳು
Share this Article
  • FB
  • TW
  • Linkdin
  • Email

ಸಾರಾಂಶ

ಸಮಾಜದಲ್ಲಿ ವಿಪರೀತವಾಗಿರುವ ಅಶಾಂತಿ ಶಮನಗೊಳ್ಳಲು ಪ್ರತಿಯೊಬ್ಬರೂ ಧರ್ಮ ಮಾರ್ಗದಲ್ಲಿ ಮುನ್ನಡೆಯುವುದು ಅವಶ್ಯಕ. ಜನವಸತಿ ಇಲ್ಲದ ಪ್ರದೇಶದಲ್ಲಿ ಮಠವೊಂದನ್ನು ಕಟ್ಟಿ ಅಭಿವೃದ್ಧಿಗೊಳಿಸಿರುವ ಪೀಠಾಧಿಪತಿ ಶ್ರೀ ರೇವಣಸಿದ್ಧೇಶ್ವರ ಶಿವಾಚಾರ್ಯ ಸ್ವಾಮಿಗಳ ಕ್ರಿಯಾಶೀಲತೆ ಎಲ್ಲರ ಮೆಚ್ಚುಗೆ ಗಳಿಸಿದೆ. ಇದಕ್ಕೆ ಕೈಗೂಡಿಸಿರುವ ಭಕ್ತರ ಸಹಕಾರವೂ ದೊಡ್ಡದು. ಶ್ರೀ ಜಗದ್ಗುರು ರೇಣುಕಾಚಾರ್ಯರ 36 ಅಡಿ ಎತ್ತರದ ಮಂಗಲ ಮೂರ್ತಿ ಸುಂದರವಾಗಿ ನಿರ್ಮಾಣವಾಗಿದೆ ಎಂದು ಶ್ರೀಶೈಲ ಜಗದ್ಗುರು ಡಾ. ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಭಗವತ್ಪಾದರು ಶಿಕಾರಿಪುರದಲ್ಲಿ ನುಡಿದಿದ್ದಾರೆ.

ಕನ್ನಡಪ್ರಭ ವಾರ್ತೆ, ಶಿಕಾರಿಪುರ

ಸಮಾಜದಲ್ಲಿ ವಿಪರೀತವಾಗಿರುವ ಅಶಾಂತಿ ಶಮನಗೊಳ್ಳಲು ಪ್ರತಿಯೊಬ್ಬರೂ ಧರ್ಮ ಮಾರ್ಗದಲ್ಲಿ ಮುನ್ನಡೆಯುವುದು ಅವಶ್ಯಕ ಎಂದು ಶ್ರೀಶೈಲ ಜಗದ್ಗುರು ಡಾ. ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಭಗವತ್ಪಾದರು ನುಡಿದರು.

ತಾಲೂಕಿನ ಕಡೇನಂದಿಹಳ್ಳಿಯಲ್ಲಿನ ಶ್ರೀ ಗುರು ರೇವಣಸಿದ್ಧೇಶ್ವರ ಪುಣ್ಯಾಶ್ರಮದಲ್ಲಿ ಜರುಗಿದ ಶ್ರೀ ಜಗದ್ಗುರು ರೇಣುಕಾಚಾರ್ಯ ಮೂರ್ತಿ ಲೋಕಾರ್ಪಣೆ ಹಾಗೂ ಪುರಾಣ ಪ್ರವಚನದ ಧರ್ಮ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.

ಜನವಸತಿ ಇಲ್ಲದ ಪ್ರದೇಶದಲ್ಲಿ ಮಠವೊಂದನ್ನು ಕಟ್ಟಿ ಅಭಿವೃದ್ಧಿಗೊಳಿಸಿರುವ ಪೀಠಾಧಿಪತಿ ಶ್ರೀ ರೇವಣಸಿದ್ಧೇಶ್ವರ ಶಿವಾಚಾರ್ಯ ಸ್ವಾಮಿಗಳ ಕ್ರಿಯಾಶೀಲತೆ ಎಲ್ಲರ ಮೆಚ್ಚುಗೆ ಗಳಿಸಿದೆ. ಇದಕ್ಕೆ ಕೈಗೂಡಿಸಿರುವ ಭಕ್ತರ ಸಹಕಾರವೂ ದೊಡ್ಡದು. ಶ್ರೀ ಜಗದ್ಗುರು ರೇಣುಕಾಚಾರ್ಯರ 36 ಅಡಿ ಎತ್ತರದ ಮಂಗಲ ಮೂರ್ತಿ ಸುಂದರವಾಗಿ ನಿರ್ಮಾಣವಾಗಿದೆ ಎಂದರು.

ಸಾನ್ನಿಧ್ಯ ವಹಿಸಿದ್ದ ಶ್ರೀ ಕಾಶಿ ಜಗದ್ಗುರು ಮಲ್ಲಿಕಾರ್ಜುನ ವಿಶ್ವಾರಾಧ್ಯ ಶಿವಾಚಾರ್ಯ ಭಗವತ್ಪಾದರು ಆಶೀರ್ವಚನ ನೀಡಿ, ಜನಮನದಲ್ಲಿ ಭಕ್ತಿಭಾವನೆ ಬೆಳೆಸುತ್ತಿರುವ ಶ್ರೀ ಗುರು ರೇವಣಸಿದ್ಧೇಶ್ವರ ಪುಣ್ಯಾಶ್ರಮದ ಪರಿಸರ ನೋಡಿ ಅತೀವ ಸಂತಸವಾಗಿದೆ. ಶ್ರೀ ಜಗದ್ಗುರು ರೇಣುಕಾಚಾರ್ಯರ ದಶಧರ್ಮ ಸೂತ್ರಗಳು ಎಲ್ಲರ ಬಾಳಿನಲ್ಲಿ ಬೆಳಕು ಮೂಡಿಸಿವೆ ಎಂದರು.

ನೇತೃತ್ವ ವಹಿಸಿದ್ದ ಶ್ರೀ ರೇವಣಸಿದ್ಧೇಶ್ವರ ಶಿವಾಚಾರ್ಯ ಸ್ವಾಮಿಗಳು ಮಾತನಾಡಿ, ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರು 33ನೇ ವರ್ಧಂತಿ ಹಾಗೂ ಶ್ರೀ ರೇಣುಕರ 36 ಅಡಿ ಎತ್ತರದ ಮೂರ್ತಿ ಪ್ರತಿಷ್ಠಾಪನೆ ಅಂಗವಾಗಿ ಇಂದಿನಿಂದ ಫೆ.13 ರವರೆಗೆ ಹಮ್ಮಿಕೊಳ್ಳಲಾದ ವಿವಿಧ ಕಾರ್ಯಕ್ರಮಗಳಿಗೆ ಉಭಯ ಜಗದ್ಗುರುಗಳು ಆಗಮಿಸಿ ಆಶೀರ್ವದಿಸಿದ್ದು ಈ ಭಾಗದ ಜನತೆಯ ಪುಣ್ಯ ವಿಶೇಷವಾಗಿದೆ ಎಂದರು.

ತೊಗರ್ಸಿಯ ಮಹಾಂತದೇಶಿಕೇಂದ್ರ ಶಿವಾಚಾರ್ಯ ಸ್ವಾಮಿಗಳು ಉಪದೇಶಾಮೃತ ನೀಡಿದರು. ಮುಖ್ಯ ಅತಿಥಿ ಎಂಎಡಿಬಿ ಮಾಜಿ ಅಧ್ಯಕ್ಷ ಎ.ಎಸ್. ಪದ್ಮನಾಭ ಭಟ್, ವಿಧಾನ ಪರಿಷತ್ತು ಸದಸ್ಯ ಡಿ.ಎಸ್. ಅರುಣಕುಮಾರ್, ಹರಿಹರದ ಆರ್.ಟಿ. ಪ್ರಶಾಂತ ದುಗ್ಗತ್ತಿಮಠ ಆಗಮಿಸಿದ್ದರು. ಕಡೆನಂದಿಹಳ್ಳಿ ವೀರಭದ್ರ ಶಿವಾಚಾರ್ಯರು, ತೊಗರ್ಸಿಯ ಚನ್ನವೀರ ದೇಶಿಕೇಂದ್ರ ಶಿವಾಚಾರ್ಯ ಸ್ವಾಮಿಗಳು, ಹಾರನಹಳ್ಳಿಯ ಶಿವಯೋಗಿ ಶಿವಾಚಾರ್ಯ ಸ್ವಾಮಿಗಳು ಉಪಸ್ಥಿತರಿದ್ದರು.

ಹಿರೇಕೆರೂರಿನ ಅನ್ನಪೂರ್ಣ ಬಣಕಾರ, ಭದ್ರಾವತಿಯ ಡಾ.ಮಹಾದೇವಪ್ಪ, ಈಸೂರಿನ ಕೆ.ಎಸ್. ಬಸವಾರಾಧ್ಯ ಸಾಹುಕಾರ, ಶಿಕಾರಿಪುರದ ಮಮತ, ನಂಜುಂಡಿ ಆರ್., ಸುನಂದಮ್ಮ ಲೋಣಿ, ಚಿಕ್ಕಬೆಂಡಿಗೇರಿಯ ಚನ್ನಬಸನಗೌಡ ಕಟ್ಟೇಗೌಡ್ರ, ಅಂಬಾರಗೊಪ್ಪದ ಲಲಿತಮ್ಮ ಬಾರಂಗಿ, ಹುಲಗಿನಕೊಪ್ಪದ ಮಂಜುಳಾ ಮರಡಿಗೌಡ, ಬೆಲವಂತನಕೊಪ್ಪ ಲತಾ ಉಜ್ಜನಿಮಠ ಸೇರಿದಂತೆ ಹಲವಾರು ಗಣ್ಯರಿಗೆ, ಸೇವಾರ್ಥಿಗಳಿಗೆ ಗುರುರಕ್ಷೆ ನೀಡಿ ಗೌರವಿಸಲಾಯಿತು.

ಶಿಕಾರಿಪುರದ ನೂಪುರ ಭರತನಾಟ್ಯ ಕಲಾ ಕೇಂದ್ರದವರಿಂದ ಭರತ ನಾಟ್ಯ ಜರುಗಿತು. ಶಿವಮೊಗ್ಗದ ಶಾಂತಾ ಆನಂದ ನಿರೂಪಿಸಿದರು. ಆರಂಭದಲ್ಲಿ ಶ್ರೀ ಶ್ರೀಶೈಲ ಹಾಗೂ ಕಾಶಿ ಜಗದ್ಗುರು ಅಡ್ಡಪಲ್ಲಕ್ಕಿ ಮಹೋತ್ಸವ ಸಕಲ ಬಿರುದಾವಳಿ ಗಳೊಂದಿಗೆ ಜರುಗಿತು. ಸಹಸ್ರಾರು ಭಕ್ತರು ದರ್ಶನಾಶೀರ್ವಾದ ಪಡೆದರು.

- - - -3ಕೆಎಸ್.ಕೆಪಿ2:

ಕಾರ್ಯಕ್ರಮಕ್ಕೆ ಶ್ರೀಶೈಲ ಜಗದ್ಗುರು ಡಾ. ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯರು ಚಾಲನೆ ನೀಡಿದರು.