ಉಜ್ವಲ ಬಾಳಿನ ಭಾಗ್ಯೋದಯಕ್ಕೆ ಧರ್ಮ ದಿಕ್ಸೂಚಿಯಾಗಿದೆ-ರಂಭಾಪುರಿ ಶ್ರೀ

| Published : Nov 28 2024, 12:31 AM IST

ಉಜ್ವಲ ಬಾಳಿನ ಭಾಗ್ಯೋದಯಕ್ಕೆ ಧರ್ಮ ದಿಕ್ಸೂಚಿಯಾಗಿದೆ-ರಂಭಾಪುರಿ ಶ್ರೀ
Share this Article
  • FB
  • TW
  • Linkdin
  • Email

ಸಾರಾಂಶ

ಬಹು ಜನ್ಮಗಳ ಪುಣ್ಯ ಫಲದಿಂದ ಪ್ರಾಪ್ತವಾದ ಈ ಮಾನವ ಜೀವನ ಸಾರ್ಥಕಗೊಳ್ಳಲು ಧರ್ಮಾಚರಣೆ ಅವಶ್ಯಕ. ಉಜ್ವಲ ಬಾಳಿನ ಭಾಗ್ಯೋದಯಕ್ಕೆ ಧರ್ಮ ದಿಕ್ಸೂಚಿಯಾಗಿದೆ ಎಂದು ಬಾಳೆಹೊನ್ನೂರು ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.

ಶಿಗ್ಗಾಂವಿ: ಬಹು ಜನ್ಮಗಳ ಪುಣ್ಯ ಫಲದಿಂದ ಪ್ರಾಪ್ತವಾದ ಈ ಮಾನವ ಜೀವನ ಸಾರ್ಥಕಗೊಳ್ಳಲು ಧರ್ಮಾಚರಣೆ ಅವಶ್ಯಕ. ಉಜ್ವಲ ಬಾಳಿನ ಭಾಗ್ಯೋದಯಕ್ಕೆ ಧರ್ಮ ದಿಕ್ಸೂಚಿಯಾಗಿದೆ ಎಂದು ಬಾಳೆಹೊನ್ನೂರು ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು. ತಾಲೂಕಿನ ಚಿಕ್ಕಮಣಕಟ್ಟಿ ಗ್ರಾಮದಲ್ಲಿ ಬಸವೇಶ್ವರ ದೇವಸ್ಥಾನ ಮೇಲ್ಭಾಗದಲ್ಲಿ ನಂದೀಶ್ವರ ಮೂರ್ತಿ ಪ್ರತಿಷ್ಠಾಪನಾ ಅಂಗವಾಗಿ ಜರುಗಿದ ಧರ್ಮ ಜಾಗೃತಿ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿ ಮಾತನಾಡಿದರು.ಮನುಷ್ಯನ ಬುದ್ಧಿ ಶಕ್ತಿಗೆ ತಕ್ಕಂತೆ ಭಾವನೆಗಳು ಬೆಳೆಯುತ್ತಿಲ್ಲ. ಉದಾತ್ತವಾದ ಧರ್ಮದ ಅರ್ಥ ವ್ಯಾಪ್ತಿಯನ್ನು ಅರಿಯದೇ ಜಾತಿಗೆ ಜೋಡಿಸಿ ಧರ್ಮಕ್ಕೆ ಚ್ಯುತಿ ತರುವ ಕೆಲಸವನ್ನು ಕೆಲವರು ಮಾಡುತ್ತಲೇ ಬಂದಿದ್ದಾರೆ. ಸತ್ಯ ಧರ್ಮಕ್ಕೆ ಯಾವಾಗಲೂ ಜಯ ಇದ್ದೇ ಇರುತ್ತದೆ. ಆದರ್ಶ ಗುರಿಯೊಂದಿಗೆ ಸಮರ್ಥ ಗುರುವನ್ನು ಆಶ್ರಯಿಸಿ ಬದುಕು ಕಟ್ಟಿಕೊಳ್ಳಬೇಕು. ಜಗದ್ಗುರು ರೇಣುಕಾಚಾರ್ಯರು ಸಾರಿದ ಮಾನವೀಯ ಮೌಲ್ಯಗಳನ್ನು ಶ್ರೀಮದ್ ರಂಭಾಪುರಿ ವೀರಗಂಗಾಧರ ಜಗದ್ಗುರುಗಳು ಬೋಧಿಸಿ ಜನಸಮುದಾಯವನ್ನು ಸನ್ಮಾರ್ಗಕ್ಕೆ ಕರೆ ತಂದಿರುವ ಪ್ರಾಮಾಣಿಕ ಪ್ರಯತ್ನ ಮರೆಯಲಾಗದು ಎಂದರು.

ಚಿಕ್ಕಮಣಕಟ್ಟಿ ಗ್ರಾಮ ಚಿಕ್ಕದಾಗಿದ್ದರೂ ಅತ್ಯಂತ ಅರ್ಥಪೂರ್ಣ ಭವ್ಯ ಸಮಾರಂಭ ಹಮ್ಮಿಕೊಂಡಿರುವುದು ತಮಗೆ ಅತ್ಯಂತ ಸಂತೋಷವನ್ನುಂಟು ಮಾಡಿದೆ. ಬರಲಿರುವ ಡಿಸೆಂಬರ್ ೧೫ರಂದು ಹುಣ್ಣಿಮೆ ದಿನ ಲಿಂ.ಶ್ರೀಮದ್ ರಂಭಾಪುರಿ ವೀರರುದ್ರಮುನಿ ಜಗದ್ಗುರುಗಳವರ ಜನ್ಮ ಶತಮಾನೋತ್ಸವ ರಂಭಾಪುರಿ ಪೀಠದಲ್ಲಿ ಜರುಗುತ್ತಿದ್ದು, ಈ ಭಾಗದ ಭಕ್ತ ಸಮುದಾಯ ಪಾಲ್ಗೊಳ್ಳಬೇಕೆಂದು ಕರೆಯಿತ್ತರು.

ಭಾರತ ಸೇವಾ ಸಂಸ್ಥೆ ಬನ್ನೂರ ಅಧ್ಯಕ್ಷ ಶ್ರೀಕಾಂತ ದುಂಡಿಗೌಡ್ರ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿ, ೫ ಸಾವಿರ ವರ್ಷಗಳ ಇತಿಹಾಸ ಹೊಂದಿದ ವೀರಶೈವ ಧರ್ಮ ಸಕಲರಿಗೂ ಒಳಿತನ್ನು ಬಯಸುತ್ತ ಬಂದಿದೆ. ಈ ಧರ್ಮದ ತತ್ವಗಳನ್ನು ಅರಿತು ಆಚರಿಸಿ ಬಾಳಿದರೆ ಜೀವನದಲ್ಲಿ ಉನ್ನತಿ ಕಾಣಲು ಸಾಧ್ಯವೆಂದರು.೨೦೨೫ನೇ ಸಾಲಿನ ಕ್ಯಾಲೆಂಡರ್ ಬಿಡುಗಡೆ ಮಾಡಿದ ಜಿ.ಪಂ.ಮಾಜಿ ಸದಸ್ಯ ಬಸನಗೌಡ ಇನಾಮತಿ ಮಾತನಾಡಿ, ಲಿಂ. ಶ್ರೀಮದ್ ರಂಭಾಪುರಿ ವೀರಗಂಗಾಧರ ಜಗದ್ಗುರುಗಳು ಮಾನವ ಧರ್ಮಕ್ಕೆ ಜಯವಾಗಲಿ ಧರ್ಮದಿಂದಲೇ ವಿಶ್ವಕ್ಕೆ ಶಾಂತಿ ಎಂದು ಸಾರಿ ನಾಡಿನ ಉದ್ದಗಲಕ್ಕೂ ಸಂಚರಿಸಿ ಧರ್ಮ ಜಾಗೃತಿ ಮಾಡದಿದ್ದರೆ ಇಂದು ನಾವು ವೀರಶೈವರಾಗಿ ಉಳಿಯುವುದು ಕಷ್ಟವಾಗುತ್ತಿತ್ತು. ಹಗಲಿರುಳೆನ್ನದೇ ಅವರು ಧರ್ಮ ಪ್ರಚಾರ ಮಾಡಿದ್ದನ್ನು ಮರೆಯುವಂತಿಲ್ಲ ಎಂದರು. ಮುಕ್ತಿಮಂದಿರ ಕ್ಷೇತ್ರದ ವಿಮಲ ರೇಣುಕ ವೀರಮುಕ್ತಿಮುನಿ ಶಿವಾಚಾರ್ಯ ಸ್ವಾಮಿಗಳು ನೇತೃತ್ವ ವಹಿಸಿದ್ದರು. ಬಂಕಾಪುರ ಅರಳೆಲೆಮಠದ ರೇವಣಸಿದ್ಧೇಶ್ವರ ಶಿವಾಚಾರ್ಯ ಸ್ವಾಮಿಗಳು ಸಮ್ಮುಖ ವಹಿಸಿದ್ದರು. ದುಗ್ಲಿ-ಕಡೇನಂದಿಹಳ್ಳಿ ರೇವಣಸಿದ್ಧೇಶ್ವರ ಶಿವಾಚಾರ್ಯ ಸ್ವಾಮಿಗಳು ಉಪದೇಶಾಮೃತ ನೀಡಿದರು. ಗಂಜಿಗಟ್ಟಿ ಡಾ.ವೈಜನಾಥ ಶಿವಲಿಂಗ ಶಿವಾಚಾರ್ಯರು, ಹಿರೆಮಣಕಟ್ಟಿ ವಿಶ್ವಾರಾಧ್ಯ ಶಿವಾಚಾರ್ಯರು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ತಿಪ್ಪಣ್ಣ ಸಾತಣ್ಣನವರ, ನಾಗೇಶ ಶರ್ಮಾ, ಟಿ.ವಿ. ಸುರಗಿಮಠ, ಹಿರೇಮಣಕಟ್ಟಿ ಮತ್ತು ಕಬನೂರು ಗ್ರಾಮ ಪಂಚಾಯತಿ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಸರ್ವ ಸದಸ್ಯರು ಸಮಾರಂಭದಲ್ಲಿ ಪಾಲ್ಗೊಂಡಿದ್ದರು. ಗಣ್ಯರಿಗೆ ದಾನಿಗಳಿಗೆ ಶ್ರೀ ರಂಭಾಪುರಿ ಜಗದ್ಗುರುಗಳು ಗುರುರಕ್ಷೆ ನೀಡಿ ಆಶೀರ್ವದಿಸಿದರು. ಶ್ರೀ ಜಗದ್ಗುರು ರೇಣುಕಾಚಾರ್ಯ ಗುರುಕುಲ ಸಾಧಕರಿಂದ ವೇದಘೋಷ, ಕಲ್ಮೇಶ್ವರ ಕಲಾ ತಂಡ ಮುಗಳಿ ಇವರಿಂದ ಭಕ್ತಿಗೀತೆ ಜರುಗಿತು. ಸಮಾರಂಭಕ್ಕೂ ಮುನ್ನ ಬಾಳೆಹೊನ್ನೂರು ರಂಭಾಪುರಿ ಜಗದ್ಗುರುಗಳ ಅಡ್ಡಪಲ್ಲಕ್ಕಿ ಮಹೋತ್ಸವ ಸಕಲ ವಾದ್ಯ ವೈಭವಗಳೊಂದಿಗೆ ಜರುಗಿತು. ಸಹಸ್ರಾರು ಭಕ್ತರು ಪಾಲ್ಗೊಂಡು ಜಗದ್ಗುರುಗಳವರ ದರ್ಶನಾಶೀರ್ವಾದ ಪಡೆದರು.