ಸುಖ ಶಾಂತಿಯ ಬದುಕಿಗೆ ಧರ್ಮವೇ ಮೂಲ: ಬಾಳೆಹೊನ್ನೂರು ರಂಭಾಪುರಿ ಡಾ.ವೀರಸೋಮೇಶ್ವರ

| Published : Jun 09 2024, 01:32 AM IST

ಸುಖ ಶಾಂತಿಯ ಬದುಕಿಗೆ ಧರ್ಮವೇ ಮೂಲ: ಬಾಳೆಹೊನ್ನೂರು ರಂಭಾಪುರಿ ಡಾ.ವೀರಸೋಮೇಶ್ವರ
Share this Article
  • FB
  • TW
  • Linkdin
  • Email

ಸಾರಾಂಶ

ಸುಖ ಶಾಂತಿಯ ಬದುಕಿಗೆ ಧರ್ಮವೇ ಮೂಲ ಎಂಬುದನ್ನು ಮರೆಯಬಾರದು ಎಂದು ಬಾಳೆಹೊನ್ನೂರು ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರು ಅಭಿಪ್ರಾಯಪಟ್ಟರು. ಆಲೂರಿನಲ್ಲಿ ಆಯೋಜಿಸಿದ್ದ ಆಯೋಜಿಸಿದ್ದ ರಂಭಾಪುರಿ ಶ್ರೀಗಳ ಪುರಪ್ರವೇಶ ಹಾಗೂ ಧರ್ಮ ಜಾಗೃತಿ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.

ಧರ್ಮ ಜಾಗೃತಿ ಸಮಾರಂಭ

ಕನ್ನಡಪ್ರಭ ವಾರ್ತೆ ಆಲೂರು

ಮನುಷ್ಯ ಯಾವಾಗಲೂ ಸುಖಾಪೇಕ್ಷಿ. ಸುಖ ಬಯಸುವ ಮನುಷ್ಯ ಧರ್ಮ ಪರಿಪಾಲನೆ ಮಾಡುವುದನ್ನು ಮರೆಯುತ್ತಾನೆ. ಆದರೆ ಸುಖ ಶಾಂತಿಯ ಬದುಕಿಗೆ ಧರ್ಮವೇ ಮೂಲ ಎಂಬುದನ್ನು ಮರೆಯಬಾರದು ಎಂದು ಬಾಳೆಹೊನ್ನೂರು ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರು ಅಭಿಪ್ರಾಯಪಟ್ಟರು.

ತಾಲೂಕು ವೀರಶೈವ ಲಿಂಗಾಯತ ಸಮಾಜದಿಂದ ಶನಿವಾರ ಪಟ್ಟಣದ ಬಸವೇಶ್ವರ ಶಾಲಾ ಆವರಣದಲ್ಲಿ ಆಯೋಜಿಸಿದ್ದ ರಂಭಾಪುರಿ ಶ್ರೀಗಳ ಪುರಪ್ರವೇಶ ಹಾಗೂ ಧರ್ಮ ಜಾಗೃತಿ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು. ‘ಧರ್ಮ, ಸಂಸ್ಕೃತಿ ಮತ್ತು ಪರಂಪರೆ ಮನುಷ್ಯನ ನಂಬಿಕೆಯ ಮೇಲೆ ನಿಂತುಕೊಂಡಿವೆ. ನಂಬಿಕೆಯೇ ಜೀವನದ ಮೂಲ ಸೆಲೆ. ನಂಬಿಕೆ ಇಲ್ಲದವರಿಗೆ ಯಾವುದೂ ಇಲ್ಲ. ಕಣ್ಣು ಚೆನ್ನಾಗಿದ್ದರೆ ಜಗತ್ತು ಚೆನ್ನಾಗಿ ಕಾಣುತ್ತದೆ. ನಾಲಿಗೆ ಚೆನ್ನಾಗಿದ್ದರೆ ಜನತೆಗೆ ಚೆನ್ನಾಗಿ ಕಾಣುತ್ತೇವೆ. ವಿದ್ಯೆ, ದುಡಿಮೆ ಮತ್ತು ತಾಳ್ಮೆ ಜೀವನದ ಶ್ರೇಯಸ್ಸಿಗೆ ಅಡಿಪಾಯ’ ಎಂದು ಹೇಳಿದರು.

‘ವೀರಶೈವ ಧರ್ಮ ಆದರ್ಶ ಮೌಲ್ಯಗಳನ್ನು ಪ್ರತಿಪಾದಿಸಿದೆ. ಸಕಲ ಜೀವಾತ್ಮರಿಗೆ ಸದಾ ಲೇಸನ್ನೇ ಬಯಸಿದ ವೀರಶೈವ ಧರ್ಮ ಬಹಳ ಪ್ರಾಚೀನವಾದ ಧರ್ಮ, ಇದಕ್ಕೊಂದು ಇತಿಹಾಸ ಭವ್ಯ ಪರಂಪರೆಯಿದೆ. ಶ್ರೀ ಜಗದ್ಗುರು ರೇಣುಕಾಚಾರ್ಯರು ಮಹಾಮುನಿ ಅಗಸ್ತ್ಯರಿಗೆ ಶಿವಾದ್ವೈತ ತತ್ವ ಸಿದ್ಧಾಂತವನ್ನು ಬೋಧಿಸಿದ ಇತಿಹಾಸವಿದೆ. ವೈಚಾರಿಕತೆ ಮತ್ತು ಸುಧಾರಣೆಯ ನೆಪದಲ್ಲಿ ಧರ್ಮ ಸಂಸ್ಕೃತಿಯ ಬಗೆಗೆ ನಿರ್ಲಕ್ಷ್ಯ ಮನೋಭಾವ ತಾಳುತ್ತಿರುವ ಕಾರಣ ಜಗದಲ್ಲಿ ಅಶಾಂತಿ, ಸಂಘರ್ಷ ಹೆಚ್ಚುತ್ತಿರುವುದನ್ನು ಕಾಣುತ್ತೇವೆ. ದ್ವೇಷ ಮರೆತು ಪ್ರೀತಿ ವಿಶ್ವಾಸ ಹೆಚ್ಚಿದಾಗ ಜಗದಲ್ಲಿ ಶಾಂತಿ ನೆಲೆಗೊಳ್ಳಲು ಸಾಧ್ಯವಾಗುತ್ತದೆ’ ಎಂದು ಸಲಹೆ ನೀಡಿದರು.

ವೇದಿಕೆ ಕಾರ್ಯಕ್ರಮಕ್ಕೂ ಮುಂಚೆ ಪಟ್ಟಣದ ಸಂಗಮೇಶ್ವರ ದೇವಸ್ಥಾನದಿಂದ ಪ್ರಾರಂಭಗೊಂಡ ಜಗದ್ಗುರುಗಳ ಅಡ್ಡಪಲ್ಲಕ್ಕಿ ಉತ್ಸವದಲ್ಲಿ ವೀರಗಾಸೆ, ಡೊಳ್ಳು ಕುಣಿತ ವಿವಿಧ ವಾದ್ಯ ವೃಂದಗಳು ಪಾಲ್ಗೊಂಡಿದ್ದವು.‌ ಬಸ್ ನಿಲ್ದಾಣದ ಮೂಲಕ ಪಟ್ಟಣದ ರಾಜಬೀದಿಯಲ್ಲಿ ಸಾಗಿ ವೀರಶೈವ ಕಲ್ಯಾಣ ಮಂಟಪ ಪಕ್ಕದಲ್ಲಿರುವ ಬಸವೇಶ್ವರ ಶಾಲಾ ಆವರಣ ಬಂದು ತಲುಪಿತು. ಮೆರವಣಿಗೆ ಉದ್ದಕ್ಕೂ ‘ಜಗದ್ಗುರು ಪಂಚಾಚಾರ್ಯ ಮಹಾರಾಜಕೀ ಜೈ’ ಎಂಬ ಮಂತ್ರಘೋಷಗಳು ಪ್ರತಿಧ್ವನಿಸಿದವು. ಮೆರವಣಿಗೆಯಲ್ಲಿ ವಿಶೇಷವಾಗಿ ಮಹಿಳೆಯರು ಕುಂಭ, ಕಳಸ ಹೊತ್ತು ಗಮನ ಸೆಳೆದರು. ಸಹಸ್ರಾರು ಜನರು ಪಾಲ್ಗೊಂಡು ಜಗದ್ಗುರುಗಳ ಆಶೀರ್ವಾದ ಪಡೆದರು. ಸಮಾರಂಭದ ನಂತರ ಅನ್ನ ದಾಸೋಹ ಜರುಗಿತು.

ಕಾರ್ಜುವಳ್ಳಿ ಹಿರೇಮಠದ ಸದಾಶಿವ ಶಿವಾಚಾರ್ಯ ಸ್ವಾಮಿ ವಹಿಸಿದ್ದರು, ಯಸಳೂರು ಚನ್ನಸಿದ್ದೇಶ್ವರ ಶಿವಾಚಾರ್ಯ ಸ್ವಾಮಿ, ಕಡೇನಂದಿಹಳ್ಳಿ ರೇವಣಸಿದ್ದೇಶ್ವರ ಶಿವಾಚಾರ್ಯ ಸ್ವಾಮಿ, ಹಾರನಹಳ್ಳಿ ಶಿವಯೋಗಿ ಶಿವಾಚಾರ್ಯ ಸ್ವಾಮಿ, ತಣ್ಣೀರುಹಳ್ಳ ಮಠದ ವಿಜಯಕುಮಾರ ಸ್ವಾಮಿ, ಸಂಕಲಾಪುರ ಮಠದ ಧರ್ಮರಾಜೇಂದ್ರ ಸ್ವಾಮಿ ಪಾಲ್ಗೊಂಡು ನುಡಿ ನಮನ ಸಲ್ಲಿಸಿದರು.

ಜಿಲ್ಲಾ ಅಖಿಲ ಭಾರತ ವೀರಶೈವ ಮಹಾಸಭಾ ಅಧ್ಯಕ್ಷ ಬಿ.ಆರ್.ಗುರುದೇವ, ಶಾಸಕ ಸಿಮೆಂಟ್ ಮಂಜುನಾಥ್, ಅ.ಭಾ.ವೀ.ಮ.ರಾಷ್ಟ್ರೀಯ ಕಾರ್ಯಕಾರಿಣಿ ಘಟಕದ ಸದಸ್ಯ ಸಿದ್ದೇಶ್, ಮಲೆನಾಡು ವೀರಶೈವ ಸಂಘದ ಅಧ್ಯಕ್ಷ ದೇವರಾಜು, ಮಾಜಿ ಶಾಸಕ ಎಚ್.ಕೆ.ಕುಮಾರಸ್ವಾಮಿ, ಬೇಲೂರು ಶಿವಕುಮಾರ ಸ್ವಾಮೀಜಿ ಸಮುದಾಯ ಭವನದ ಮಾಜಿ ಅಧ್ಯಕ್ಷ ಎಂ.ಎಸ್.ಪರಮಶಿವಪ್ಪ, ತಾಲೂಕು ವೀ.ಲಿಂ.ಸಂಘದ ಅಧ್ಯಕ್ಷ ರೇಣುಕಾ ಪ್ರಸಾದ್, ಮಾಜಿ ಅಧ್ಯಕ್ಷ ಕೆ.ಎ.ಕೊಟ್ಟೂರಪ್ಪ, ಮಲೆನಾಡು ಅಭಿವೃದ್ಧಿ ಮಂಡಳಿ ಮಾಜಿ ಅಧ್ಯಕ್ಷ ಎಚ್.ಪಿ.ಮೋಹನ್, ಎಚ್‌ಡಿಸಿಸಿ ಬ್ಯಾಂಕ ನಿರ್ದೇಶಕ ಜಗದೀಶ ಕಬ್ಬಿನಹಳ್ಳಿ, ನಾಗರಿಕರ ಹೋರಾಟ ಸಮಿತಿ ಅಧ್ಯಕ್ಷ ಕೆ.ಎಸ್.ಮಂಜೇಗೌಡ, ಆಲೂರು ತಾಲೂಕು ವೀರಶೈವ ಲಿಂಗಾಯತ ಸಮಾಜದ ನಿರ್ದೇಶಕರು, ಸದಸ್ಯರು, ಮೊದಲಾದವರು ಇದ್ದರು.