ಸಾರಾಂಶ
ಕಲೆಯೇ ದೇವತ್ವದ ನೆಲೆ. ಇಂದು ಅನೇಕ ವೇದ, ಶಾಸ್ತ್ರ, ಗ್ರಂಥಗಳು ನಮ್ಮಿಂದ ದೂರವಾಗಿದೆ. ಹೊಸ ತಲೆಮಾರಿನ ಯುವ ಜನಾಂಗ ಈ ಎಲ್ಲವುಗಳ ಆರಾಧನೆಗಳಿಂದ ವಿಮುಖರಾಗುತ್ತಿದ್ದಾರೆ. ನೌಕರಿಗೆ ಸೀಮಿತಗೊಳ್ಳುತ್ತಿದ್ದಾರೆ. ಆ ದೃಷ್ಟಿಯಲ್ಲಿ ಸಂಕಲ್ಪ ಸಂಸ್ಥೆ ಗೀತೆಯ ಬಗ್ಗೆ ಸದಾ ಕಾರ್ಯಕ್ರಮ ಹಮ್ಮಿಕೊಳ್ಳುತ್ತಿದೆ.
ಯಲ್ಲಾಪುರ: ಕಲೆ, ಸಂಸ್ಕೃತಿ ಮನುಷ್ಯತ್ವವನ್ನು ರೂಪಿಸುತ್ತಿದೆ. ಹಾಗಾಗಿ ಭಾರತ ತಾಲಿಬಾನ್ ಆಗಿಲ್ಲ. ಧರ್ಮಕ್ಕೂ ಕಲೆ ಸಂಸ್ಕೃತಿಗಳ ಆಶ್ರಯ ಬೇಕು. ಹಾಗಾಗಿಯೇ ಸಂಗೀತ, ಸಾಹಿತ್ಯ, ಕಲೆ ಅರಿಯದವ ಪಶುವಿಗೆ ಸಮಾನ ಎನ್ನುತ್ತಾರೆ ಎಂದು ಸೋಂದಾ ಸ್ವರ್ಣವಲ್ಲಿ ಮಠದ ಗಂಗಾಧರೇಂದ್ರ ಸರಸ್ವತಿ ಸ್ವಾಮೀಜಿ ನುಡಿದರು.
ಪಟ್ಟಣದ ಗಾಂಧಿ ಕುಟೀರದಲ್ಲಿ ಶುಕ್ರವಾರ ಆರಂಭಗೊಂಡ ೩೮ನೇ ವರ್ಷದ ಸಂಕಲ್ಪ ಉತ್ಸವ ಉದ್ಘಾಟಿಸಿ ಆಶೀರ್ವಚನ ನೀಡಿದ ಅವರು, ಬೇರೆ ಕಲೆಗಳಲ್ಲಿ ಬೇರೆ ಭಾಷೆಗಳು ಕೂಡಿಕೊಂಡು ಬಿಟ್ಟಿದೆ. ಆದರೆ ಯಕ್ಷಗಾನದಲ್ಲಿ ಮಾತ್ರ ಕನ್ನಡ ಗಟ್ಟಿಯಾಗಿ ಉಳಿದುಕೊಂಡಿದೆ. ಆ ದೃಷ್ಟಿಯಲ್ಲಿ ಕಳೆದ ೩೮ ವರ್ಷಗಳ ಕಾಲ ಸಂಕಲ್ಪ ಸಂಸ್ಥೆ ಸಾಂಸ್ಕೃತಿಕ ಕ್ಷೇತ್ರಕ್ಕೆ ಶಕ್ತಿ ತುಂಬುತ್ತಿದೆ ಎಂದರು. ಮನುಷ್ಯತ್ವವನ್ನು ರೂಪಿಸಿಕೊಂಡಾಗ ಮಾತ್ರ ದೇವತ್ವದೆಡೆ ಸಾಗಬಹುದು. ಕಲೆಯೇ ದೇವತ್ವದ ನೆಲೆ. ಇಂದು ಅನೇಕ ವೇದ, ಶಾಸ್ತ್ರ, ಗ್ರಂಥಗಳು ನಮ್ಮಿಂದ ದೂರವಾಗಿದೆ. ಹೊಸ ತಲೆಮಾರಿನ ಯುವ ಜನಾಂಗ ಈ ಎಲ್ಲವುಗಳ ಆರಾಧನೆಗಳಿಂದ ವಿಮುಖರಾಗುತ್ತಿದ್ದಾರೆ. ನೌಕರಿಗೆ ಸೀಮಿತಗೊಳ್ಳುತ್ತಿದ್ದಾರೆ. ಆ ದೃಷ್ಟಿಯಲ್ಲಿ ಸಂಕಲ್ಪ ಸಂಸ್ಥೆ ಗೀತೆಯ ಬಗ್ಗೆ ಸದಾ ಕಾರ್ಯಕ್ರಮ ಹಮ್ಮಿಕೊಳ್ಳುತ್ತಿದೆ ಎಂದರು.ವಿಧಾನಪರಿಷತ್ ಸದಸ್ಯ ಶಾಂತಾರಾಮ ಸಿದ್ದಿ ಮಾತನಾಡಿ, ಕಲೆ ಉಳಿಯಬೇಕಾದರೆ, ಕಲಾವಿದರು ಉಳಿಯಬೇಕು. ಸಂಸ್ಕೃತಿ ಉಳಿಯಬೇಕಾದರೆ ಸುಸಂಸ್ಕೃತರು ಇರಬೇಕು. ಹೀಗೆಯೇ ಯಾವುದೇ ಕ್ಷೇತ್ರ ಉಳಿಯಬೇಕಾದರೆ ಆಯಾ ಕ್ಷೇತ್ರದ ಪರಿಣತರು ಇರಬೇಕು ಎಂದರು.ಎಂ.ಆರ್. ಹೆಗಡೆ ಕುಂಬ್ರಿಗುಡ್ಡೆ, ವಿನಾಯಕ ಭಟ್ಟ ಮೂರೂರು, ಡಿ. ಶಂಕರ ಭಟ್ಟ ಅವರಿಗೆ ಸಂಕಲ್ಪ ಪ್ರಶಸ್ತಿ ನೀಡಿ ಗೌರವಿಸಲಾಯಿತು.ಸನ್ಮಾನಿತರ ಪರವಾಗಿ ಹಿರಿಯ ಪತ್ರಕರ್ತ ವಿನಾಯಕ ಭಟ್ಟ ಮೂರೂರು ಮಾತನಾಡಿ, ಸಜ್ಜನ ರಾಜಕಾರಣದ ಕಾರಣ ಪ್ರಮೋದ ಹೆಗಡೆ ರಾಜಕಾರಣದಲ್ಲಿ ಯಶಸ್ವಿಯಾಗಲಿಲ್ಲ. ಆದರೂ ಕಲೆ, ಸಂಸ್ಕೃತಿ ಬೆಳೆಸುವ ಕಾರ್ಯ ಮಾಡುತ್ತಿದ್ದಾರೆ. ನನಗೆ ನೀಡಿದ ಈ ಪ್ರಶಸ್ತಿ ಇನ್ನೂ ಹೆಚ್ಚಿನ ಉತ್ತಮ ಕೆಲಸ ಮಾಡಲು ಪ್ರೇರಣೆ ನೀಡಿದೆ ಎಂದರು. ಸಿದ್ದಾಪುರದ ದಿ. ರಾಮಕೃಷ್ಣ ಹೆಗಡೆ ಚಿರಂತನದ ಅಧ್ಯಕ್ಷ ಶಶಿಭೂಷಣ ಹೆಗಡೆ ಮಾತನಾಡಿ, ಪಶ್ಚಿಮ ದೇಶಗಳಲ್ಲಿ ಕಲೆ, ಸಂಸ್ಕೃತಿ ಇಲ್ಲದ ಕಾರಣ ಇಂದು ನೆಮ್ಮದಿ ಇಲ್ಲವಾಗಿದೆ. ಈ ನೆಲದ ಕಲೆ ಸಂಸ್ಕೃತಿ ಸಮಾದಾನದ ಜೀವನ ನೀಡಲು ಕಾರಣವಾಗುತ್ತಿದೆ. ನಮ್ಮ ಜಿಲ್ಲೆ ಪ್ರತಿಭಾವಂತರ ಜಿಲ್ಲೆ. ವಿವಿಧ ಕ್ಷೇತ್ರಗಳ ಮೂರು ಸಾಧಕರನ್ನು ಸನ್ಮಾನಿಸಿರುವುದು ಔಚಿತ್ಯಪೂರ್ಣ ಎಂದರು.ಟಿಎಂಎಸ್ ಅಧ್ಯಕ್ಷ ಎನ್.ಕೆ. ಭಟ್ಟ ಅಗ್ಗಾಸಿಕುಂಬ್ರಿ, ಎಸ್.ವಿ. ಹೆಗಡೆ, ಸುಬ್ರಹ್ಮಣ್ಯ ಭಟ್ಟ, ಪಿ.ಜಿ. ಭಟ್ಟ ವಡ್ರಮನೆ ಉಪಸ್ಥಿತರಿದ್ದರು. ಸಂಕಲ್ಪ ಸಂಸ್ಥೆ ಅಧ್ಯಕ್ಷ ಪ್ರಮೋದ ಹೆಗಡೆ ಅಧ್ಯಕ್ಷತೆ ವಹಿಸಿದ್ದರು. ವೇದಾ ಭಟ್ಟ ಪ್ರಾರ್ಥಿಸಿದರು. ಪದ್ಮಾ ಪ್ರಮೋದ ಹೆಗಡೆ ಗುರುವಂದನೆ ಮಾಡಿದರು. ಸಂಕಲ್ಪ ಸಂಚಾಲಕ ಪ್ರಸಾದ ಹೆಗಡೆ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಚಂದ್ರಕಲಾ ಭಟ್ಟ ಕಾರ್ಯಕ್ರಮ ನಿರೂಪಿಸಿದರು, ಮುಕ್ತಾ ಶಂಕರ ಸನ್ಮಾನ ಪತ್ರ ವಾಚಿಸಿದರು. ಡಾ. ರವಿ ಭಟ್ಟ ವಡ್ರಮನೆ ವಂದಿಸಿದರು.