ರೆಡ್‌ ಕ್ರಾಸ್‌ ಸಂಸ್ಥೆಗೂ ಧರ್ಮ-ರಾಜಕಾರಣ ಸೋಂಕು: ಚುನಾವಣೆಗೆ ಸಜ್ಜು!

| Published : Aug 20 2025, 01:30 AM IST

ರೆಡ್‌ ಕ್ರಾಸ್‌ ಸಂಸ್ಥೆಗೂ ಧರ್ಮ-ರಾಜಕಾರಣ ಸೋಂಕು: ಚುನಾವಣೆಗೆ ಸಜ್ಜು!
Share this Article
  • FB
  • TW
  • Linkdin
  • Email

ಸಾರಾಂಶ

ತುರ್ತು ಸಂದರ್ಭದಲ್ಲಿ ರಕ್ತದ ಅಗತ್ಯವಿದ್ದವರಿಗೆ ನೆನಪಾಗುವ ಮೊದಲ ಹೆಸರು ದಾವಣಗೆರೆ ರೆಡ್ ಕ್ರಾಸ್ ಸಂಸ್ಥೆ. ಇಂತಹ ಸಂಸ್ಥೆಯಲ್ಲೂ ಮೊದಲ ಬಾರಿಗೆ ಚುನಾವಣೆ ನಡೆಸುವ ಮೂಲಕ ಸೇವಾ ಮನೋಭಾವದ ಸಂಸ್ಥೆಯಲ್ಲಿ ರಾಜಕಾರಣ, ಜಾತಿ ರಾಜಕಾರಣ, ಧರ್ಮ ರಾಜಕಾಣರ ಕಾಲಿಡುವಂತೆ ಮಾಡಲು ತೆರೆಮರೆಯಲ್ಲೇ ವೇದಿಕೆ ಸಜ್ಜುಗೊಳ್ಳುತ್ತಿದೆ!

- ನಿಸ್ವಾರ್ಥ ಸೇವೆ ಸಂಸ್ಥೆ ಮೇಲೀಗ ಜಾತಿ ಕರಿನೆರಳು । ಶಾಮನೂರು, ಎಸ್ಸೆಸ್ಸೆಂ, ಡಾ.ಪ್ರಭಾ ಮಧ್ಯ ಪ್ರವೇಶಕ್ಕೆ ಮನವಿ

- - -

ನಾಗರಾಜ ಎಸ್‌. ಬಡದಾಳ್‌

ಕನ್ನಡಪ್ರಭ ವಾರ್ತೆ ದಾವಣಗೆರೆ

ತುರ್ತು ಸಂದರ್ಭದಲ್ಲಿ ರಕ್ತದ ಅಗತ್ಯವಿದ್ದವರಿಗೆ ನೆನಪಾಗುವ ಮೊದಲ ಹೆಸರು ದಾವಣಗೆರೆ ರೆಡ್ ಕ್ರಾಸ್ ಸಂಸ್ಥೆ. ಇಂತಹ ಸಂಸ್ಥೆಯಲ್ಲೂ ಮೊದಲ ಬಾರಿಗೆ ಚುನಾವಣೆ ನಡೆಸುವ ಮೂಲಕ ಸೇವಾ ಮನೋಭಾವದ ಸಂಸ್ಥೆಯಲ್ಲಿ ರಾಜಕಾರಣ, ಜಾತಿ ರಾಜಕಾರಣ, ಧರ್ಮ ರಾಜಕಾಣರ ಕಾಲಿಡುವಂತೆ ಮಾಡಲು ತೆರೆಮರೆಯಲ್ಲೇ ವೇದಿಕೆ ಸಜ್ಜುಗೊಳ್ಳುತ್ತಿದೆ!

ದಾವಣಗೆರೆ ಜನರು ಹೆಮ್ಮೆಪಡುವಂತೆ ತನ್ನ ನಿಸ್ವಾರ್ಥದಿಂದ ಸೇವೆ ಮಾಡಿಕೊಂಡು ಬಂದಿದ್ದ ಭಾರತೀಯ ರೆಡ್ ಕ್ರಾಸ್ ಸಂಸ್ಥೆಗೆ ಶಾಸಕ ಡಾ.ಶಾಮನೂರು ಶಿವಶಂಕರಪ್ಪ, ದೂಡಾ ಮಾಜಿ ಅಧ್ಯಕ್ಷ ಸಿ.ಕೇಶವಮೂರ್ತಿ, ಡಾ. ಬಿ.ಟಿ.ಅಚ್ಯುತ್, ಡಾ.ಶಶಿಕಲ ಕೃಷ್ಣಮೂರ್ತಿ, ನಿವೃತ್ತ ಡಿವೈಎಸ್ಪಿ ಕೆ.ಚಂದ್ರಪ್ಪ ಸೇರಿದಂತೆ ಅನೇಕ ಹಿರಿಯರ ಶ್ರಮವಿದೆ. ಅಂತಹ ಹಿರಿಯರು ಕಟ್ಟಿ, ಬೆಳೆಸಿದ್ದ ಸಂಸ್ಥೆಯಲ್ಲಿ ಇದೀಗ ಸದ್ದಿಲ್ಲದೇ ಚುನಾವಣೆಯೆಂಬ ಗುಮ್ಮ ನುಸುಳಿದೆ.

ಸಾವಿರಾರು ಸದಸ್ಯರನ್ನು ಹೊಂದಿರುವ ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಇಲ್ಲಿನ ದೇವರಾಜ ಅರಸು ಬಡಾವಣೆಯಲ್ಲಿದೆ. ಈ ಹಿಂದೆ ಶಾಸಕ ಡಾ.ಶಾಮನೂರು ಶಿವಶಂಕರಪ್ಪ ₹50 ಲಕ್ಷ ವೆಚ್ಚದಲ್ಲಿ ವ್ಯವಸ್ಥಿತ ಕಟ್ಟಡ ನಿರ್ಮಾಣವಾಗಲು ಕಾರಣರಾಗಿದ್ದರು. ಸ್ಮಾರ್ಟ್ ಸಿಟಿ ಯೋಜನೆಯಡಿ ಹಿಂದಿನ ವ್ಯವಸ್ಥಾಪಕ ನಿರ್ದೇಶಕ ರವೀಂದ್ರ ಮಲ್ಲಾಪುರ ಅತ್ಯಾಧುನಿಕವಾದ ₹65 ಲಕ್ಷ ಮೌಲ್ಯದ ಬ್ಲಡ್ ಬ್ಯಾಂಕ್‌ ಯೂನಿಟ್‌ ನೀಡಿ, ಸಂಸ್ಥೆಗೆ ಆಸರೆಯಾಗಿದ್ದರು. ಕಾಲಕಾಲಕ್ಕೆ ರಕ್ತದಾನಿಗಳ ಬಳಗ ದೊಡ್ಡದಾಗುತ್ತಿತ್ತು. ಆದರೆ, ಸೇವಾ ಮನೋಭಾವದ, ಸಮಾನ ಮನಸ್ಕ ಹಿರಿಯರು, ಕಿರಿಯರು ಕಟ್ಟಿ, ಬೆಳೆಸಿದ್ದ ಸಂಸ್ಥೆಯಲ್ಲಿ ಇದೀಗ ರಾಜಕೀಯ, ಜಾತಿ ಲೆಕ್ಕಾಚಾರ ಕಾಲಿಡುವುದರೊಂದಿಗೆ ಶಾಮನೂರು ಶಿವಶಂಕರಪ್ಪ ರೆಡ್ ಕ್ರಾಸ್ ಭವನವನ್ನು ನಿಗದಿತ ಉದ್ದೇಶದಿಂದಲೇ ಮರೆಮಾಚುವ ಕೆಲಸ ಸದ್ದಿಲ್ಲದೇ ಸಾಗುತ್ತಿದೆ.

2017ಕ್ಕಿಂತ ಮುಂಚೆ ರೆಡ್ ಕ್ರಾಸ್‌ ಸಂಸ್ಥೆ ಬಗ್ಗೆ ಯಾರೂ ತಲೆಕೆಡಿಸಿಕೊಂಡಿರಲಿಲ್ಲ. ಆದರೆ, ಇದೇ ಸಂಸ್ಥೆಯ ಲೆಟರ್ ಹ್ಯಾಂಡ್, ಸೀಲ್‌ಗಳನ್ನು ಇಟ್ಟುಕೊಂಡು ಸಾಕಷ್ಟು ಲಾಭ ಮಾಡಿಕೊಳ್ಳುವುದನ್ನು ಅರಿತವರಿಂದಾಗಿ ಇಂದು ಸಂಸ್ಥೆ ಚುನಾವಣೆ ಹೊಸ್ತಿಲಿಗೆ ಬಂದು ನಿಂತಿದೆ. ಈ ಸಂಸ್ಥೆಯಲ್ಲಿ ರಾಜಕೀಯ ಹಸ್ತಕ್ಷೇಪವಿರಲಿಲ್ಲ. ಮಠ, ಮಂದಿರ, ಮಸೀದಿ, ಚರ್ಚ್‌ಗಳ ನೆರಳು ಬಿದ್ದಿರಲಿಲ್ಲ. ಯಾವುದೇ ನಿರ್ದಿಷ್ಟ ಜಾತಿಯ ಕರಿನೆರಳು ಬಿದ್ದಿರಲಿಲ್ಲ. ಆದರೆ, ಯಾವಾಗ ಧಾರ್ಮಿಕ ಮುಖಂಡರೊಬ್ಬರು ಸಂಸ್ಥೆಯಲ್ಲಿ ಚುನಾವಣೆ ನಡೆಸುವಂತೆ ಕರೆ ಮಾಡಿ ಹೇಳಿದರೋ ಆಗ ದಶಕಗಳಿಂದಲೂ ನಿಸ್ವಾರ್ಥದಿಂದ ರೆಡ್ ಕ್ರಾಸ್ ಸಂಸ್ಥೆಯಲ್ಲಿ ಸೇವೆ ಮಾಡಿಕೊಂಡು ಬಂದಿದ್ದವರಿಗೆ ಸೇವೆಗೆ ಇಲ್ಲಿ ಬೆಲೆಯೇ ಇಲ್ಲವೆಂಬುದು ಅರಿವಾದಂತಾಗಿದೆ. ಈಗ ಒಬ್ಬೊಬ್ಬರೇ ಹಿಂದೆ ಸರಿಯುತ್ತಿರುವುದು ನಿಜಕ್ಕೂ ಆತಂಕಕಾರಿ.

ಒಂದು ಸಲವೂ ರಕ್ತದಾನ ಮಾಡದ ವ್ಯಕ್ತಿಗಳು ರೆಡ್ ಕ್ರಾಸ್ ಸಂಸ್ಥೆಯನ್ನು ತಮ್ಮ ಕಪಿಮುಷ್ಟಿಯಲ್ಲಿಟ್ಟುಕೊಳ್ಳಲು ಹವಣಿಸುತ್ತಿದ್ದಾರೆ. ಪರಿಣಾಮ ಹಿರಿಯ, ಕಿರಿಯ ವೈದ್ಯರು, ಮಹಿಳಾ ವೈದ್ಯರು, ಕನಿಷ್ಠ 15ಕ್ಕೂ ಹೆಚ್ಚು ಸಲ ಹಗಲಿರುಳೆನ್ನದೇ ನಿಸ್ವಾರ್ಥದಿಂದ ರಕ್ತದಾನ ಮಾಡಿದವರು, ವಿದ್ಯಾರ್ಥಿ, ಯುವಜನರು, ರಕ್ತದಾನಿಗಳು, ಸ್ವಯಂ ಸೇವಕರು ರೆಡ್ ಕ್ರಾಸ್‌ ಸಂಸ್ಥೆಯಿಂದಲೇ ವಿಮುಖರಾಗತೊಡಗಿದ್ದಾರೆ. ಸಂಸ್ಥೆಯ ಕೆಲವರ ವರ್ತನೆಯಿಂದ ವಿಶೇಷವಾಗಿ ವೈದ್ಯರು ಸದ್ದಿಲ್ಲದೇ ದೂರವಾಗಿದ್ದಾರೆ. ಕೇವಲ ಮತ ಗಳಿಕೆ ಕಾರಣಕ್ಕೆ ಒಂದೇ ಜಾತಿ, ಸಮುದಾಯದವರ ಸದಸ್ಯತ್ವ ಸಂಖ್ಯೆ ಹೆಚ್ಚಿಸುತ್ತಿರುವುದನ್ನು ಗಮನಿಸಿದ ಅನೇಕರು ಸಂಸ್ಥೆಯಿಂದಲೇ ಒಂದು ಹೆಜ್ಜೆ ಹೊರ ಇಡಲಾರಂಭಿಸಿದ್ದಾರೆ ಎನ್ನಲಾಗಿದೆ.

ಬೈಲಾದಲ್ಲಿ ಅ‍ವಕಾಶ ಇದೆಯೇ?:

ಹಿಮಾಚಲ ಪ್ರದೇಶದಲ್ಲಿ ಕಾರ್ಯನಿರ್ವಹಿಸುತ್ತಿರುವ ದಾವಣಗೆರೆ ವೈದ್ಯರ ಕೈಯಲ್ಲಿ ಕೆಲಸ ಮಾಡುತ್ತಿದ್ದ ವೈದ್ಯರು ಇದೇ ಸಂಸ್ಥೆಗೆ ಅಂಬ್ಯುಲೆನ್ಸ್ ಕೊಡುಗೆ ನೀಡಿದ್ದರು. ಕೋವಿಡ್ ಹಾವಳಿ ವೇಳೆ ಸಂಸ್ಥೆಯ ಸೇವೆ ಗಮನಾರ್ಹವಾದುದು. ಸದ್ಯಕ್ಕೆ ಸಂಸ್ಥೆಯಲ್ಲಿ 15 ಸದಸ್ಯರ ಸ್ಥಾನಗಳ ಪೈಕಿ 8 ಸ್ಥಾನಕ್ಕೆ ಚುನಾವಣೆ, 7 ಸ್ಥಾನಕ್ಕೆ ನಾಮ ನಿರ್ದೇಶನ ಮಾಡಿಸಲು ಕೆಲವರು ಪ್ರಭಾವಿ ಧಾರ್ಮಿಕ ನೇತಾರರ ಮೂಲಕ ಒತ್ತಡ ಹೇರಿಸುತ್ತಿದ್ದಾರೆಂಬ ಸುದ್ದಿ ಊರ ತುಂಬಾ ಹರಡಿದೆ. ಆದರೆ, ರೆಡ್ ಕ್ರಾಸ್ ಸಂಸ್ಥೆ ಬೈಲಾದಲ್ಲಿ ಇದಕ್ಕೆ ಅ‍ವಕಾಶ ಇದೆಯೇ ಎಂಬ ಪ್ರಶ್ನೆ ಎದ್ದಿದೆ.

- - -

(ಬಾಕ್ಸ್‌-1) * ಡಿಸಿ ಅಧಿಸೂಚನೆ: ಚುನಾವಣೆ ಕಸರತ್ತು ಶುರು ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಚುನಾವಣೆಗೆ ಜಿಲ್ಲಾಧಿಕಾರಿ ಅಧಿಸೂಚನೆ ಹೊರಡಿಸಿದ್ದಾರೆ. ಈಗಾಗಲೇ ಲೋಕಸಭೆ, ವಿಧಾನಸಭೆ, ಪಾಲಿಕೆ, ಜಿಪಂ, ತಾಪಂ, ಗ್ರಾಪಂ ಚುನಾವಣೆಗಳಲ್ಲಿ ಮತದಾರರಿಗೆ ಆಮಿಷವೊಡ್ಡುವಂತೆ, ಇಲ್ಲಿಯೂ ತೆರೆಮರೆಯ ಚಟುವಟಿಕೆ ಶುರುವಾಗಿವೆ. ಕಾಂಗ್ರೆಸ್‌- ಬಿಜೆಪಿ ಮಧ್ಯೆ ರೆಡ್ ಕ್ರಾಸ್ ಸಂಸ್ಥೆ ಮೇಲೆ ಹಿಡಿತ ಹೊಂದಲು ಪ್ರಯತ್ನ ನಡೆದಿದೆಯೇ ಎಂಬ ಅನುಮಾನ ಸಹಜವಾಗಿದೆ. ಆದರೆ, ಇಲ್ಲಿವರೆಗೆ ಈ ಸಂಸ್ಥೆಯಲ್ಲಿ ಪಕ್ಷಾತೀತವಾಗಿದ್ದವರಲ್ಲಿ ಈಗ ರಾಜಕೀಯ ಮತ್ತು ಜಾತಿ ವಿಷದ ನಂಜು ತುಂಬಿಕೊಂಡಂತಿದೆ. ಸೇವಾ ಮನೋಭಾವದ ಸಂಸ್ಥೆಯಲ್ಲಿ ನೂರಾರು ಮಾಹಿತಿ ಹಕ್ಕು ಅರ್ಜಿ ಸಲ್ಲಿಸಿ, ಅಧಿಕಾರ ಹಿಡಿದವರೂ ಇದ್ದಾರೆಂಬುದೇನೂ ಗೌಪ್ಯವಾಗಿಲ್ಲ.

- - -

(ಬಾಕ್ಸ್‌-2) * ಜನಪ್ರತಿನಿಧಿಗಳ ಮಧ್ಯ ಪ್ರವೇಶಕ್ಕೆ ಮನವಿ ರಕ್ತದಾನ ಶಿಬಿರ, ರಕ್ತದಾನಕ್ಕೆ ಪ್ರೇರಣೆ, ರಕ್ತದಾನದ ಬಗ್ಗೆ ಉಪನ್ಯಾಸ, ಅರಿವು, ರಕ್ತ ತಪಾಸಣೆ, ರಕ್ತಗುಂಪು, ಪ್ರಥಮ ಚಿಕಿತ್ಸೆ ಶಿಬಿರ ಹೀಗೆ ನಿರಂತರ ಮಾಡಿಕೊಂಡು ಬಂದ ಸೇವಾ ಮನೋಭಾವದ ರೆಡ್ ಕ್ರಾಸ್ ಸಂಸ್ಥೆಯಲ್ಲಿ ಚುನಾವಣೆ ಬೇಡ, ಜಾತಿ ರಾಜಕೀಯ ಬೇಡ. ಸಂಸ್ಥೆಯ ಕಟ್ಟಡಕ್ಕೆ ಕಾರಣರಾದ ಶಾಸಕ ಡಾ.ಶಾಮನೂರು ಶಿವಶಂಕರಪ್ಪ, ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ, ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ ಈ ವಿಚಾರದಲ್ಲಿ ಮಧ್ಯ ಪ್ರವೇಶ ಮಾಡಿ, ಸೇವಾ ಮನೋಭಾವದ ಸಂಸ್ಥೆಯ ಹಿತಕಾಯಲು ಕ್ರಮ ಕೈಗೊಳ್ಳಬೇಕು. ಎಲ್ಲ ಜಾತಿ, ಧರ್ಮೀಯರು, ಸಮಾನ ಮನಸ್ಕರನ್ನು ಹೊಂದಿರುವ ರೆಡ್ ಕ್ರಾಸ್ ಸಂಸ್ಥೆಯನ್ನು ಉಳಿಸುವ, ಸಂಸ್ಥೆಗೆ ಮತ್ತೆ ನಿಸ್ವಾರ್ಥ ಸೇವಾ ಮನೋಭಾವದ ವೈದ್ಯರು, ಯುವಜನರು, ಹಿರಿಯರು ಮರಳುವಂತಹ ವಾತಾವರಣ ಕಲ್ಪಿಸಬೇಕು ಎಂಬುದು ಅನೇಕ ರಕ್ತದಾನಿಗಳು, ಸಂಸ್ಥೆ ಸದಸ್ಯರು ಒತ್ತಾಯ.

- - -

(ಬಾಕ್ಸ್‌-3) * ರೆಡ್ ಕ್ರಾಸ್ ಚುನಾವಣೆ ವೇಳಾಪಟ್ಟಿ

- ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ 15 ಸ್ಥಾನ

- ಸಂಸ್ಥೆಯ 15ರಲ್ಲಿ 8 ಸ್ಥಾನಕ್ಕೆ ಚುನಾವಣೆ (ತಾತ್ಕಾಲಿಕ)- ಸೆ.15ಕ್ಕೆ ಚುನಾವಣೆ ನಡೆಯುವ ದಿನ - ಆ.22, ಅಜೀವ ಸದಸ್ಯತ್ವಕ್ಕೆ ಆಕ್ಷೇಪಣೆ ಸಲ್ಲಿಕೆಗೆ ಕಡೇ ದಿನ - ಅಜೀವ ಸದಸ್ಯರಿಗೆ ಮಾತ್ರ ಮತದಾನ, ನಾಮಪತ್ರ ಸಲ್ಲಿಕೆಗೆ ಅವಕಾಶ

- ಆ.23ರಂದು ಅಂತಿಮ ಮತದಾರರ ಪಟ್ಟಿ ಪ್ರಕಟಣೆ

- - -

-18ಕೆಡಿವಿಜಿ2.ಜೆಪಿಜಿ:

ದಾವಣಗೆರೆ ದೇವರಾಜ ಅರಸು ಬಡಾವಣೆಯ ಶಾಮನೂರು ಶಿವಶಂಕರಪ್ಪ ಭಾರತೀಯ ರೆಡ್ ಕ್ರಾಸ್ ಭವನ ಕಟ್ಟಡ.