ನಡೆ ನುಡಿಗಳಲ್ಲಿ ಧರ್ಮದ ಆಚರಣೆ ಬೇಕು

| Published : Oct 11 2024, 11:46 PM IST

ಸಾರಾಂಶ

ಧರ್ಮದಲ್ಲಿ ರಾಜಕೀಯ ಮತ್ತು ಜಾತಿಯ ವಿಷ ಬೀಜ ಬೆರಸದೆ ಹೋದಲ್ಲಿ ಈ ಕಾರ್ಯಕ್ರಮ ಇನ್ನಷ್ಟು ಯಶಸ್ಸು ಕಾಣುತ್ತದೆ

ಲಕ್ಷ್ಮೇಶ್ವರ: ನಮ್ಮ ಜೀವನವೇ ಬೇರೆಯವರಿಗೆ ಸಂದೇಶವಾಗಬೇಕು, ಮಾತುಗಳು ಸಂದೇಶವಾಗಬಾರದು. ಧರ್ಮದ ಹಾದಿಯಲ್ಲಿ ಸಾಗುವುದು ಸುಲಭದ ಮಾತಲ್ಲ ಎಂದು ಬೆಳ್ಳಟ್ಟಿಯ ರಾಮಲಿಂಗೇಶ್ವರ ಮಠದ ಪೀಠಾಧಿಪತಿ ಬಸವರಾಜ ಮಹಾಸ್ವಾಮಿಗಳು ಹೇಳಿದರು.

ಪಟ್ಟಣದ ಸೋಮೇಶ್ವರ ದೇವಾಲಯದಲ್ಲಿ ಗುರುವಾರ ನಡೆದ ದುರ್ಗಾ ದೌಡ್ ಕಾರ್ಯಕ್ರಮದ ಮುಕ್ತಾಯ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿದರು. ಭಕ್ತಿ ಭಗವಂತನಿಗೆ ಸಮರ್ಪಣೆ ಮಾಡಿದಲ್ಲಿ ದೇವರು ಎಲ್ಲವನ್ನೂ ನಿಮಗೆ ನೀಡುತ್ತಾನೆ. ಭಗವಾನ್ ಬುದ್ಧ ನಡೆದ ನುಡಿಗಳು ನಮಗೆ ಆದರ್ಶವಾಗಬೇಕು.

ಭಕ್ತಿಯ ಪರಾಕಾಷ್ಠೆ ದುರ್ಗಾ ದೌಡ್ ಕಾರ್ಯಕ್ರಮ ಯಶಸ್ವಿಯಾಗಿ ನಡೆಯುತ್ತಿರುವುದು ಶ್ಲಾಘನೀಯ. ಧರ್ಮದಲ್ಲಿ ರಾಜಕೀಯ ಮತ್ತು ಜಾತಿಯ ವಿಷ ಬೀಜ ಬೆರಸದೆ ಹೋದಲ್ಲಿ ಈ ಕಾರ್ಯಕ್ರಮ ಇನ್ನಷ್ಟು ಯಶಸ್ಸು ಕಾಣುತ್ತದೆ. ಭಾರತೀಯರ ಧರ್ಮ ಮತ್ತು ಪರಂಪರೆಯ ತವರೂರಾಗಿದೆ.

ಮೂಢನಂಬಿಕೆ ಬಿಟ್ಟು ಧರ್ಮದ ಹಾದಿಯಲ್ಲಿ ಸಾಗುವ ಕಾರ್ಯದಿಂದ ದೇವರು ಒಲಿಯುತ್ತಾನೆ. ಧರ್ಮವನ್ನು ನೀವು ಕಾಪಾಡಿದರೆ ಧರ್ಮವು ನಿಮ್ಮನ್ನು ಕಾಪಾಡುತ್ತದೆ. ನಮ್ಮ ಮಕ್ಕಳಿಗೆ ಸಂಸ್ಕಾರ ಮತ್ತು ಸಂಪ್ರದಾಯ ಬೆಳೆಸುವ ಕಾರ್ಯ ನಾವು ಮಾಡುವುದು ಅವಶ್ಯವಾಗಿದೆ ಎಂದು ಹೇಳಿದರು.

ದಸರಾ ಹಬ್ಬದ ಅಂಗವಾಗಿ ನಡೆದ ದುರ್ಗಾ ದೌಡ್ ಕಾರ್ಯಕ್ರಮ 9 ದಿನಗಳವರೆಗೆ ಪಟ್ಟಣದಲ್ಲಿ ಧಾರ್ಮಿಕ ಜಾತ್ರೆಯ ವಾತಾವರಣ ಮೂಡಿಸಿದ್ದು ಕಂಡು ಬಂದಿತು.

ಸಭೆಯಲ್ಲಿ ಬಸವರಾಜ ಅರಳಿ ಕಾರ್ಯಕ್ರಮ ನಿರೂಪಿಸಿದರು. ಮಲ್ಲಗೌಡ ಪಾಟೀಲ ಸ್ವಾಗತಿಸಿದರು‌, ದೇವಪ್ಪ ಗಡೇದ ವಂದಿಸಿದರು. ಈ ವೇಳೆ ದುರ್ಗಾ ದೌಡ್ ಸಮಿತಿಯ ಸದಸ್ಯ ಗಂಗಾಧರ ಮೆಣಸಿನಕಾಯಿ, ನೀಲಪ್ಪ ಕರ್ಜಕ್ಕಣ್ಣವರ ಸೇರಿದಂತೆ ಅನೇಕರು ಇದ್ದರು. ಚಿಕ್ಕ ಮಕ್ಕಳು ದುರ್ಗಾ ದೇವಿಯ ವೇಷಭೂಷಣ ತೊಟ್ಟು ಸಂಭ್ರಮಿಸಿದ್ದು ಕಂಡು ಬಂದಿತು.