ಬ್ಯಾಡಗಿ ಶ್ರೀ ಜಗದ್ಗುರು ರೇಣುಕಾಚಾರ್ಯ ಜಯಂತ್ಯುತ್ಸವ ಅಂಗವಾಗಿ ಪಟ್ಟಣದ ಸಂಗಮೇಶ್ವರ ನಗರದ ರೇಣುಕಮಂದಿರದಲ್ಲಿ ಭಕ್ತರು ವಿಶೇಷ ಪೂಜೆ ಸಲ್ಲಿಸಿದರು.
ಬ್ಯಾಡಗಿ: ಧರ್ಮ ಮತ್ತು ಆಧ್ಯಾತ್ಮಿಕತೆ ಬದುಕಿಗೆ ಅನಿವಾರ್ಯ. ಮಾನವತೆಯಿಂದ ದೈವತ್ವದ ಕಡೆಗೆ ಒಯ್ಯುವ ಮಾರ್ಗವೇ ನಮ್ಮ ಸಂಸ್ಕೃತಿ ಎಂದು ಗಂಗಾಧರಶಾಸ್ತ್ರಿ ಹಿರೇಮಠ ಅಭಿಪ್ರಾಯ ವ್ಯಕ್ತಪಡಿಸಿದರು.
ಜಗದ್ಗುರು ರೇಣುಕಾಚಾರ್ಯ ಜಯಂತ್ಯುತ್ಸವ ಅಂಗವಾಗಿ ಪಟ್ಟಣದ ಸಂಗಮೇಶ್ವರ ನಗರದ ರೇಣುಕಮಂದಿರದಲ್ಲಿ ಭಕ್ತರ ವಿಶೇಷ ಪೂಜೆ ಸಲ್ಲಿಸಿ ಮಾತನಾಡಿದ ಅವರು, ಹೊರಗಿನ ಮಾಲಿನ್ಯ ಕಳೆಯಲು ಹೊರಟಿರುವ ಮನುಷ್ಯ ಅಧರ್ಮದ ಹಾದಿಯನ್ನು ಹಿಡಿದಿದ್ದು ಅಂತರಂಗದಲ್ಲಿರುವ ಕತ್ತಲೆಯನ್ನು ಕಳೆಯುವಲ್ಲಿ ವಿಫಲವಾಗಿದ್ದಾನೆ, ಧರ್ಮಾಚರಣೆ ಇಲ್ಲದ ಮನುಷ್ಯನ ವ್ಯಕ್ತಿತ್ವಕ್ಕೆ ನೆಲೆ-ಬೆಲೆ ಸಿಗುವುದಿಲ್ಲ ಎಂದರು.ಸಾವಿರಾರು ವರ್ಷಗಳ ಹಿಂದೆ ಜಗದ್ಗುರು ರೇಣುಕಾಚಾರ್ಯರು ವೀರಶೈವ ಧರ್ಮವನ್ನು ಸ್ಥಾಪಿಸುವ ಮೂಲಕ ಧರ್ಮ ಭೋಧಿಸಿದ್ದಾರೆ. ವೀರಶೈವ ಧರ್ಮದ ತತ್ವ ಸಿದ್ಧಾಂತಗಳು, ಆಚರಣೆಗಳು, ವಿಶ್ವದಲ್ಲಿ ಸಾಕಷ್ಟು ಮನ್ನಣೆ ಪಡೆದಿವೆ. ಮಾನವ ಧರ್ಮಕ್ಕೆ ಜಯವಾಗಲಿ ಧರ್ಮದಿಂದಲೇ ವಿಶ್ವಕ್ಕೆ ಶಾಂತಿ ಎನ್ನುವ ಸಂದೇಶ ಸಾರಿದ ಶ್ರೀಗಳು, ಸರ್ವರಿಗೂ ಧಾರ್ಮಿಕ ಸಂದೇಶ ನೀಡಿದ್ದು, ಅನಾದಿಕಾಲದಿಂದಲೂ ಸಮಬಾಳು, ಸಮಪಾಲು ಮತ್ತು ಸದಾಚಾರ ತತ್ವಗಳನ್ನು ತಿಳಿಸಿದ್ದಾರೆ ಎಂದರು.
ನಾವೆಲ್ಲರೂ ಧರ್ಮ ಸಿದ್ಧಾಂತಗಳನ್ನು, ಅಲ್ಲಿರುವ ಜೀವನಾದರ್ಶಗಳನ್ನು ಪಾಲಿಸುವ ಮೂಲಕ ಎಲ್ಲರಿಗೂ ಮಾದರಿಯಾಗಬೇಕಿದೆ, ಮಕ್ಕಳಿಗೆ ನೈತಿಕತೆ, ಧರ್ಮ ಸಂಸ್ಕಾರ, ಆಚಾರ ವಿಚಾರ ಕುರಿತು ತಿಳಿಸುವ ಮೂಲಕ ನಾವೆಲ್ಲರೂ ಉತ್ತಮ ಸಮಾಜ ನಿರ್ಮಿಸೋಣವೆಂದರು.ರಾಜಶೇಖರಯ್ಯ ಹಾಲೇವಾಡಿಮಠ ಮಾತನಾಡಿ, ಧರ್ಮವನ್ನು ಉಳಿಸಿ ಎನ್ನುವುದಕ್ಕಿಂತ ಹಿರಿಯರು ಹಾಕಿಕೊಟ್ಟ ಧರ್ಮದ ಹಾದಿಯಲ್ಲಿ ತೆರಳಬೇಕಿದೆ, ಮಠಾಧೀಶರು ಹಾಗೂ ಧರ್ಮ ಮುಖಂಡರ ಧ್ಯೇಯ ಹಾಗೂ ಆಶೀರ್ವಚನದಲ್ಲಿ ನೀಡಿರುವ ಸಂದೇಶಗಳನ್ನು ಆಚರಣೆಯಲ್ಲಿ ರೂಢಿಸಿಕೊಳ್ಳಬೇಕು ಎಂದರು. ಅರಿವೇ ಗುರು ಎನ್ನುವ ತತ್ವದಲ್ಲಿ ಎಲ್ಲವೂ ಅಡಗಿದ್ದು, ನಾವು ಕೈಗೊಳ್ಳುವ ನಿತ್ಯಕರ್ಮದಲ್ಲಿ ತಪ್ಪು ಸರಿಗಳನ್ನು ನಾವೇ ಕಂಡುಕೊಂಡಲ್ಲಿ ಸಮಾಜ, ಧರ್ಮ ಎರಡೂ ಉಳಿಯಲು ಸಾಧ್ಯವಿದೆ, ಮಾನವ ಧರ್ಮಕ್ಕೆ ಜಯವಾಗಲಿ ಎನ್ನುವ ಸಂದೇಶ ಭೂಮಿ ಇರುವವರೆಗೂ ಅಳಿಸಲಾರದು. ಇದೀಗ ಇಂತಹ ಗುರುಗಳ ಸಂದೇಶ ಹೆಚ್ಚು ಪ್ರಾಮುಖ್ಯತೆ ಪಡೆದಿದೆ ಎಂದರು. ಇದಕ್ಕೂ ಮುನ್ನ ಜಗದ್ಗುರು ರೇಣುಕಾಚಾರ್ಯ ಮತ್ತು ಶ್ರೀ ವೀರಭದ್ರಸ್ವಾಮಿ ದೇವರ ಮೂರ್ತಿಗಳಿಗೆ ಕುಮಾರೇಶ್ವರ ಪಾಠ ಶಾಲಾ ವಟುಗಳಿಂದ ಮಂತ್ರ ಘೋಷಣೆಗಳ ವಿಧಿವಿಧಾನದಿಂದ ಪೂಜೆ ಸಲ್ಲಿಸಿದರು. ಕಾರ್ಯಕ್ರಮದಲ್ಲಿ ಮೃತ್ಯುಂಜಯ ಹಿರೇಮಠ, ಶಿಕ್ಷಣ ಪ್ರೇಮಿ ಶೇಖರಗೌಡ್ರ ಕರೇಗೌಡ್ರ, ಕುಮಾರೇಶ್ವರ ಪಾಠಶಾಲೆ ಶಾಸ್ತ್ರಿಗಳಾದ ವೀರಯ್ಯಸ್ವಾಮಿ ಹಿರೇಮಠ, ಚನ್ನಬಸಯ್ಯ ಹಿರೇಮಠ, ಜಂಗಮ ಸಮಾಜ ಬಾಂಧವರಾದ ಶರಣಯ್ಯ ಬೂದಿಹಾಳಮಠ, ಗಿರೀಶ ಬೂದಿಹಾಳಮಠ, ರೇಣುಕಯ್ಯ ಮುಂದಿನಮನಿ, ಕರಬಸಯ್ಯ ಬರದೂರಮಠ, ಸಿದ್ದಲಿಂಗಯ್ಯ ಬೂದಿಹಾಳಮಠ, ಕಲ್ಪನಾ ಹಾಲೇವಾಡಿಮಠ, ವಾಗೀಶಸ್ವಾಮಿ ಹಿರೇಮಠ, ಮಲ್ಲಿಕಾರ್ಜುನ ಮೂಡ್ವಿ, ಕೊಟ್ರೇಶ ದೇವಿಶೆಟ್ರ, ಬಿ.ಎಸ್. ಚಿಕ್ಕಮಠ, ಲಿಂಗರಾಜ ರಂಗಾರೆ ಇದ್ದರು.