ಮಠಗಳಿಂದ ಧರ್ಮ, ಸಂಪ್ರದಾಯದ ಉಳಿವು

| Published : Mar 29 2025, 12:33 AM IST

ಸಾರಾಂಶ

ಸಾಮೂಹಿಕ ವಿವಾಹ ಕಾರ್ಯಕ್ರಮಗಳಲ್ಲಿ ಮದುವೆಯಾಗುವವರು ಪುಣ್ಯವಂತರು. ಇಲ್ಲಿ ಮದುವೆಯಾಗುವವರಿಗೆ ಹಲವಾರು ಶ್ರೀಗಳ ಆಶೀರ್ವಾದ ಸಿಗುತ್ತದೆ. ಮದುವೆಯಾದ ವಧು-ವರರು ಸಾಮರಸ್ಯದಿಂದ ಜೀವನ ನಡೆಸಬೇಕು.

ಕುಷ್ಟಗಿ:

ಧರ್ಮ, ಸಂಪ್ರದಾಯ ಉಳಿಸುವ ಕೆಲಸವನ್ನು ಮಠಗಳು ಮಾಡುತ್ತಿದ್ದು ಅವುಗಳ ಅಭಿವೃದ್ಧಿಗೆ ಭಕ್ತರ ಸಹಕಾರ ಅಗತ್ಯವಾಗಿದೆ ಎಂದು ಹುಬ್ಬಳ್ಳಿ ಮೂರುಸಾವಿರಮಠದ ಗುರುಸಿದ್ಧರಾಜಯೋಗೀಂದ್ರ ಸ್ವಾಮೀಜಿ ಹೇಳಿದರು.

ತಾಲೂಕಿನ ಬಿಜಕಲ್ ಗ್ರಾಮದ ಗುರುಪಾದೇಶ್ವರ ಮಠದಲ್ಲಿ ಶಿವಲಿಂಗ ಶ್ರೀಗಳ ತುಲಾಭಾರ ಹಾಗೂ ಸಾಮೂಹಿಕ ವಿವಾಹ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಮಾತನಾಡಿದ ಅವರು, ಬಿಜಕಲ್ ಗುರುಪಾದೇಶ್ವರ ಮಠದ ಶಿವಲಿಂಗ ಸ್ವಾಮೀಜಿ ಪುರಾಣ, ಪ್ರವಚನ, ಸಾಮೂಹಿಕ ವಿವಾಹ ಆಯೋಜಿಸುವ ಮೂಲಕ ಜನರ ಪ್ರೀತಿ ಗಳಿಸಿದ್ದಾರೆ. ಇವರು ಮಾಡುತ್ತಿರುವ ಸಾಮಾಜಿಕ ಕಾರ್ಯಗಳು ಮುಂದುವರಿಯಬೇಕು ಎಂದರು.

ಮಾಜಿ ಶಾಸಕ ಕೆ. ಶರಣಪ್ಪ ವಕೀಲರು ಮಾತನಾಡಿ, ಸಾಮೂಹಿಕ ವಿವಾಹ ಕಾರ್ಯಕ್ರಮಗಳಲ್ಲಿ ಮದುವೆಯಾಗುವವರು ಪುಣ್ಯವಂತರು. ಇಲ್ಲಿ ಮದುವೆಯಾಗುವವರಿಗೆ ಹಲವಾರು ಶ್ರೀಗಳ ಆಶೀರ್ವಾದ ಸಿಗುತ್ತದೆ. ಮದುವೆಯಾದ ವಧು-ವರರು ಸಾಮರಸ್ಯದಿಂದ ಜೀವನ ನಡೆಸಬೇಕು ಎಂದು ಹೇಳಿದರು.

ಕಾರ್ಯಕ್ರಮದ ಅಂಗವಾಗಿ ಬೆಳಗ್ಗೆ ಗುರುಪಾದೇಶ್ವರ ಹಾಗೂ ನಿರುಪಾದೇಶ್ವರ ಕರ್ತೃ ಗದ್ದುಗೆಗೆ ರುದ್ರಾಭಿಷೇಕ, ಮಹಾಭೀಷೇಕ ವಿವಿಧ ಧಾರ್ಮಿಕ ಪೂಜಾ ಕಾರ್ಯಕ್ರಮ, ಪುರಾಣ ಮಂಗಲೋತ್ಸವ ಜರುಗಿತು, ಧರ್ಮಸಭೆ ಹಾಗೂ ಶಿವಲಿಂಗಮಹಾಸ್ವಾಮಿಗಳ ತುಲಾಭಾರ ಕಾರ್ಯಕ್ರಮ, ಸಾಮೂಹಿಕ ವಿವಾಹಗಳು ನಡೆದವು.

ಈ ವೇಳೆ ಅನ್ನದಾನೇಶ್ವರ ಮಠದ ಮುಪ್ಪಿನ ಬಸವಲಿಂಗ ಸ್ವಾಮೀಜಿ, ಗುಲಗಂಜಿಮಠದ ಗುರುಪಾದ ಸ್ವಾಮೀಜಿ, ದಾಮ್ಮವಾಡಿಯ ಸರ್ಪಭೂಷಣ ಸ್ವಾಮೀಜಿ,ನಿಡಶೇಸಿಯ ಅಭಿನವ ಕರಿಬಸವಶಿವಾಚಾರ್ಯರು, ಗುಳೇದಗುಡ್ಡದ ಒಪ್ಪತ್ತೇಶ್ವರ ಸ್ವಾಮೀಜಿ, ದೋಟಿಹಾಳದ ಚಂದ್ರಶೇಖರ ದೇವರು ಸೇರಿದಂತೆ ಗ್ರಾಪಂ ಅಧ್ಯಕ್ಷರು, ಸದಸ್ಯರು, ಅಂಗನವಾಡಿ ಮೇಲ್ವಿಚಾರಕರು, ಗ್ರಾಮದ ಗಣ್ಯರು, ಸೇರಿದಂತೆ ಸಾವಿರಾರು ಜನರು ಇದ್ದರು.