12ನೇ ಶತಮಾನದಲ್ಲಿ ವಚನಕಾರರು ತಮ್ಮ ವಚನಗಳ ‌ಮೂಲಕ ಸತ್ಯ, ಕಾಯಕ ಸೇರಿದಂತೆ ಜೀವನ ಸಂದೇಶ ಮೌಲ್ಯ ನೀಡಿದ್ದಾರೆ. ಎಲ್ಲ ಧರ್ಮಗಳು ಜೀವನದ ಸೌಹಾರ್ದತೆಯ ಸಂದೇಶ ನೀಡಿವೆ .

ಧಾರವಾಡ:

ನಾಡಿನಲ್ಲಿ ಹಲವು ಧರ್ಮಗಳು ಸಾಮರಸ್ಯದ ಬಾಳ್ವೆಯ ಅರಿವು ಮತ್ತು ಅನುಭಾವ ನೀಡಿವೆ ಎಂದು ಬೆಂಗಳೂರು ವಿವಿ ಕನ್ನಡ ಅಧ್ಯಯನ ಕೇಂದ್ರದ ನಿರ್ದೇಶಕ ಪ್ರೊ. ಬಸವರಾಜ ಕಲ್ಗುಡಿ ಹೇಳಿದರು.ಕರ್ನಾಟಕ ವಿವಿ ಬಸವೇಶ್ವರ ಪೀಠವು ಕವಿವಿ ಸುವರ್ಣ ಮಹೋತ್ಸವ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ ಕನ್ನಡ ಸಾಹಿತ್ಯ ಪರಂಪರೆ ಮತ್ತು ಅನುಭಾವ ವಿಷಯದ ರಾಷ್ಟ್ರೀಯ ವಿಚಾರ ಸಂಕಿರಣ ಉದ್ಘಾಟಿಸಿದ ಅವರು, ದೇಶದಲ್ಲಿ ಸಾಮರಸ್ಯ ಹೊಂದಿದ ಜೀವನ ನಡೆಸಲು ಅನೇಕ ಧರ್ಮಗಳು ತಾತ್ವಿಕ ಚಿಂತನೆ ಹೊಂದಿವೆ. ದೇಶದಲ್ಲಿ ಅನೇಕ ತಾತ್ವಿಕ ಧಾರ್ಮಿಕ ಚಿಂತನೆಗಳು ತಮ್ಮದೇ ವಿಚಾರ ತತ್ವಗಳನ್ನು ‌ನೀಡಿವೆ. ಕೆಲವು ತಾತ್ವಿಕ ಚಿಂತನೆಗಳು ಶ್ರೇಣೀಕೃತ ಸಮಾಜ ‌ನಿರ್ಮಾಣ ಮಾಡಿದವು. ಜೈನ ಮತ್ತು ಬೌದ್ಧ ಧರ್ಮಗಳು ಕನ್ನಡ ನಾಡಿನಲ್ಲಿ ಸಾಮರಸ್ಯದ ಬಾಳ್ವೆಯ ಅರಿವು ನೀಡಿದವು. ಅಲ್ಲಮ ಮತ್ತು ‌ಮುಧುರ ಚೆನ್ನರು ಜ್ಞಾನ ಮತ್ತು ಅರಿವಿನ ಸಾಮರಸ್ಯ ನಡೆಸಲು ವಿಶೇಷ ಸಂದೇಶ ನೀಡಿದರು. ಉತ್ತರ ಕರ್ನಾಟಕವು ತನ್ನದೇ ಆದ ಕನ್ನಡ ಸಾಹಿತ್ಯದ ಪರಂಪರೆ ಮೂಲಕ ಸೌಹಾರ್ದತೆ, ಸಹನೆ ಸಾಮರಸ್ಯ ಒಳಗೊಂಡಿದೆ ಎಂದರು.

ಕವಿವಿ ಪ್ರಭಾರ ಕುಲಸಚಿವ ಪ್ರೊ. ಎ.ಎಚ್. ಅಗಡಿ ಮಾತನಾಡಿ, 12ನೇ ಶತಮಾನದಲ್ಲಿ ವಚನಕಾರರು ತಮ್ಮ ವಚನಗಳ ‌ಮೂಲಕ ಸತ್ಯ, ಕಾಯಕ ಸೇರಿದಂತೆ ಜೀವನ ಸಂದೇಶ ಮೌಲ್ಯ ನೀಡಿದ್ದಾರೆ. ಎಲ್ಲ ಧರ್ಮಗಳು ಜೀವನದ ಸೌಹಾರ್ದತೆಯ ಸಂದೇಶ ನೀಡಿವೆ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಕವಿವಿ ಕುಲಪತಿ ಪ್ರೊ. ಎ.ಎಂ. ಖಾನ್, ಭಾರತದಲ್ಲಿ ವಿಭಿನ್ನ ಪರಂಪರೆಗಳನ್ನು ಮನುಷ್ಯನಲ್ಲಿ ಅನುಭಾವ ಬೆಳೆಸುವಲ್ಲಿ ಸಹಾಯಕವಾಗಿವೆ. ಮನುಷ್ಯನಲ್ಲಿ ಸಹಬಾಳ್ವೆ ‌ನಡೆಸಲು ಅನೇಕ ಮಹಾತ್ಮರು ವಚನಗಳ ಮೂಲಕ ಸಂದೇಶ ನೀಡಿವೆ ಎಂದರು.ಈ ವೇಳೆ ಕಲಬುರಗಿ ಕೇಂದ್ರೀಯ ‌ವಿವಿ ಪ್ರಾಧ್ಯಾಪಕಿ ಡಾ. ಜಯದೇವಿ ಜಂಗಮಶೆಟ್ಟಿ ವಚನ ಸಂಗೀತ ‌ನಡೆಸಿಕೊಟ್ಟರು. ತಾಂತ್ರಿಕ ಗೋಷ್ಠಿಯಲ್ಲಿ ಅನುಭಾವದ ಪರಿಕಲ್ಪನೆ ಮತ್ತು ಪರಂಪರೆ, ದಾಸ ಸಾಹಿತ್ಯದಲ್ಲಿ ಅನುಭಾವ, ತಳಸಮುದಾಯದ ಸಾಹಿತ್ಯದಲ್ಲಿ ‌ಅನುಭಾವ ಕುರಿತು ಸಂಪನ್ಮೂಲ ವ್ಯಕ್ತಿಗಳು ಮಾತನಾಡಿದರು. ಬಸವೇಶ್ವರ ಪೀಠದ ಸಂಯೋಜಕ ಡಾ. ನಿಜಲಿಂಗಪ್ಪ ಮಟ್ಟಿಹಾಳ, ಸಿಂಡಿಕೇಟ್ ಸದಸ್ಯರಾದ ಶ್ಯಾಮ ಮಲ್ಲನಗೌಡರ, ಪ್ರೊ. ವೀರಣ್ಣ ರಾಜೂರ, ಡಾ. ಕೆ.ಆರ್. ದುರ್ಗಾದಾಸ, ಡಾ. ಈರಣ್ಣ ಇಂಜನಗೇರಿ,‌ ಪ್ರೊ. ಶಿರಾಳ ಶೆಟ್ಟಿ ಇದ್ದರು.