ಸಾರಾಂಶ
ದೇವಾಲಯ ನಿರ್ಮಾಣ ಮಾಡುವುದು ಸುಲಭದ ಕಾರ್ಯವಲ್ಲ. ನೂತನ ದೇವಾಲಯಗಳ ನಿರ್ಮಾಣದಿಂದ ಧಾರ್ಮಿಕ ಶ್ರದ್ಧೆ, ಭಕ್ತಿ ಮತ್ತು ಸಂಸ್ಕೃತಿಗಳ ಪುನರುತ್ಥಾನವಾಗುತ್ತದೆ ಎಂದು ಮೇಲಣಗವಿ ಮಠದ ಡಾ.ಶ್ರೀ ಮಲಯ ಶಾಂತಮುನಿ ದೇಶೀಕೇಂದ್ರ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು.
ಕನ್ನಡಪ್ರಭ ವಾರ್ತೆ ದಾಬಸ್‍ಪೇಟೆ
ದೇವಾಲಯ ನಿರ್ಮಾಣ ಮಾಡುವುದು ಸುಲಭದ ಕಾರ್ಯವಲ್ಲ. ನೂತನ ದೇವಾಲಯಗಳ ನಿರ್ಮಾಣದಿಂದ ಧಾರ್ಮಿಕ ಶ್ರದ್ಧೆ, ಭಕ್ತಿ ಮತ್ತು ಸಂಸ್ಕೃತಿಗಳ ಪುನರುತ್ಥಾನವಾಗುತ್ತದೆ ಎಂದು ಮೇಲಣಗವಿ ಮಠದ ಡಾ.ಶ್ರೀ ಮಲಯ ಶಾಂತಮುನಿ ದೇಶೀಕೇಂದ್ರ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು.ಸೋಂಪುರ ಹೋಬಳಿಯ ಶಿವಗಂಗೆಯ ಮರಿಹೊನ್ನಮ್ಮ ದೇವಿಯ ನೂತನ ಗರ್ಭಗುಡಿ ದೇವಾಲಯ ಲೋಕಾರ್ಪಣೆಗೊಳಿಸಿ ಮಾತನಾಡಿದ ಅವರು, ನಮ್ಮ ಪೂರ್ವಿಕರು ಆಚರಿಸಿ ಬೆಳೆಸಿಕೊಂಡು ಬಂದಿರುವ ಸಂಸ್ಕಾರಯುತ ಕಾರ್ಯಗಳನ್ನು ನಾವು ನಮ್ಮ ಮುಂದಿನ ಪೀಳಿಗೆಗೆ ಪರಿಚಯಿಸಬೇಕು. ದೇವಾಲಯಗಳಿಗೆ ತೆರಳಿದರೆ ಮಾನಸಿಕ ನೆಮ್ಮದಿ ಸಿಗುತ್ತದೆ. ಪ್ರತಿಯೊಬ್ಬರೂ ದೇವರು, ಗುರು ಹಿರಿಯರನ್ನು ಪೂಜಿಸಿ ಗೌರವಿಸುವುದರೊಂದಿಗೆ ಆರೋಗ್ಯಕರ ಸಮಾಜ ನಿರ್ಮಾಣಕ್ಕೆ ಮುಂದಾಗಬೇಕು ಎಂದರು.
ಹೊನ್ನಮ್ಮಗವಿ ಮಠದ ಶ್ರೀ ರುದ್ರಮುನಿ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಭೂಮಿ ಮೇಲೆ ಆಚಾರ, ವಿಚಾರ, ಧಾರ್ಮಿಕ ಕಾರ್ಯ ಇನ್ನೂ ಜೀವಂತವಾಗಿರಲು ದೇವಾಲಯಗಳ ಕೊಡುಗೆ ಬಹಳಷ್ಟಿದೆ. ದೇವಾಲಯಗಳು ಮಾನವನಲ್ಲಿ ಒಗ್ಗಟ್ಟನ್ನು ನಿರ್ಮಾಣ ಮಾಡುತ್ತವೆ. ದೇವಾಲಯಗಳ ನಿರ್ಮಾಣ ಕೇವಲ ಪ್ರದರ್ಶನವಲ್ಲ ಅದು ಆತ್ಮದ ಬೆಳಕು ಎಂದು ತಿಳಿಸಿದರು.ಕಂಬಾಳು ಮಠದ ಶ್ರೀ ಚನ್ನವೀರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ದೇವಾಲಯಗಳಲ್ಲಿ ಧನಾತ್ಮಕ ಶಕ್ತಿ ಅಡಗಿದೆ. ಆದ್ದರಿಂದ ಪ್ರತಿಯೊಬ್ಬರು ಕಷ್ಟದ ಸಮಯದಲ್ಲಿ ದೇವರ ಮೊರೆ ಹೋಗುತ್ತಾರೆ. ನಂಬಿಕೆಗೆ ಶಕ್ತಿಯಿದೆ, ಶ್ರದ್ಧೆ, ಭಕ್ತಿಯಿಂದ ನಿರ್ವಹಿಸಿದ ಪ್ರತಿ ಕಾರ್ಯ ದೇವರಿಗೆ ಸಲ್ಲುತ್ತದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಜಿಪಂ ಮಾಜಿ ಅಧ್ಯಕ್ಷ ಜಿ.ಮರಿಸ್ವಾಮಿ, ಕೆಐಆರ್ ಡಿಎಲ್ ಮಾಜಿ ಅಧ್ಯಕ್ಷ ಎಂ.ರುದ್ರೇಶ್, ಬಿಜೆಪಿ ಮುಖಂಡ ಮುನಿರಾಜು, ಸದ್ಭಕ್ತರಾದ ನಟರಾಜು, ಶಶಿಧರ್, ಉಮೇಶ್, ಹೊನ್ನಗಂಗಶೆಟ್ಟಿ, ಬಸವರಾಜು, ವಸಂತ್, ಅರ್ಚಕರಾದ ನಾಗೇಶ್ ನಾಯಕ್, ಮಣಿ ಇತರರಿದ್ದರು.