ಸಾರಾಂಶ
ಕಿನ್ನಿಗೋಳಿ ಸಾರ್ವಜನಿಕ ಗಣೇಶೋತ್ಸವ ಸಮಿತಿ ವತಿಯಿಂದ ೫೦ನೇ ವರ್ಷದ ಸಾರ್ವಜನಿಕ ಗಣೇಶೋತ್ಸವ, ಧಾರ್ಮಿಕ ಸಭೆ ನಡೆಯಿತು.
ಕನ್ನಡಪ್ರಭ ವಾರ್ತೆ ಕಿನ್ನಿಗೋಳಿ
ಧಾರ್ಮಿಕ ನಂಬಿಕೆ ಎಂಬುವುದು ಭಾರತೀಯರ ಹೃದಯದಲ್ಲಿದೆ. ಭಾರತದಲ್ಲಿ ಮೂರು ಲಕ್ಷ ಮಸೀದಿಗಳಿದ್ದು, ಮುಸ್ಲಿಂ ರಾಷ್ಟ್ರಗಳಲ್ಲಿ ಒಂದು ಹಿಂದು ದೇವಾಲಯ ನಿರ್ಮಾಣವಾದರೆ ಅದು ದೊಡ್ದ ವಿಷಯವಾಗುತ್ತದೆ ಎಂದು ಆಳ್ವಾಸ್ ಪ್ರತಿಷ್ಠಾನದ ಅಧ್ಯಕ್ಷ ಮೋಹನ್ ಆಳ್ವ ಹೇಳಿದರು.ಕಿನ್ನಿಗೋಳಿ ಸಾರ್ವಜನಿಕ ಗಣೇಶೋತ್ಸವ ಸಮಿತಿ ವತಿಯಿಂದ ಜರುಗಿದ ೫೦ನೇ ವರ್ಷದ ಸಾರ್ವಜನಿಕ ಗಣೇಶೋತ್ಸವದ ಧಾರ್ಮಿಕ ಸಭೆಯಲ್ಲಿ ಮಾತನಾಡಿದರು.
ಹೊರ ದೇಶದಲ್ಲಿ ಧಾರ್ಮಿಕ ಕ್ಷೇತ್ರಗಳು ಮ್ಯೂಸಿಯಂನಂತಿದೆ, ಭಾರತದಲ್ಲಿ ದೈವಸ್ಥಾನ, ದೇವಸ್ಥಾನಕ್ಕೆ ವಿಶೇಷ ಮಹತ್ವವಿದೆ. ಶ್ರೀರಾಮ ನಮಗೆ ಆದರ್ಶವಾಗಿದ್ದಾನೆ, ಭಾರತೀಯರು ಕೂಡಿ ಬಾಳುವ ಆದರ್ಶವನ್ನು ಕಲಿತಿದ್ದಾರೆ. ಸೂರ್ಯ ಚಂದ್ರರಿರುವ ಕಾಲದ ತನಕ ಕಿನ್ನಿಗೋಳಿಯ ಗಣೇಶೋತ್ಸವ ನಿರಂತರ ನಡೆಯಲಿ ಎಂದರು.ಧರ್ಮದರ್ಶಿ ಮೋಹನ್ ದಾಸ್ ಸುರತ್ಕಲ್ ಧಾರ್ಮಿಕ ಬಾಷಣ ಮಾಡಿದರು.
ಈ ಸಂದರ್ಭ ಯೋಗ ಕ್ಷೇತ್ರದಲ್ಲಿ ಸಾಧನೆಗೈದ ಮೇಘಶ್ರೀ ಕೊಡೆತ್ತೂರು, ಪ್ರತೀ ವರ್ಷ ಗಣೇಶೋತ್ಸವಕ್ಕೆ ಸಹಕರಿಸುತ್ತಿರುವ ಸುಕುಮಾರ ಶೆಟ್ಟಿ ತಾಳಿಪಾಡಿಗುತ್ತು ಮತ್ತು ಸೋಮಶೇಖರ್ ಅವರನ್ನು ಸನ್ಮಾನಿಸಲಾಯಿತು. ಗಣೇಶೋತ್ಸವ ಪ್ರಯುಕ್ತ ನಡೆಸಿದ ವಿವಿಧ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಿಸಲಾಯಿತು.ಚಿತ್ತರಂಜನ್ ಭಂಡಾರಿ ಐಕಳ ಬಾವ, ಧನಂಜಯ ಶೆಟ್ಟಿಗಾರ್, ಸುಕುಮಾರ ಶೆಟ್ಟಿ ತಾಳಿಪಾಡಿಗುತ್ತು, ಸುಧಾಕರ ಶೆಟ್ಟಿ, ಸೋಮಶೇಖರ್, ದುರ್ಗಾಪ್ರಸಾದ್ ಹೆಗ್ಡೆ, ನರಸಿಂಹ ಪೈ, ಶೇಖರ ಸಾಲಿಯಾನ್, ಮೂಲ್ಕಿ ಪೋಲಿಸು ಅಧಿಕಾರಿ ಅನಿತಾ. ಸಮಿತಿಯ ಅಧ್ಯಕ್ಷ ಕುಶಲ ಪೂಜಾರಿ ಮತ್ತಿತರರು ಉಪಸ್ಥಿತರಿದ್ದರು.
ವಿಶ್ವನಾಥ ಐಕಳ ಬಹುಮಾನ ವಿಜೇತರ ಪಟ್ಟಿ ವಾಚಿಸಿದರು. ಭುವನಾಭಿರಾಮ ಉಡುಪ ಸ್ವಾಗತಿಸಿದರು. ಲಕ್ಷ್ಮಣ್ ಬಿ.ಬಿ. ಏಳಿಂಜೆ ಕಾರ್ಯಕ್ರಮ ನಿರೂಪಿಸಿದರು. ದಿವಾಕರ ಕರ್ಕೇರ ವಂದಿಸಿದರು.