ಸಾರಾಂಶ
ಕನ್ನಡಪ್ರಭ ವಾರ್ತೆ ದಾವಣಗೆರೆ
ಗಣಪತಿ ಮೂರ್ತಿಗಳನ್ನು ಕೊಳಚೆ ಗುಂಡಿಯಲ್ಲಿ ಹಾಕುವುದು ನೋವಿನ ಸಂಗತಿ. ಮೊದಲಿದ್ದ ಸಂಪ್ರದಾಯ ಈಗ ಬದಲಾಗಿದೆ. ಧಾರ್ಮಿಕ ನಂಬಿಕೆಗಳು ಮತ್ತು ಶ್ರದ್ಧೆಗಳು ವಿಚಾರಪೂರ್ಣ ಆಗಿರಬೇಕು. ಪೂಜೆಗೆ ಶುದ್ಧ ನೀರನ್ನು ಬಳಸುವ ನಾವು, ವಿಸರ್ಜನೆಯ ಸಮಯದಲ್ಲಿ ಕೊಳಚೆ ನೀರನ್ನು ಬಳಸುವ ಬಗ್ಗೆ ಚಿಂತಿಸಬೇಕು ಎಂದು ಸಿರಿಗೆರೆ ತರಳಬಾಳು ಮಠದ ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಹೇಳಿದರು.ನಗರದ ಹದಡಿ ರಸ್ತೆಯಲ್ಲಿರುವ ಡಾ.ಶಾಮನೂರು ಶಿವಶಂಕರಪ್ಪ ಕಲ್ಯಾಣ ಮಂದಿರದಲ್ಲಿ ಶನಿವಾರ ಸಂಜೆ ಹಮ್ಮಿಕೊಂಡಿದ್ದ ತರಳಬಾಳು ಮಠದ ಲಿಂಗೈಕ್ಯ ಜಗದ್ಗುರು ಶಿವಕುಮಾರ ಸ್ವಾಮೀಜಿ 34ನೇ ಶ್ರದ್ಧಾಂಜಲಿ ಕಾರ್ಯಕ್ರಮಕ್ಕೆ ಭಕ್ತಿ ಸಮರ್ಪಣೆ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿದರು.
ನಮ್ಮ ಧಾರ್ಮಿಕ ನಂಬಿಕೆ ಮತ್ತು ಆಚರಣೆಗಳು ವಿಚಾರಪೂರ್ಣ ವಾಗಿರಬೇಕು. ಆದರೆ ಇತ್ತೀಚಿನ ದಿನಗಳಲ್ಲಿ ಗಣೇಶೋತ್ಸವ ನೋಡಿದರೆ ಮನಸ್ಸಿಗೆ ಬೇಸರವಾಗುತ್ತದೆ. ಗಣಪತಿ ಮೇಲಿರುವ ಜನರ ಶ್ರದ್ಧೆಯನ್ನು ನಾವು ಪ್ರಶ್ನೆ ಮಾಡುವುದಿಲ್ಲ. ಆದರೆ ಗಣಪತಿ ವಿಗ್ರಹವನ್ನು ಚರಂಡಿ, ಕೊಳಚೆ ಗುಂಡಿಯಲ್ಲಿ ಹಾಕುತ್ತಿರುವ ವಿಡಿಯೋಗಳನ್ನು ನೋಡಿ ಮನಸಿಗೆ ಬೇಸರವಾಯಿತು ಎಂದರು.ಸಿರಿಗೆರೆಯಿಂದ ಬಂದ ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರ ನೃತ್ಯಗಳು ಮನಸ್ಸಿಗೆ ಮುದ ನೀಡುತ್ತವೆ ಮತ್ತು ಉತ್ಸಾಹ ತುಂಬುತ್ತವೆ. ಇದು ಭಾಷಣಕ್ಕಿಂತ ಉತ್ತಮ. ಪಂಚ ರತ್ನ ಕೃತಿಗಳನ್ನು ಕಂಠಪಾಠ ಮಾಡಿದ್ದಾಗಿ ತಿಳಿಸಿದ ಅವರು, ಐದೂ ಕೃತಿಗಳಲ್ಲಿ ಪರಿಣಿತಿ ಪಡೆದಿರುವುದಾಗಿ ಹೇಳಿದರು.
ಪರಮಪೂಜ್ಯ ದೊಡ್ಡ ಗುರುಗಳು ಶರಣ ಸಾಹಿತ್ಯವನ್ನು ಜಗತ್ತಿನಾದ್ಯಂತ ಪ್ರಚಾರ ಮಾಡಬೇಕೆಂಬ ಆಶಯವನ್ನು ಹೊಂದಿದ್ದರು. ಅವರ ದೂರದೃಷ್ಟಿಗೆ ಅನುಗುಣವಾಗಿ ನಾವು ‘ಗಣಕ ವಚನ ಸಂಪುಟ’ವನ್ನು ಸಿದ್ಧಪಡಿಸಿದ್ದೇವೆ. ಈಗ 22 ಸಾವಿರ ಬಸವಾದಿ ಶರಣರ ವಚನಗಳು ಮೊಬೈಲ್ ಅಪ್ಲಿಕೇಶನ್‌ನಲ್ಲಿ ಲಭ್ಯವಾಗುವಂತೆ ಮಾಡಿದ್ದೇವೆ ಎಂದು ತಿಳಿಸಿದರು.ವಚನಗಳು ಹೀಬ್ರೂ, ಜರ್ಮನ್ ಮತ್ತು ರಷ್ಯನ್ ಭಾಷೆಗಳಿಗೆ ಭಾಷಾಂತರಗೊಂಡಿವೆ. ಆಂಗ್ಲ, ತಮಿಳು ಮತ್ತು ಮರಾಠಿ ಭಾಷೆಗಳಿಗೂ ಅನುವಾದ ಮಾಡಲಾಗಿದೆ. ಹೀಗೆ ದೊಡ್ಡ ಗುರುಗಳ ಆಶಯಕ್ಕೆ ಒಂದು ವೇದಿಕೆಯನ್ನು ಸಿದ್ಧಪಡಿಸಲಾಗಿದೆ ಎಂದು ಹೇಳಿದರು.
ಅಮೆರಿಕದ ದಕ್ಷಿಣ ಪ್ಲೋರಿಡಾ ವಿಶ್ವವಿದ್ಯಾಲಯದ ಪ್ರೊಪೆಸರ್ ಗಿಲ್ ಬೆನ್ ಹೆರಟ್ ಮಾತನಾಡಿ, ಕನ್ನಡ ಸಾಹಿತ್ಯ ಅತ್ಯಂತ ಪ್ರಾಚೀನ ಮತ್ತು ಗಂಭೀರವಾಗಿದೆ. ತುಂಬಾ ಸೂಕ್ಷ್ಮ ವಾಗಿದೆ. 20 ವರ್ಷದ ಹಿಂದೆ ನನಗೆ ಕನ್ನಡದ ಬಗ್ಗೆ ಆಸಕ್ತಿ ಬಂದಿತು. ಕರ್ನಾಟಕಕ್ಕೆ ಬಂದು ಬಾಷೆ ಕಲಿಯಲು ಒಂದು ವರ್ಷ ಬೇಕಾಯಿತು. ಕನ್ನಡ ಸಾಹಿತ್ಯದಲ್ಲಿ ಶರಣರ ವಚನ ಸಾಹಿತ್ಯ ತುಂಬಾ ವಿಶಿಷ್ಟ ವಾಗಿದೆ.ಪ್ರಪಂಚದಲ್ಲಿಯೇ ವಚನಗಳು ತುಂಬಾ ವಿಶಿಷ್ಠವಾದ ವಿಚಾರಗಳನ್ನು ಹೊಂದಿವೆ. ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮಿಗಳು ವಚನಗಳನ್ನು ಬೇರೆ ಭಾಷೆಗಳಿಗೆ ಅನುವಾದ ಮಾಡುವ ಮೂಲಕ ಇಡೀ ಜಗತ್ತಿಗೆ ವಚನಗಳ ಶ್ರೇಷ್ಠತೆ ತಿಳಿಯುವಂತೆ ಮಾಡಿದ್ದಾರೆ ಎಂದರು.ಜಿಲ್ಲಾ ಕಸಾಪ ಅಧ್ಯಕ್ಷ ಬಿ.ವಾಮದೇವಪ್ಪ, ಜಿಪಂ ಮಾಜಿ ಸದಸ್ಯ ಮಹಾಬಲೇಶ್ವರ ಗೌಡ, ಸಾಧು ಸದ್ಧರ್ಮ ವೀರಶೈವ ಸಂಘದ ಕಾರ್ಯದರ್ಶಿ ಸಂಗಮೇಶ್ವರ ಗೌಡ, ಉದ್ಯಮಿ ಶ್ರೀನಿವಾಸ ಶಿವಗಂಗಾ, ಪಾಲಿಕೆ ಮಾಜಿ ಸದಸ್ಯ ಶಿವನಳ್ಳಿ ರಮೇಶ್, ಕಕ್ಕರಗೊಳ್ಳ ಬಸವನಗೌಡ ಹಾಜರಿದ್ದರು.