ವಿವಿಧತೆ ಮತ್ತು ಏಕತೆಯಿಂದ ರಚನೆಯಾಗಿರುವ ಸಂವಿಧಾನವನ್ನು ಸರಿಯಾದ ರೀತಿಯಲ್ಲಿ ಅರ್ಥೈಸಿಕೊಳ್ಳದ ಯುವಜನತೆ ಸಾಮಾಜಿಕ ಜಾಲತಾಣಗಳಲ್ಲಿ ಬರುವ ಪ್ರಚೋದನಕಾರಿ ತಪ್ಪು ಸಂದೇಶಗಳಿಂದ ದಾರಿ ತಪ್ಪುವ ಹಂತಕ್ಕೆ ಬಂದು ನಿಂತಿದ್ದಾರೆ.
ಕನ್ನಡಪ್ರಭ ವಾರ್ತೆ ಮದ್ದೂರು
ಕಾನೂನು ಪಾಲನೆಗೆ ಅರಿವಿನ ಕೊರತೆಯಿಂದಾಗಿ ದೇಶದಲ್ಲಿಂದು ಧಾರ್ಮಿಕ ಸಂಘರ್ಷಗಳು ಹೆಚ್ಚಾಗುತ್ತಿದೆ ಎಂದು ಜೆಎಂಎಫ್‌ಸಿ ನ್ಯಾಯಾಲಯದ ಪ್ರಧಾನ ಸಿವಿಲ್ ನ್ಯಾಯಾಧೀಶರಾದ ಎಸ್.ಸಿ.ನಳಿನ ಆತಂಕ ವ್ಯಕ್ತಪಡಿಸಿದರು.ಪಟ್ಟಣದ ಮಹಿಳಾ ಸರ್ಕಾರಿ ಕಾಲೇಜಿನಲ್ಲಿ ತಾಲೂಕು ಕಾನೂನು ಸೇವಾ ಸಮಿತಿ, ಕಂದಾಯ ಇಲಾಖೆ ಮತ್ತು ವಕೀಲರ ಸಂಘದ ಸಹಯೋಗದೊಂದಿಗೆ ನಡೆದ ಸಂವಿಧಾನ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.
ದೇಶದಲ್ಲಿ ಹೊರಗಿನವರ ದಬ್ಬಾಳಿಕೆ ಮತ್ತು ಆಳ್ವಿಕೆಯಿಂದಾಗಿ ನಮ್ಮಲ್ಲಿ ಇಂದು ಪರಸ್ಪರ ಆಂತರಿಕ ಕಲಹಗಳು ಹೆಚ್ಚಾಗುತ್ತಿವೆ. ವಿವಿಧತೆ ಮತ್ತು ಏಕತೆಯಿಂದ ರಚನೆಯಾಗಿರುವ ಸಂವಿಧಾನವನ್ನು ಸರಿಯಾದ ರೀತಿಯಲ್ಲಿ ಅರ್ಥೈಸಿಕೊಳ್ಳದ ಯುವಜನತೆ ಸಾಮಾಜಿಕ ಜಾಲತಾಣಗಳಲ್ಲಿ ಬರುವ ಪ್ರಚೋದನಕಾರಿ ತಪ್ಪು ಸಂದೇಶಗಳಿಂದ ದಾರಿ ತಪ್ಪುವ ಹಂತಕ್ಕೆ ಬಂದು ನಿಂತಿದ್ದಾರೆ ಎಂದರು.ಸಂವಿಧಾನ ಕೇವಲ ಒಂದು ಜಾತಿ ಮತ್ತು ಜನರಿಗೆ ಮಾತ್ರ ಸೀಮಿತವಾಗಿದೆ ಎಂಬುದು ತಪ್ಪು ಕಲ್ಪನೆ. ಇಂತಹ ಪ್ರವೃತ್ತಿ ಜನರಿಂದ ತೊಲಗಬೇಕು. ಸಂವಿಧಾನ ರೂಪಿಸಿದ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಕೇವಲ ಒಂದು ಜಾತಿ ಮತ್ತು ಜನಾಂಗಕ್ಕೆ ಸೀಮಿತವಾಗಿದ್ದಾರೆ ಎಂಬ ಭಾವನೆ ಇದೆ. ಇದನ್ನು ಬದಲಾವಣೆ ಮಾಡಿಕೊಂಡು ಅವರ ಸಾಧನೆಗಳಿಗೆ ಚುತಿ ತರುವಂತಹ ಕೆಲಸಗಳಾಗಬಾರದು ಎಂದರು.
ಒಂದನೇ ಅಪರ ಸಿವಿಲ್ ನ್ಯಾಯಾಧೀಶರಾದ ಸಿ.ಎಂ.ಪಾರ್ವತಿ ವಿದ್ಯಾರ್ಥಿಗಳಿಗೆ ಸಂವಿಧಾನ ಪೀಠಿಕೆ ಪ್ರತಿಜ್ಞಾವಿಧಿಗಳನ್ನು ಬೋಧಿಸಿದರು. ಕಾಲೇಜಿನ ರಾಜ್ಯಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಎ.ವಿ.ಶ್ರೀನಿವಾಸ್ ಸಂಪನ್ಮೂಲ ಭಾಷಣ ಮಾಡಿದರು.ಕಾರ್ಯಕ್ರಮದಲ್ಲಿ ಪ್ರಾಂಶುಪಾಲ ಪ್ರೊ.ಕೆ.ಬಿ.ನಾರಾಯಣ ಅಧ್ಯಕ್ಷತೆ ವಹಿಸಿದ್ದರು. ಕಂದಾಯ ಇಲಾಖೆ ಗ್ರೇಟ್ 2 ತಹಸೀಲ್ದಾರ್ ಸೋಮಶೇಖರ್, ರಾಜಶಾಸ್ತ್ರ ವಿಭಾಗದ ಪ್ರೊ.ಅಂತೋನಿ ಮೇರಿ, ವಕೀಲರ ಸಂಘದ ಅಧ್ಯಕ್ಷ ಎಂ.ಎನ್. ಶಿವಣ್ಣ, ಕಾರ್ಯದರ್ಶಿ ಎಂ.ಜೆ.ಸುಮಂತ್ ಭಾಗವಹಿಸಿದ್ದರು.
ಇಂದು ಮಾಯಾ ದ್ವೀಪ ನಾಟಕ ಪ್ರದರ್ಶನನಾಗಮಂಗಲ
ಪಟ್ಟಣದ ಕನ್ನಡ ಸಂಘ ವಿಶ್ವಸ್ಥ ಸಮಿತಿಯಿಂದ ಸರ್ಕಾರಿ ಪದವಿ ಪೂರ್ವಕಾಲೇಜು ಆವರಣದಲ್ಲಿ ಆಯೋಜಿಸಿರುವ 17 ನೇ ನಾಗರಂಗ ನಾಟಕೋತ್ಸವದ ಆರನೇ ದಿನವಾದ ನ.28ರ ಶುಕ್ರವಾರ ಸಂಜೆ 7.15ಕ್ಕೆ ಬೆಂಗಳೂರಿನ ನೆನಪು ಕಲ್ಚರಲ್ ಅಂಡ್ ಎಜುಕೇಷನಲ್ ಚಾರಿಟಬಲ್ ಟ್ರಸ್ಟ್ ಪ್ರಸ್ತುತಿಯ ಪುನೀತ್ ರಂಗಾಯಣ ನಿರ್ದೇಶನದ ‘ಮಾಯಾ ದ್ವೀಪ’ ಎಂಬ ನಾಟಕ ಪ್ರದರ್ಶನಗೊಳ್ಳಲಿದೆ.ನಾಟಕದ ಸಾರಾಂಶ : ವಿಲಿಯಂ ಶೇಕ್ಸ್ ಪಿಯರ್‌ನ ಕೊನೆಯ ನಾಟಕ ದಿ ಟೆಂಪೆಸ್ಟ್ ನಾಟಕದ ಕನ್ನಡ ರೂಪಾರಂತರ. ಪಿತೂರಿಯಿಂದ ತನ್ನ ರಾಜ್ಯವನ್ನು ಕಳೆದುಕೊಂಡ ಮಿಲಾನ್‌ನ ಮಾಜಿ ಡ್ಯೂಕ್ ಪ್ರಾಸ್ಟೆರೋ ತನ್ನ ಮಾಂತ್ರಿಕ ಶಕ್ತಿ ಮೂಲಕ ರಾಜ್ಯವನ್ನು ವಾಪಸ್ ಪಡೆದು ಸೇಡಿಗೆ ಅವಕಾಶವಿದ್ದರೂ ಮಗಳ ಮಾತಿನಂತೆ ಎಲ್ಲರನ್ನು ಕ್ಷಮಿಸುವ ಚಿತ್ರಣವನ್ನು ಈ ನಾಟಕ ಕಟ್ಟಿಕೊಡುತ್ತದೆ.