ಸಾರಾಂಶ
ಚಿಕ್ಕಮಗಳೂರು, ದೇವಾಲಯ ನಿರ್ಮಾಣ ಮಾಡುವುದು ಸುಲಭದ ಕಾರ್ಯವಲ್ಲ. ನೂತನ ದೇವಾಲಯಗಳ ನಿರ್ಮಾಣದಿಂದ ಧಾರ್ಮಿಕ ಶ್ರದ್ಧೆ, ಭಕ್ತಿ ಮತ್ತು ಸಂಸ್ಕೃತಿಗಳ ಪುನರುತ್ಥಾನವಾಗುತ್ತದೆ ಎಂದು ಶಾಸಕ ಎಚ್.ಡಿ. ತಮ್ಮಯ್ಯ ಹೇಳಿದರು.
ಶ್ರೀ ದುರ್ಗಾಬದೇವಿ ನೂತನ ದೇವಾಲಯ ಲೋಕಾರ್ಪಣೆ, ವಿಗ್ರಹ ಪ್ರತಿಷ್ಠಾಪನೆ,ಕಳಸಾರೋಹಣ
ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುದೇವಾಲಯ ನಿರ್ಮಾಣ ಮಾಡುವುದು ಸುಲಭದ ಕಾರ್ಯವಲ್ಲ. ನೂತನ ದೇವಾಲಯಗಳ ನಿರ್ಮಾಣದಿಂದ ಧಾರ್ಮಿಕ ಶ್ರದ್ಧೆ, ಭಕ್ತಿ ಮತ್ತು ಸಂಸ್ಕೃತಿಗಳ ಪುನರುತ್ಥಾನವಾಗುತ್ತದೆ ಎಂದು ಶಾಸಕ ಎಚ್.ಡಿ. ತಮ್ಮಯ್ಯ ಹೇಳಿದರು.ಚಿಕ್ಕಮಗಳೂರು ತಾಲೂಕಿನ ಕೆ.ಬಿ.ಹಾಳ್ ಗ್ರಾಮದಲ್ಲಿ ಶುಕ್ರವಾರ ಶ್ರೀ ದುರ್ಗಾಬದೇವಿ ನೂತನ ದೇವಾಲಯ ಲೋಕಾರ್ಪಣೆ, ವಿಗ್ರಹ ಪ್ರತಿ ಷ್ಠಾಪನೆ ಮತ್ತು ಕಳಸಾರೋಹಣ ಪೂಜಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ನಮ್ಮ ಪೂರ್ವಿಕರು ಆಚರಿಸಿ ಬೆಳೆಸಿಕೊಂಡು ಬಂದಿರುವ ಸಂಸ್ಕಾರಯುತ ಕಾರ್ಯಗಳನ್ನು ನಾವು ನಮ್ಮ ಮುಂದಿನ ಪೀಳಿಗೆಗೆ ಪರಿಚಯಿಸಬೇಕು ಎಂದರು.ಯಾವುದೇ ದೇವಾಲಯಗಳ ನಿರ್ಮಾಣದ ನಂತರ ದೇವಾಲಯಗಳಲ್ಲಿ ಪೂಜೆ ಪುನಸ್ಕಾರಗಳೊಂದಿಗೆ ಅದರ ನಿರ್ವಹಣೆ ಕಾರ್ಯ ವ್ಯವಸ್ಥಿತ ವಾಗಿರಬೇಕು. ದೇವಾಲಯಗಳಿಗೆ ತೆರಳಿ ಹೊರ ಬಂದು ಮಾನಸಿಕವಾಗಿ ಶಾಂತಿಯುತವಾಗಿರಲು ಸಾಧ್ಯವಾಗುತ್ತದೆ. ಪ್ರತಿಯೊಬ್ಬರೂ ದೇವರು, ಗುರು ಹಿರಿಯರನ್ನು ಪೂಜಿಸಿ ಗೌರವಿಸುವುದರೊಂದಿಗೆ ಉತ್ತಮ ಸಮಾಜ ನಿರ್ಮಾಣಕ್ಕೆ ಮುಂದಾಗಬೇಕು ಎಂದರು.ಸಾಹಿತಿ ಚಟ್ನಳ್ಳಿ ಮಹೇಶ್ ಉಪನ್ಯಾಸ ನೀಡಿ, ಇತ್ತೀಚಿನ ದಿನಗಳಲ್ಲಿ ಸುಳ್ಳು, ಮೋಸ, ಅನ್ಯಾಯದ ಕೃತ್ಯಗಳು ಹೆಚ್ಚುತ್ತಿವೆ. ಆತ್ಮ ಸಾಕ್ಷಿಯ ಮೂಲಕ ಮಾನವನೆ ಮಹಾ ದೇವನಾಗಬೇಕು. ನರ ಹರನಾಗಬೇಕು, ಪ್ರತಿ ಮನೆಯೂ ಮಹಾ ಮನೆಯಾಗಬೇಕು ಎಂಬ ಸಂಕಲ್ಪದಿಂದ ನಮ್ಮ ಹಿರಿಯರು ದೇವಾಲಯ ನಿರ್ಮಾಣ ಮಾಡಿದ್ದಾರೆ. ಪ್ರತಿಯೊಬ್ಬರಲ್ಲಿರುವ ನಾನು ಎಂಬ ಅಸೂಯೆ, ಅಹಂಕಾರವನ್ನು ದೇವಾಲಯಗಳು ನಿರ್ನಾಮ ಮಾಡುತ್ತವೆ. ದೇವಾಲಯಗಳ ನಿರ್ಮಾಣ ಕೇವಲ ಪ್ರದರ್ಶನವಲ್ಲ ಅದು ಆತ್ಮದ ಬೆಳಕು ಎಂದು ತಿಳಿಸಿದರು.ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷೆ ರೇಖಾ ಹುಲಿಯಪ್ಪಗೌಡ ಮಾತನಾಡಿ, ದೇವಾಲಯಗಳಲ್ಲಿ ಧನಾತ್ಮಕ ಶಕ್ತಿ ಅಡಗಿದೆ. ಅದ್ದರಿಂದ ಪ್ರತಿ ಯೊಬ್ಬರು ಕಷ್ಟದ ಸಮಯದಲ್ಲಿ ದೇವರ ಮೊರೆ ಹೋಗುತ್ತಾರೆ. ನಂಬಿಕೆಗೆ ಶಕ್ತಿಯಿದೆ, ಶ್ರದ್ಧೆ, ಭಕ್ತಿಯಿಂದ ನಿರ್ವಹಿಸಿದ ಪ್ರತಿ ಕಾರ್ಯ ದೇವರಿಗೆ ಸಲ್ಲುತ್ತದೆ ಎಂದರು.ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ರವೀಂದ್ರ ಬೆಳವಾಡಿ ಮಾತನಾಡಿ, ಭೂಮಿ ಮೇಲೆ ಆಚಾರ, ವಿಚಾರ, ಧಾರ್ಮಿಕ ಕಾರ್ಯ ಇನ್ನೂ ಜೀವಂತ ವಾಗಿರಲು ದೇವಾಲಯಗಳ ಕೊಡುಗೆ ಬಹಳಷ್ಟಿದೆ. ದೇವಾಲಯಗಳು ಮಾನವನಲ್ಲಿ ಒಗ್ಗಟ್ಟನ್ನು ನಿರ್ಮಾಣ ಮಾಡುತ್ತವೆ. ಪ್ರತಿಯೊಬ್ಬರು ಒಂದು ಗೂಡಿ ಉತ್ತಮ ಕಾರ್ಯಕ್ಕೆ ಶ್ರಮಿಸಿದರೆ ಉತ್ತಮ ಸಮಾಜ ನಿರ್ಮಾಣವಾಗುತ್ತದೆ ಎಂದು ಹೇಳಿದರು.ಬಿಜೆಪಿ ಮುಖಂಡರಾದ ಪಲ್ಲವಿ ಸಿ.ಟಿ.ರವಿ, ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷೆ ಶುಭ ಸತ್ಯಮೂರ್ತಿ, ಗ್ರಾಪಂ ಅಧ್ಯಕ್ಷೆ ಛಾಯಾ ದಯಾನಂದ್ ಮಾತನಾಡಿದರು, ಈ ಸಂದರ್ಭದಲ್ಲಿ ಶ್ರೀ ದುರ್ಗಾಂಬ ದೇವಿ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಕೆ.ಟಿ.ರಂಗಶೆಟ್ಟಿ, ಗೌರವಾಧ್ಯಕ್ಷ ಕೆ.ಡಿ.ಪುಟ್ಟೇಗೌಡ, ಉಪಾಧ್ಯಕ್ಷ ಕೆ.ಎಸ್. ಸಿದ್ದೇಗೌಡ, ಖಜಾಂಚಿ ಕೆ.ಆರ್.ಗುರುಮೂರ್ತಿ, ಕಾರ್ಯದರ್ಶಿ ಕೆ.ಸಿ. ರಾಮೇಗೌಡ, ನಿವೃತ್ತ ಡಿವೈಎಸ್‌ಪಿ ಪುರುಷೋತ್ತಮ್ ಉಪಸ್ಥಿತರಿದ್ದರು. 31 ಕೆಸಿಕೆಎಂ 3ಚಿಕ್ಕಮಗಳೂರು ತಾಲೂಕಿನ ಕೆ.ಬಿ. ಹಾಳ್ ಗ್ರಾಮದಲ್ಲಿ ಶುಕ್ರವಾರ ನಡೆದ ನೂತನ ದೇವಾಲಯದ ಲೋಕಾರ್ಪಣೆ ಕಾರ್ಯಕ್ರಮವನ್ನು ಶಾಸಕ ಎಚ್.ಡಿ. ತಮ್ಮಯ್ಯ ಉದ್ಘಾಟಿಸಿದರು. ಚಟ್ನಳ್ಳಿ ಮಹೇಶ್, ರೇಖಾ ಹುಲಿಯಪ್ಪಗೌಡ, ಸಿದ್ದೇಗೌಡ ಇದ್ದರು.