ಒತ್ತಡದ ಬದುಕಿನಲ್ಲಿ ಸಿಲುಕಿ ಮನುಷ್ಯ ನೆಮ್ಮದಿಯನ್ನು ಕಳೆದುಕೊಳ್ಳುತ್ತಿರುವ ಇತ್ತೀಚಿನ ದಿನಮಾನಗಳಲ್ಲಿ, ಮನಸ್ಸಿಗೆ ಶಾಂತಿ ನೀಡುವ ಧಾರ್ಮಿಕ ಕಾರ್ಯಗಳ ಅಗತ್ಯತೆ ಹೆಚ್ಚಾಗಿದೆ ಎಂದು ಹಾವೇರಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಲಿಂಗಯ್ಯ ಹಿರೇಮಠ ಅಭಿಪ್ರಾಯಪಟ್ಟರು
ಬ್ಯಾಡಗಿ: ಒತ್ತಡದ ಬದುಕಿನಲ್ಲಿ ಸಿಲುಕಿ ಮನುಷ್ಯ ನೆಮ್ಮದಿಯನ್ನು ಕಳೆದುಕೊಳ್ಳುತ್ತಿರುವ ಇತ್ತೀಚಿನ ದಿನಮಾನಗಳಲ್ಲಿ, ಮನಸ್ಸಿಗೆ ಶಾಂತಿ ನೀಡುವ ಧಾರ್ಮಿಕ ಕಾರ್ಯಗಳ ಅಗತ್ಯತೆ ಹೆಚ್ಚಾಗಿದೆ ಎಂದು ಹಾವೇರಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಲಿಂಗಯ್ಯ ಹಿರೇಮಠ ಅಭಿಪ್ರಾಯಪಟ್ಟರು.ಪಟ್ಟಣದ ಶಿಕ್ಷಕರ ಕಾಲೋನಿಯಲ್ಲಿರುವ ಈಶ್ವರ ದೇವಸ್ಥಾನದಲ್ಲಿ ಯುಗಾದಿ ಹಬ್ಬ, ಹೊಸ ವರ್ಷದ ಅಂಗವಾಗಿ ನಡೆದ ವಿಶೇಷ ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಭಕ್ತರನ್ನುದ್ದೇಶಿಸಿ ಮಾತನಾಡಿದರು.ಮಠ-ಮಂದಿರಗಳಿಗೆ ಭೇಟಿ ನೀಡಿದಾಗ ಉಂಟಾಗುವ ಏಕಾಗ್ರತೆ ನಮ್ಮ ಮನಸ್ಸಿಗೆ ಶಾಂತಿ ಹಾಗೂ ನೆಮ್ಮದಿ ನೀಡುತ್ತದೆ. ಆರೋಗ್ಯಕರ ಜೀವನಕ್ಕಾಗಿ ಇಂತಹ ಧಾರ್ಮಿಕ ಚಟುವಟಿಕೆಗಳು ಅಗತ್ಯ. ಹಿಂದೂಗಳಿಗೆ ಯುಗಾದಿ ಅತ್ಯಂತ ಪವಿತ್ರ ಹಬ್ಬವಾಗಿದ್ದು, ಇಲ್ಲಿಂದಲೇ ಹೊಸ ವರ್ಷದ ಆರಂಭವಾಗುತ್ತದೆ. ಹೊಸ ವರ್ಷ ನಾಡಿನ ಜನತೆಗೆ ಶಾಂತಿ, ಸಮೃದ್ಧಿ ತರಲಿ” ಎಂದು ಶುಭಾಶಯ ಕೋರಿದರು. ಇದೇ ಸಂದರ್ಭದಲ್ಲಿ ದೇವಸ್ಥಾನದ ಅಭಿವೃದ್ಧಿಗಾಗಿ ದ್ವಿತೀಯ ಹಂತದಲ್ಲಿ ದೇಣಿಗೆ ನೀಡಿದ ದಾನಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು. ಕಾರ್ಯಕ್ರಮ ಅಧ್ಯಕ್ಷತೆಯನ್ನು ದೇವಸ್ಥಾನ ಸಮಿತಿ ಅಧ್ಯಕ್ಷ ಚಂದ್ರಶೇಖರ ಛತ್ರದ ವಹಿಸಿದ್ದರು. ಗೌರವಾಧ್ಯಕ್ಷ ಪಿ.ಎಂ.ಶಿಡೆನೂರ, ಕಸಾಪ ತಾಲೂಕಾಧ್ಯಕ್ಷ ಬಿ.ಎಂ. ಜಗಾಪೂರ, ಬಿ.ಎಫ್. ದೊಡ್ಡಮನಿ, ಆರ್.ಎಂ. ಪಾಟೀಲ, ಆರ್.ಡಿ. ವಾಲ್ಮೀಕಿ, ಮಹೇಶ ನಾಯಕ, ವೈ.ಟಿ. ಹೆಬ್ಬಳ್ಳಿ ಸೇರಿದಂತೆ ಅನೇಕ ಗಣ್ಯರು ವೇದಿಕೆಯಲ್ಲಿ ಉಪಸ್ಥಿತರಿದ್ದರು.