ಬರಗಾಲದಲ್ಲೂ ಧಾರ್ಮಿಕ ಕಾರ್ಯ ಶ್ಲಾಘನೀಯ

| Published : May 12 2024, 01:15 AM IST

ಸಾರಾಂಶ

ಈ ಬಾರಿ ರಾಜ್ಯ ಅತ್ಯಂತ ಭೀಕರ ಪರಿಸ್ಥಿತಿ ಎದುರಿಸುತ್ತಿದ್ದು, ಇಂತಹ ಬರಗಾಲದಲ್ಲಿಯೂ ಸಹ ಚಿಕ್ಕ ಗ್ರಾಮ ಭಟಪ್ಪನಹಳ್ಳಿಯಲ್ಲಿ ಸಾಮೂಹಿಕ ವಿವಾಹದಂತಹ ಧಾರ್ಮಿಕ ಕಾರ್ಯ ಮಾಡುತ್ತಿರುವುದು ಶ್ಲಾಘನೀಯ ಎಂದು ಕುಕನೂರಿನ ಅನ್ನದಾನೀಶ್ವರ ಶಾಖಾಮಠದ ಶ್ರೀ ಮಹಾದೇವ ಸ್ವಾಮೀಜಿ ಹೇಳಿದರು.

ಕುಕನೂರು: ಭೀಕರ ಬರಗಾಲದಲ್ಲೂ ಯಾವುದಕ್ಕೂ ಕೊರತೆಯಿಲ್ಲದಂತೆ ಆತಿಥ್ಯ ನೀಡುತ್ತಿರುವ ಭಟಪ್ಪನಹಳ್ಳಿ ಗ್ರಾಮಸ್ಥರು ನೀರು ಕೇಳಿದರೆ, ಊಟ ಮಾಡಿಸುವ ಕಳುಹಿಸುವ ಸಹೃದಯಿಗಳು ಎಂದು ಕುಕನೂರಿನ ಅನ್ನದಾನೀಶ್ವರ ಶಾಖಾಮಠದ ಶ್ರೀ ಮಹಾದೇವ ಸ್ವಾಮೀಜಿ ಬಣ್ಣಿಸಿದರು.

ತಾಲೂಕಿನ ಭಟಪ್ಪನಹಳ್ಳಿ ಗ್ರಾಮದಲ್ಲಿ ಜರುಗಿದ 27ನೇ ವರ್ಷದ ಶಿವಶರಣೆ ಶ್ರೀ ಭೀಮಾಂಬಿಕಾ ದೇವಿಯ ಪುರಾಣ ಮಹಾಮಂಗಳ, ಜಾತ್ರಾ ಮಹೋತ್ಸವ ಹಾಗೂ 21 ಜೋಡಿಗಳ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಈ ಬಾರಿ ರಾಜ್ಯ ಅತ್ಯಂತ ಭೀಕರ ಪರಿಸ್ಥಿತಿ ಎದುರಿಸುತ್ತಿದ್ದು, ಇಂತಹ ಬರಗಾಲದಲ್ಲಿಯೂ ಸಹ ಚಿಕ್ಕ ಗ್ರಾಮ ಭಟಪ್ಪನಹಳ್ಳಿಯಲ್ಲಿ ಸಾಮೂಹಿಕ ವಿವಾಹದಂತಹ ಧಾರ್ಮಿಕ ಕಾರ್ಯ ಮಾಡುತ್ತಿರುವುದು ಶ್ಲಾಘನೀಯ. ಈಗಿನ ಕಾಲದಲ್ಲಿ ಒಂದು ಮದುವೆ ಮಾಡುವುದೇ ಕಷ್ಟ ಸಾಧ್ಯವಾದ ಕಾರ್ಯ. ಆದರೆ ತಾಲೂಕಿನ ಪುಟ್ಟ ಗ್ರಾಮವಾದ ಭಟಪ್ಪನಹಳ್ಳಿಯಲ್ಲಿ 21 ಜೋಡಿಗಳ ಸಾಮೂಹಿಕ ವಿವಾಹ ಕಾರ್ಯ ಕೈಗೊಂಡಿರುವುದು ನಿಜಕ್ಕೂ ಹೆಮ್ಮೆ ಪಡುವಂತಹ ವಿಚಾರ. ಹಣ ಇರುವವರಿಗಿಂತ ಧಾರ್ಮಿಕ ಕಾರ್ಯ ಮಾಡುವವರೇ ನಿಜವಾದ ಶ್ರೀಮಂತರು ಎಂದು ಗ್ರಾಮಸ್ಥರು ತೋರಿಸಿಕೊಟ್ಟಿದ್ದಾರೆ. ಗ್ರಾಮದಲ್ಲಿ ಪ್ರತಿಯೊಬ್ಬರೂ ದಾನಿಗಳೇ ಆಗಿದ್ದಾರೆ. ಕುಡಿಯಲು ನೀರು ಕೇಳಿದರೆ ಮನೆಯೊಳಗೆ ಕರೆದು ಆಹಾರ ನೀಡುವ ಸಂಸ್ಕಾರ ಹೊಂದಿದ್ದಾರೆ. ಜಾತಿ, ಮತ, ಭೇದ-ಭಾವವಿಲ್ಲದ ಜನರನ್ನು ಭಟಪನಹಳ್ಳಿ ಗ್ರಾಮದಲ್ಲಿ ಕಾಣಬಹುದಾಗಿದೆ ಎಂದು ಹೇಳಿದರು.

ಲಕ್ಷಾಂತರ ರುಪಾಯಿಗಳನ್ನು ಖರ್ಚು ಮಾಡಿ ಮದುವೆಯಾಗುವುದಕ್ಕಿಂತ ಸಾಮೂಹಿಕ ವಿವಾಹಗಳಲ್ಲಿ ಸರಳವಾಗಿ ಮದುವೆ ಆಗುವುದರೊಂದಿಗೆ ಅನೇಕ ಮಠಾಧೀಶರ ಆಶೀರ್ವಾದ ಸೇರಿದಂತೆ ಇಡೀ ಗ್ರಾಮಸ್ಥರ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಜನತೆಯ ಆಶೀರ್ವಾದ ಪಡೆಯುವ ಸೌಭಾಗ್ಯ ಇಲ್ಲಿ ಕುಳಿತಿರುವ ನವಜೋಡಿಗಳದ್ದಾಗಿದ್ದು, ನೂತನ ದಂಪತಿ ಜೀವನದಲ್ಲಿ ಕಷ್ಟ ಸುಖಗಳನ್ನು ಸಮನಾಗಿ ಸ್ವೀಕರಿಸುತ್ತ ಹಿರಿಯರನ್ನು ಗೌರವಿಸುವಂತಹ ಸಂಸ್ಕಾರ ಹೊಂದಬೇಕು ಎಂದರು.

ಕೆಪಿಎಸ್‌ಸಿ ಮಾಜಿ ಸದಸ್ಯ ಎಚ್‌.ಡಿ. ಪಾಟೀಲ ಮಾತನಾಡಿದರು.

ಬೆಳಗ್ಗೆ ಗ್ರಾಮದಲ್ಲಿ ಪೂರ್ಣಕುಂಭ ಮೆರವಣಿಗೆ, ಆನಂತರ ಬೆದವಟ್ಟಿಯ ಶಿವಸಂಗಮೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳ ನೇತೃತ್ವದಲ್ಲಿ ಮಾಂಗಲ್ಯ ಧಾರಣೆ ಜರುಗಿತು.

ತುರುವಿಹಾಳದ ಅಮೋಘಸಿದ್ದೇಶ್ವರ ಮಠದ ಮಾದಯ್ಯ ಗುರುವಿನ ಸ್ವಾಮೀಜಿ, ಹಾಲುಮತ ಸಮಾಜದ ಗುರು ಶರಣಮ್ಮ ಗುರುವಿನಮಠ ಹಾಗು ವಿರೂಪಾಕ್ಷಯ್ಯ ಗುರುವಿನಮಠ, ತಾಪಂ ಮಾಜಿ ಉಪಾಧ್ಯಕ್ಷ ಕಳಕಪ್ಪ ಕಂಬಳಿ ಇತರರಿದ್ದರು.