ಸಾರಾಂಶ
ಲಕ್ಷ್ಮೇಶ್ವರ: ಗತ ಕಾಲದ ಇತಿಹಾಸವನ್ನು ಉತ್ಸವಗಳ ಮೂಲಕ ಮೆಲುಕು ಹಾಕಬೇಕು. ಆ ಮೂಲಕ ನಮ್ಮ ಶ್ರೀಮಂತ ಪರಂಪರೆಯನ್ನು ಮುಂದಿನ ತಲೆಮಾರಿಗೆ ದಾಟಿಸುವ ಗುರುತರ ಜವಾಬ್ದಾರಿ ನಿರ್ವಹಿಸಿದಂತಾಗುತ್ತದೆ ಎಂದು ಮಾಜಿ ತಾಪಂ ಸದಸ್ಯ ಹಾಗೂ ಸೋಮೇಶ್ವರ ಭಕ್ತರ ಸೇವಾ ಟ್ರಸ್ಟ್ ಕಮಿಟಿಯ ಖಜಾಂಚಿ ಸಿ.ಎಸ್. ಜಗಲಿ ಹೇಳಿದರು.
ಪಟ್ಟಣದ ಸೋಮೇಶ್ವರ ಭಕ್ತರ ಸೇವಾ ಟ್ರಸ್ಟ್ ಕಮಿಟಿ ಹಮ್ಮಿಕೊಂಡ ಪುಲಿಗೆರೆ ಪೌರ್ಣಮೆ ಕಾರ್ಯಕ್ರಮ ಮಾಲಿಕೆಯ 29ನೇ ಸಂಚಿಕೆ ಉದ್ಘಾಟಿಸಿ ಮಾತನಾಡಿದರು.ಪುಲಿಗೆರೆ ಉತ್ಸವ ಯಶಸ್ಸಿಗೆ ಕಾರಣಿಕರ್ತರಾದ ಪ್ರಮುಖ ಸೇವಾರ್ಥಿಗಳಿಗೆ ಇದೇ ವೇಳೆ ಸನ್ಮಾನಿಸಲಾಯಿತು.
ಈ ವೇಳೆ ಸನ್ಮಾನ ಸ್ವೀಕರಿಸಿ ಮಾತನಾಡಿದ ಬೆಂಗಳೂರಿನ ಭಾರತೀಯ ವಿದ್ಯಾಭವನದ ಜಂಟಿ ನಿರ್ದೇಶಕಿ ನಾಗಲಕ್ಷ್ಮೀ ಕೆ ರಾವ್, ಪುಲಿಗೆರೆ ಉತ್ಸವ ಕಾರ್ಯಕ್ರಮವು ಇನ್ಪೋಸಿಸ್ ಪ್ರತಿಷ್ಠಾನ ಕೊಡ ಮಾಡಿದ ಅತ್ಯಂತ ಶ್ರೇಷ್ಠ ಕೊಡುಗೆಯಾಗಿದೆ. ಭಾರತೀಯ ವಿದ್ಯಾಭವನವು ಈ ಕಾರ್ಯಕ್ರಮವನ್ನು ಅತ್ಯಂತ ಅಭಿಮಾನದಿಂದ ಕಳೆದ ಏಳು ವರ್ಷಗಳಿಂದ ಆಯೋಜಿಸುತ್ತಾ ಬಂದಿದೆ. ಪುಲಿಗೆರೆ ಉತ್ಸವವು ಹೊಸ ಅನುಭವ ನೀಡಿದೆ. ಈ ನಿಟ್ಟಿನಲ್ಲಿ ಲಕ್ಷ್ಮೇಶ್ವರ ಹಾಗೂ ಸುತ್ತಮುತ್ತಲಿನ ಜನರ ಸಹಕಾರ ನಾವು ಹೃದಯಪೂರ್ವಕವಾಗಿ ನೆನೆಯುತ್ತೇವೆ ಎಂದರು.ಅಧ್ಯಕ್ಷತೆ ವಹಿಸಿ ಮಾತನಾಡಿದ ಸೋಮೇಶ್ವರ ಭಕ್ತರ ಸೇವಾ ಟ್ರಸ್ಟ್ ಕಮಿಟಿಯ ಅಧ್ಯಕ್ಷ ಚಂಬಣ್ಣ ಬಾಳಿಕಾಯಿ, ಐತಿಹಾಸಿಕ ಪರಂಪರೆ ಮರು ಸೃಷ್ಟಿಸುವ ಪುಲಿಗೆರೆ ಉತ್ಸವ ಕಾರ್ಯಕ್ರಮವನ್ನು ಸಮರ್ಪಿಸುತ್ತಿರುವ ಇನ್ಫೋಸಿಸ್ ಪ್ರತಿಷ್ಠಾನ ಹಾಗೂ ಅದನ್ನು ಆಯೋಜಿಸುತ್ತಿರುವ ಬೆಂಗಳೂರಿನ ಭಾರತೀಯ ವಿದ್ಯಾಭವನದ ಈ ಶ್ರೇಷ್ಠ ಕಾರ್ಯ ಈ ಭಾಗದ ಜನತೆ ಎಂದಿಗೂ ಮರೆಯುವುದಿಲ್ಲ ಎಂದು ಅಭಿಪ್ರಾಯಪಟ್ಟರು.
ಬೆಂಗಳೂರಿನ ಭಾರತೀಯ ವಿದ್ಯಾ ಭವನದ ಜಂಟಿ ನಿರ್ದೇಶಕಿ ನಾಗಲಕ್ಷ್ಮಿ ಕೆ.ರಾವ್ ಹಾಗೂ ಲೆಕ್ಕಪತ್ರ ಸಹಾಯಕ ಗೋವಿಂದ ಕುಲಕರ್ಣಿ, ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ ಕಳಸಾಪುರ, ಪತ್ರಕರ್ತ ಶಿವಲಿಂಗಪ್ಪ ಹೊತ್ತಗಿಮಠ, ಅರ್ಚಕ ಸೋಮಣ್ಣ ಪೂಜಾರ, ಸೇವಾಕರ್ತ ಮಲ್ಲೇಶಪ್ಪ ಕಣವಿ, ನೀಲಪ್ಪ ಕನವಳ್ಳಿ ಹಾಗೂ ಮುಂತಾದವರನ್ನು ಸನ್ಮಾನಿಸಲಾಯಿತು.ವೇದಿಕೆಯಲ್ಲಿ ಟ್ರಸ್ಟ್ ಕಮಿಟಿಯ ಪದಾಧಿಕಾರಿ ಸುರೇಶ ರಾಚನಾಯ್ಕರ, ಗೀತಾದೇವಿ ಮಾನ್ವಿ ಇದ್ದರು.
ಕಾರ್ಯಕ್ರಮದಲ್ಲಿ ನೀಲಪ್ಪ ಕರ್ಜಕಣ್ಣವರ, ದೇವಣ್ಣ ಬಳಿಗಾರ, ಪಿ.ಬಿ.ಕರಾಟೆ, ಸಿ.ಜಿ.ಹಿರೇಮಠ, ಎಂ.ಕೆ.ಕಳ್ಳಿಮಠ, ವಿರುಪಾಕ್ಷಪ್ಪ ಆದಿ, ಬಸವರಾಜ ಮೆಣಸಿನಕಾಯಿ, ಸಿದ್ದನಗೌಡ ಬಳ್ಳೊಳ್ಳಿ, ಮಾಲಾದೇವಿ ದಂಧರಗಿ, ರಾಘವೇಂದ್ರ ಪೂಜಾರ, ಕಲಿವಾಳಮಠ, ಪಾರ್ವತಿ ಕಳ್ಳಿಮಠ, ಡಾ. ಹೂವಿನ, ಎನ್.ಆರ್. ಸಾತಪುತೆ ಇದ್ದರು.ಈ ವೇಳೆ ಕಲಾವಿದ ಪ್ರವೀಣ ಗಾಯಕರ ಅವರು ಚಿತ್ರಿಸಿದ ತೈಲ ಚಿತ್ರವನ್ನು ವಿದ್ಯಾಭವನದ ನಿರ್ದೇಶಕಿ ನಾಗಲಕ್ಷ್ಮೀ ರಾವ್ ಅವರಿಗೆ ಅರ್ಪಿಸಿದರು.
ರಾಕೇಶ್ ಆದಿ ಪ್ರಾರ್ಥಿಸಿದರು, ಸೋಮಶೇಖರ್ ಕೆರಿಮನಿ ನಿರೂಪಿಸಿದರು, ಟ್ರಸ್ಟ್ ಕಮಿಟಿಯ ಸಂಚಾಲಕ ಜಿ.ಎಸ್.ಗುಡಿಗೇರಿ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಚಂದ್ರು ನೇಕಾರ ವಂದಿಸಿದರು.