ಮುಂದಿನ ಒಂದು ತಿಂಗಳಲ್ಲಿ ನಗರದ ಎಲ್ಲಾ ಠಾಣೆಗಳ ಸುತ್ತ ನಿಲ್ಲಿಸಿರುವ ಜಪ್ತಿ ವಾಹನಗಳನ್ನು ಹೊರವಲಯಕ್ಕೆ ಸ್ಥಳಾಂತರಿಸಲಾಗುವುದು ಎಂದು ಬೆಂಗಳೂರು ನಗರಾಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ತಿಳಿಸಿದರು.
ಕನ್ನಡಪ್ರಭ ವಾರ್ತೆ ಬೆಂಗಳೂರು
ಮುಂದಿನ ಒಂದು ತಿಂಗಳಲ್ಲಿ ನಗರದ ಎಲ್ಲಾ ಠಾಣೆಗಳ ಸುತ್ತ ನಿಲ್ಲಿಸಿರುವ ಜಪ್ತಿ ವಾಹನಗಳನ್ನು ಹೊರವಲಯಕ್ಕೆ ಸ್ಥಳಾಂತರಿಸಲಾಗುವುದು ಎಂದು ಬೆಂಗಳೂರು ನಗರಾಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ತಿಳಿಸಿದರು.ಬುಧವಾರ ನಗರದ ಜಯನಗರ ಪೊಲೀಸ್ ಠಾಣೆ ಸುತ್ತಮುತ್ತ ನಿಲ್ಲಿಸಿದ್ದ 111 ಜಪ್ತಿ ವಾಹನಗಳ ಸ್ಥಳಾಂತರಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ನಗರದ ಎಲ್ಲ ಪೊಲೀಸ್ ಠಾಣೆಗಳ ಸುತ್ತ ಸುಮಾರು ಎಲ್ಲ ಬಗೆಯ 11,341 ಜಪ್ತಿ ವಾಹನಗಳು ಇದ್ದು, ಇವುಗಳನ್ನು ಒಂದು ತಿಂಗಳ ಅವಧಿಯಲ್ಲಿ ನಗರದ ಹೊರವಲಯದ ಏಳು ಸ್ಥಳಗಳಲ್ಲಿ ನೀಡಲಾಗಿರುವ 26 ಎಕರೆ ಜಮೀನಿನಲ್ಲಿ ನಿಲ್ಲಿಸಲು ಅವಕಾಶ ಕಲ್ಪಿಸಲಾಗಿದೆ ಎಂದರು.
ಜಪ್ತಿ ಮಾಡಿದ ವಾಹನಗಳ ಪೈಕಿ ಕೆಲವು ಅಪಘಾತ, ಕೆಲವು ಕ್ರಿಮಿನಲ್ ಪ್ರಕರಣಗಳ ಸಂಬಂಧ ಜಪ್ತಿ ಮಾಡಲಾಗಿದೆ. ಇವುಗಳು ಠಾಣೆಗಳ ಸುತ್ತ ಅಡ್ಡಾದಿಡ್ಡಿಯಾಗಿ ನಿಂತಿವೆ. ಈ ವಾಹನಗಳಿಂದ ಪೊಲೀಸ್ ಠಾಣೆಗಳ ಸೌಂದರ್ಯದ ಜೊತೆಗೆ ನಗರದ ಅಂದವನ್ನೂ ಕೆಡಿಸುತ್ತಿವೆ. ಈ ವಾಹನಗಳಿಂದ ಕಸಕಡ್ಡಿ ತುಂಬಿರುವುದಲ್ಲದೆ, ನೈರ್ಮಲ್ಯ ಹಾಳಾಗುತ್ತಿದೆ. ಇವುಗಳಿಂದ ಪಾದಚಾರಿ ಓಡಾಟಕ್ಕೂ ಸಮಸ್ಯೆಯಾಗುತ್ತಿತ್ತು. ಈ ಕುರಿತು ನಗರದ ಶಾಸಕರು, ಸಂಸದರು, ಸಾರ್ವಜನಿಕರು ಅರ್ಜಿ ಸಲ್ಲಿಸಿ ಆದಷ್ಟು ಬೇಗ ಮುಕ್ತಿನೀಡುವಂತೆ ಒತ್ತಾಯಿಸಿದ್ದರು ಎಂದರು.ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ ಜಿಬಿಎ ಮುಖ್ಯ ಆಯುಕ್ತ ಮಹೇಶ್ವರರಾವ್, ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಜೊತೆ ಚರ್ಚಿಸಿ ನ್ಯಾಯಾಲಯದಲ್ಲಿ ಕೋರಿಕೆ ಸಲ್ಲಿಸಿ ಫಾಸ್ಟ್ ಟ್ರಾಕ್ ಕೋರ್ಟ್ ಆರಂಭಿಸಿ ಇವುಗಳನ್ನು ಆದಷ್ಟು ವಿಲೇ ಮಾಡಿಕೊಡಲು ಮನವಿ ಮಾಡಲಾಯಿತು. ಆದರೆ, ನ್ಯಾಯಾಲಯ ಈ ವಾಹನಗಳ ತೆರವು ನಮ್ಮ ಆದ್ಯತೆ ಅಲ್ಲ ಎಂದು ತಿಳಿಸಿತ್ತು, ನಂತರ ಪೊಲೀಸ್ ಇಲಾಖೆಗೆ ಪ್ರತ್ಯೇಕ ಜಾಗ ಕೊಟ್ಟರೆ ಇವುಗಳನ್ನು ನಗರದ ಹೊರವಲಯದಲ್ಲಿ ಇಟ್ಟುಕೊಳ್ಳಬಹುದು ಎಂದು ಸಲಹೆ ನೀಡಿದರು.
ಕಂದಾಯ ಸಚಿವರು ನಗರದ ಹೊರವಲಯದಲ್ಲಿ ಏಳು ಕಡೆಗಳಲ್ಲಿ ಸುಮಾರು 26 ಎಕರೆ ಜಮೀನು ನೀಡಿ ಅದನ್ನು ಪೊಲೀಸ್ ಇಲಾಖೆ ಸ್ಥಳಾಂತರಿಸಿದರು. ಅಲ್ಲದೆ, ಸುತ್ತಮುತ್ತ ಬೇಲಿಯನ್ನೂ ಹಾಕಿಸಿಕೊಟ್ಟಿದೆ ಎಂದರು.ಬೀಡಾಡಿ ವಾಹನಗಳ ವಿರುದ್ಧ ಕ್ರಮ ಕೈಗೊಳ್ಳಲು 2,224 ಬೀಡಾಡಿ ವಾಹನಗಳಿಗೆ ಈಗಾಗಲೇ ನೊಟೀಸ್ ನೀಡಿದ್ದೇವೆ. 718 ವಾಹನಗಳಿಗೆ ನೊಟೀಸ್ ಜಾರಿ ಮಾಡಿದ್ದರೂ ವಾರಸುದಾರರು ಪತ್ತೆಯಾಗಿಲ್ಲ. ಅಂತಹ ವಾಹನಗಳನ್ನು ಹರಾಜು ಹಾಕಿ ವಿಲೇವಾರಿ ಮಾಡಲು ಕ್ರಮ ಕೈಗೊಳ್ಳಲಾಗಿದೆ. ಇದಲ್ಲದೆ, ಸರ್ಕಾರಿ ವಾಹನಗಳನ್ನೂ ವಿಲೇವಾರಿ ಮಾಡಲು ಆಯಾ ಇಲಾಖೆಗಳಿಗೆ ಸೂಚಿಸಲಾಗಿದೆ ಎಂದರು.
ಈ ಸಂದರ್ಭದಲ್ಲಿ ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್, ಸಂಚಾರ ವಿಭಾಗದ ಜಂಟಿ ಪೊಲೀಸ್ ಆಯುಕ್ತ ಕಾರ್ತಿಕ್ ರೆಡ್ಡಿ, ದಕ್ಷಿಣ ಪಾಲಿಕೆ ಆಯುಕ್ತ ಕೆ.ಎನ್. ರಮೇಶ್, ಡಿಸಿಪಿ ದಕ್ಷಿಣ ವಿಭಾಗದ ವಂಶಿಕೃಷ್ಣ ಇದ್ದರು.