ಭೂಸ್ವಾಧೀನ ಕಚೇರಿ ಸ್ಥಳಾಂತರ; ಪ್ರತಿಭಟಿಸಿದ ರೈತರು

| Published : Apr 03 2024, 01:31 AM IST

ಸಾರಾಂಶ

ಕಚೇರಿ ಸ್ಥಳಾಂತರ ಮಾಡುತ್ತಿದ್ದಾರೆಂಬ ವಿಷಯ ತಿಳಿಯುತ್ತಿದ್ದಂತೆ ನೆಲಮಂಗಲ ಹಾಗೂ ಮಾಗಡಿ ತಾಲೂಕಿನ ನೂರಾರು ರೈತರು ಜಮಾವಣೆಗೊಂಡು ಯಾವ ಕಾರಣಕ್ಕೆ ಸ್ಥಳಾಂತರ ಮಾಡುತ್ತಿದ್ದೀರಾ? ಯಾವುದೇ ಕಾರಣಕ್ಕೂ ಸ್ಥಳಾಂತರ ಬೇಡ ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ಕನ್ನಡಪ್ರಭ ವಾರ್ತೆ ದಾಬಸ್‌ಪೇಟೆ

ಭೂಮಿ ಕಳೆದುಕೊಂಡಿರುವ ರೈತರು ಸುಲಭವಾಗಿ ಭೂಪರಿಹಾರ ಪಡೆಯಲು, ಯಾವುದೇ ಸಮಸ್ಯೆಯಾಗಬಾರದೆಂಬ ದೃಷ್ಟಿಯಿಂದ ಪಟ್ಟಣದಲ್ಲಿ ಪ್ರಾರಂಭ ಮಾಡಿರುವ ವಿಶೇಷ ಭೂಸ್ವಾಧೀನ ಕಚೇರಿಯನ್ನು ಯಾರಿಗೂ ಮಾಹಿತಿ ನೀಡದೆ ಸ್ಥಳಾಂತರ ಮಾಡುತ್ತಿದ್ದಾರೆಂಬ ವಿಷಯ ಗೊತ್ತಾಗುತ್ತಿದ್ದಂತೆ ಕಚೇರಿಗೆ ನೂರಾರು ಜನರು ಭೇಟಿ ನೀಡಿ ಸ್ಥಳಾಂತರಿಸದಂತೆ ಬೀಗ ಹಾಕಿ ಪ್ರತಿಭಟನೆ ನಡೆಸಿದರು.

ಯೋಜನೆಯ ವಿವರ:

ಸರ್ಕಾರ 288 ಕಿಮೀ. ಉದ್ದದ 17000 ಕೋಟಿ ವೆಚ್ಚದಲ್ಲಿ ಸ್ಯಾಟಲೈಟ್ ನಗರ ರಿಂಗ್ ರಸ್ತೆ (ಎಸ್‌ಟಿಆರ್‌ಆರ್) ನಿರ್ಮಾಣಕ್ಕಾಗಿ ಬೆಂಗಳೂರು ಗ್ರಾಮಾಂತರ ಹಾಗೂ ರಾಮನಗರ ಜಿಲ್ಲಾ ವ್ಯಾಪ್ತಿಯ ಸುಮಾರು 340 ಹೆಕ್ಟೇರ್ ಹಾಗೂ ತಮಿಳುನಾಡಿನ 1009.8 ಹೆಕ್ಟೇರ್ ಸೇರಿ ಒಟ್ಟು 1349.8 ಹೆಕ್ಟೇರ್ ಎಕರೆ ಜಮೀನು 2018ರಲ್ಲಿ ಭೂಸ್ವಾಧೀನಪಡಿಸಿಕೊಂಡಿದೆ.

ಅನುಮಾನಗೊಂಡ ಅಧಿಕಾರಿಗಳ ನಡೆ:

ಪ್ರತಿನಿತ್ಯ ಕಚೇರಿಗೆ ಅಧಿಕಾರಿಗಳು ೯.೩೦ ಗಂಟೆಯ ನಂತರ ಆಗಮಿಸುತ್ತಿದ್ದರು, ಆದರೆ ಕಚೇರಿ ಸ್ಥಳಾಂತರಿಸುವ ಹಿನ್ನೆಲೆಯಲ್ಲಿ ೮ ಗಂಟೆಗೆ ಅಧಿಕಾರಿ ವೃಂದ ಕಚೇರಿಗೆ ಆಗಮಿಸಿದ್ದಾರೆ. ಇದನ್ನು ಗಮನಿಸಿದ ರೈತರು ಕಚೇರಿಗೆ ಆಗಮಿಸಿದಾಗ ಕಚೇರಿ ಸ್ಥಳಾಂತರದ ಬಗ್ಗೆ ರೈತರಿಗೆ ಗೊತ್ತಾಗಿದೆ.

ಜಮಾಯಿಸಿದ ನೂರಾರು ರೈತರು:

ಕಚೇರಿ ಸ್ಥಳಾಂತರ ಮಾಡುತ್ತಿದ್ದಾರೆಂಬ ವಿಷಯ ತಿಳಿಯುತ್ತಿದ್ದಂತೆ ನೆಲಮಂಗಲ ಹಾಗೂ ಮಾಗಡಿ ತಾಲೂಕಿನ ನೂರಾರು ರೈತರು ಜಮಾವಣೆಗೊಂಡು ಯಾವ ಕಾರಣಕ್ಕೆ ಸ್ಥಳಾಂತರ ಮಾಡುತ್ತಿದ್ದೀರಾ? ಯಾವುದೇ ಕಾರಣಕ್ಕೂ ಸ್ಥಳಾಂತರ ಬೇಡ ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಈ ಕಚೇರಿಯಲ್ಲಿ ವಿಶೇಷ ಭೂಸ್ವಾಧೀನಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿರುವ ಮನೋರಮಾ ಅವರೇ ಇದಕ್ಕೆಲ್ಲಾ ಕಾರಣ, ಅವರನ್ನು ತಕ್ಷಣ ಕೆಲಸದಿಂದ ವಜಾಗೊಳಿಸಬೇಕು. ಅವರು ಕಮಿಷನ್ ನೀಡುವಂತೆ ರೈತರ ಬಳಿ ಕೇಳುತ್ತಾರೆ, ಬೇಜವಾಬ್ದಾರಿ ಉತ್ತರ ನೀಡುತ್ತಾರೆ. ರೈತರು ಬಂದಿದ್ದಾರೆಂದು ಕೆಲಸಕ್ಕೆ ಗೈರಾಗಿದ್ದಾರೆಂದು ಆಕ್ರೋಶ ವ್ಯಕ್ತಪಡಿಸಿದರು. ಈ ಬಗ್ಗೆ ರೈತರು ಹಿರಿಯ ಅಧಿಕಾರಿ ಯೋಜನಾ ನಿರ್ದೇಶಕರಿಗೆ ಕರೆ ಮಾಡಿ ವಿಚಾರಿಸಿದಾಗ ನಾವು ಕಚೇರಿ ಸ್ಥಳಾಂತರಿಸುವಂತೆ ತಿಳಿಸಿಲ್ಲ. ಕಚೇರಿ ಸ್ಥಳಾಂತರಿಸುವ ಉದ್ದೇಶ ನಮ್ಮ ಮುಂದಿಲ್ಲ. ನಮಗೆ ಮಾಹಿತಿ ನೀಡದೇ ವಿಶೇಷ ಭೂಸ್ವಾಧೀನಾಧಿಕಾರಿಯವರು ಈ ನಿರ್ಧಾರ ತೆಗೆದುಕೊಂಡಿದ್ದಾರೆ, ಈ ಬಗ್ಗೆ ಮಾಹಿತಿ ಪಡೆಯುತ್ತೇನೆ ಎಂದು ತಿಳಿಸಿದರು.

ಶಾಸಕರ ಮಾತಿಗೂ ಡೋಂಟ್ ಕೇರ್ : ಈ ಹಿಂದೆ ವಿಶೇಷ ಭೂಸ್ವಾಧೀನಾಧಿಕಾರಿ ಮನೋರಮಾ ವಿರುದ್ಧ ಆರೋಪಗಳು ಕೇಳಿ ಬಂದಾಗ ಸ್ವತಃ ಶಾಸಕ ಎನ್.ಶ್ರೀನಿವಾಸ್ ಕಚೇರಿಗೆ ಭೇಟಿ ನೀಡಿ ಮುಂದೆ ಯಾವುದೇ ತಪ್ಪುಗಳು ನಡೆಯಬಾರದು. ರೈತರಿಗೆ ಗೌರವ ನೀಡಿ, ಕಮಿಷನ್ ಪಡೆಯಬೇಡಿ ಎಂದು ಬುದ್ದಿಮಾತು ಹೇಳಿದ್ದರೂ ಮತ್ತೆ ರೈತರನ್ನು ಅಗೌರವದಿಂದ ಕಾಣುತ್ತಿದ್ದಾರೆ ಎಂಬ ಆರೋಪ ರೈತರಿಂದ ಕೇಳಿಬಂದಿದೆ.

ಗ್ರಾಪಂ ಮಾಜಿ ಅಧ್ಯಕ್ಷ ಪಂಚಾಕ್ಷರಿ, ಶಿವಕುಮಾರ್, ಸುರೇಶ್, ರೈತ ಮುಖಂಡರಾದ ದೈವಕುಮಾರ್, ಉಮೇಶ್, ಕುಮಾರ್, ಮಹದೇವಯ್ಯ, ಚಂದ್ರಣ್ಣ, ಹನುಮಂತರಾಜು, ನಾಗರಾಜು ಮತ್ತಿತರಿದ್ದರು.