ಅಕ್ರಮ ರಸ್ತೆ ತೆರವಿಗೆ ಪಂಚಾಯಿತಿ ಅಧಿಕಾರಿಗಳ ಹಿಂದೇಟು

| Published : Sep 14 2024, 01:47 AM IST

ಅಕ್ರಮ ರಸ್ತೆ ತೆರವಿಗೆ ಪಂಚಾಯಿತಿ ಅಧಿಕಾರಿಗಳ ಹಿಂದೇಟು
Share this Article
  • FB
  • TW
  • Linkdin
  • Email

ಸಾರಾಂಶ

ರಾಮನಗರ ತಾಲೂಕಿನ ಮಾಯಗಾನಹಳ್ಳಿಯಲ್ಲಿನ ಮ್ಯಾಗ್ನೋಲಿಯ ಟೆಂಪಲ್ ಟ್ರೀ ಬಡಾವಣೆಯಲ್ಲಿ ಪಾರ್ಕ್ ಜಾಗವನ್ನು ಒತ್ತುವರಿ ಮಾಡಿಕೊಂಡು ಅಕ್ರಮವಾಗಿ ನಿರ್ಮಿಸಿರುವ ರಸ್ತೆ ತೆರವುಗೊಳಿಸಲು ಹಿಂದೇಟು ಹಾಕಿದ ಗ್ರಾಪಂ ಅಧಿಕಾರಿಗಳ ವಿರುದ್ಧ ಬಡಾವಣೆ ನಿವಾಸಿಗಳು ಶುಕ್ರವಾರ ಆಕ್ರೋಶ ವ್ಯಕ್ತಪಡಿಸಿದರು.

- ಮಾಯಗಾನಹಳ್ಳಿ ಗ್ರಾಪಂ ಅಧಿಕಾರಿಗಳನ್ನು ತರಾಟೆ ತೆಗೆದುಕೊಂಡ ನಿವಾಸಿಗಳು - ಮ್ಯಾಗ್ನೋಲಿಯ ಟೆಂಪಲ್ ಟ್ರೀ ಬಡಾವಣೆ ಪಾರ್ಕ್ ಜಾಗ ಒತ್ತುವರಿಕನ್ನಡಪ್ರಭ ವಾರ್ತೆ ರಾಮನಗರ

ತಾಲೂಕಿನ ಮಾಯಗಾನಹಳ್ಳಿಯಲ್ಲಿನ ಮ್ಯಾಗ್ನೋಲಿಯ ಟೆಂಪಲ್ ಟ್ರೀ ಬಡಾವಣೆಯಲ್ಲಿ ಪಾರ್ಕ್ ಜಾಗವನ್ನು ಒತ್ತುವರಿ ಮಾಡಿಕೊಂಡು ಅಕ್ರಮವಾಗಿ ನಿರ್ಮಿಸಿರುವ ರಸ್ತೆ ತೆರವುಗೊಳಿಸಲು ಹಿಂದೇಟು ಹಾಕಿದ ಗ್ರಾಪಂ ಅಧಿಕಾರಿಗಳ ವಿರುದ್ಧ ಬಡಾವಣೆ ನಿವಾಸಿಗಳು ಶುಕ್ರವಾರ ಆಕ್ರೋಶ ವ್ಯಕ್ತಪಡಿಸಿದರು.

ಮ್ಯಾಗ್ನೋಲಿಯಾ ಟೆಂಪಲ್ ಟ್ರೀ ಬಡಾವಣೆಯಲ್ಲಿರುವ ಉದ್ಯಾನದ ಪಾಥ್‌ ವೇಯನ್ನು ಅನಧಿಕೃತವಾಗಿ ಅಗಲೀಕರಣ ಮಾಡಿ ನಿರ್ಮಿಸಿರುವ ರಸ್ತೆಯನ್ನು ಪೂರ್ಣ ಪ್ರಮಾಣದಲ್ಲಿ ತೆರವುಗೊಳಿಸದೆ ಸ್ವಲ್ಪ ರಸ್ತೆ ಮಾತ್ರ ತೆರವುಗೊಳಿಸಲು ಗ್ರಾಪಂ ಪಿಡಿಒ ಮಾದೇಗೌಡ ಹಾಗೂ ಅಧಿಕಾರಿಗಳು ಮುಂದಾದರು. ಇದಕ್ಕೆ ಬಡಾವಣೆ ನಿವಾಸಿಗಳು ತೀವ್ರ ವಿರೋಧ ವ್ಯಕ್ತಪಡಿಸಿದರು.

ಪಾರ್ಕಿನ ಅಡಿಪಾಯದ ಕಲ್ಲುಗಳು, ಪಾರ್ಕಿನ ಕಬ್ಬಿಣದ ಬ್ಯಾರಿಕೇಡ್ ಗಳನ್ನು ಕಿತ್ತು ಹಾಕಿ 3 ಮೀಟರ್ ಪಾತ್ ವೇ ಅಗಲೀಕರಿಸಿ, 9 ಮೀಟರ್ ಅಗಲದ ರಸ್ತೆ ನಿರ್ಮಿಸಲಾಗಿದೆ. ಇದರಲ್ಲಿ ಗ್ರಾಪಂ ಸದಸ್ಯ ರಂಜಿತ್ ಭಾಗಿಯಾಗಿದ್ದು ನಿಯಮಾನುಸಾರ ರಸ್ತೆ ತೆರವುಗೊಳಿಸಬೇಕು. ಮೇಲಧಿಕಾರಿಗಳು ಸ್ಥಳದಲ್ಲಿದ್ದು ಅಕ್ರಮ ರಸ್ತೆ ತೆರವುಗೊಳಿಸುವ ಕಾರ್ಯ ಮಾಡಲಿ. ನೀವು ತೆರವು ಕಾರ್ಯ ಮಾಡದಂತೆ ನಿವಾಸಿಗಳು ಒತ್ತಾಯಿಸಿದರು.

ನಿವಾಸಿಗಳ ವಿರೋಧವನ್ನು ಲೆಕ್ಕಿಸದ ಪಂಚಾಯಿತಿ ಅಧಿಕಾರಿಗಳು 3 ಮೀಟರ್ ರಸ್ತೆಯನ್ನು ಮಾತ್ರ ತೆರವುಗೊಳಿಸಲು ಮುಂದಾದರು. ಇದೇ ಸಮಯಕ್ಕೆ ಗ್ರಾಪಂ ಸದಸ್ಯ ರಂಜಿತ್ ಸ್ಥಳಕ್ಕಾಗಮಿಸಿ ನಾನು ಬಂಡವಾಳ ಹಾಕಿ ರಸ್ತೆ ನಿರ್ಮಾಣ ಮಾಡಿದ್ದೀನಿ, ಮಾರ್ಕ್ ಮಾಡಿರುವಷ್ಟು ರಸ್ತೆಯನ್ನು ತೆರವುಗೊಳಿಸುವಂತೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಅಂತಿಮವಾಗಿ ಅಧಿಕಾರಿಗಳು 3 ಮೀಟರ್ ಅಕ್ರಮ ರಸ್ತೆಯನ್ನು ತೆರವುಗೊಳಿಸಿದರು.

ಈ ವೇಳೆ ಮಾತನಾಡಿದ ಬಡಾವಣೆ ನಿವಾಸಿ ಹಾಗೂ ವಕೀಲ ಮಹಮ್ಮದ್ ಮುನೀರ್, ಮಾಯಗಾನಹಳ್ಳಿ ಗ್ರಾಮದ ಸರ್ವೆ ನಂಬರ್ 42-1, 41-1 ಮತ್ತು ಇತರೆ ಜಮೀನುಗಳಿಗೆ ಅಂತಿಮ ಅನುಮೋದನೆಯಾದ ಮ್ಯಾಗ್ನೋಲಿಯಾ ಟೆಂಪಲ್ ಟ್ರೀ ವಿನ್ಯಾಸದಲ್ಲಿ 3.0 ಮೀಟರ್ ಕಾಲುದಾರಿಯನ್ನು(ಪಾತ್ ವೇ) ನಿವೇಶನಗಳಿಂದ ಉದ್ಯಾನವನಗಳನ್ನು ಬೇರ್ಪಡಿಸುವುದಕ್ಕೆ ಹಾಗೂ ಉದ್ಯಾನವನ್ನು ಸಮರ್ಪಕವಾಗಿ ಉಪಯೋಗಿಸಲು ಪೂರಕವಾಗುವಂತೆ ಯೋಜನಾ ದೃಷ್ಟಿಯಿಂದ ಕಾಯ್ದಿರಿಸಲಾಗಿದೆ. ಸದರಿ ಕಾಲುದಾರಿಯನ್ನು ಸಂಪರ್ಕ ರಸ್ತೆಯೆಂದು ಪರಿಗಣಿಸಿಲ್ಲ ಎಂದು ತಿಳಿಸಿದರು.

ಗ್ರಾಮದ 64-1, 73-1 ಮತ್ತು ಇತರೆ ಜಮೀನುಗಳಿಗೆ ಅಂತಿಮ ಅನುಮೋದನೆಯಾದ ವಿನ್ಯಾಸ ನಕ್ಷೆಯಲ್ಲಿನ ಈಶಾನ್ಯ ದಿಕ್ಕಿನಲ್ಲಿರುವ ರಸ್ತೆ ಮುಂದುವರೆಯದೇ ಅದೇ ಬಡಾವಣೆಯಲ್ಲಿ ಡೆಡ್ ಎಂಡ್ ಆಗಿರುತ್ತದೆ. ಈ ಎರಡೂ ಬಡಾವಣೆಗಳ ಮಧ್ಯೆ ಯಾವುದೇ ರಸ್ತೆ ಒಂದಕ್ಕೊಂದು ಸಂಪರ್ಕಿಸುವುದಿಲ್ಲ ಎಂಬ ಮಾಹಿತಿಯನ್ನು ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ನಗರ ಯೋಜಕ ಸದಸ್ಯರು ಪಿಡಿಒ ಅವರಿಗೆ ನೀಡಿದ್ದಾರೆ. ಆದರೂ ಅಕ್ರಮ ರಸ್ತೆ ತೆರವುಗೊಳಿಸಲು ಪಂಚಾಯಿತಿ ಅಧಿಕಾರಿಗಳು ಮೀನಮೇಷ ಎಣಿಸುತ್ತಿದ್ದಾರೆಂದು ಟೀಕಿಸಿದರು.

ಈ ಅಕ್ರಮ ರಸ್ತೆ ನಿರ್ಮಾಣಕ್ಕೆ ಕಾರಣವಾಗಿರುವ ಗ್ರಾಪಂ ಸದಸ್ಯ ರಂಜಿತ್ ರಾಮನಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪಾರ್ಕ್ ನ ಸಂಪನ್ಮೂಲಗಳನ್ನು ಇದ್ದ ಹಾಗೇ ರೆಡಿ ಮಾಡಿಸಿಕೊಡುತ್ತೇನೆ. ಇನ್ನು ಮುಂದೆ ಸದರಿ ವಿಚಾರವಾಗಿ ಅರ್ಜಿದಾರರ ತಂಟೆಗೆ ಹೋಗುವುದಿಲ್ಲ ಎಂದು ಹೇಳಿಕೆ ನೀಡಿದ್ದರು. ಆದರೀಗ ಅಕ್ಮ ರಸ್ತೆ ತೆರವುಗೊಳಿಸಲು ರಂಜಿತ್ ಅವರೇ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ನಾವು ಮೇಲಧಿಕಾರಿಗಳ ಗಮನಕ್ಕೆ ತಂದು ಅಕ್ರಮ ರಸ್ತೆ ತೆರವಿಗೆ ಹೋರಾಟ ಮುಂದುವರೆಸುತ್ತೇವೆ ಎಂದು ಮಹಮ್ಮದ್ ಮುನೀರ್ ಎಚ್ಚರಿಸಿದರು.

ಬಡಾವಣೆ ನಿವಾಸಿಗಳಾದ ವಿಜಯ ನರಸಿಂಹ, ಯತೀಂದ್ರ ಕುಮಾರ್, ಗೌರಿ, ಸಂಕರ್, ಭೀಮಣ್ಣ, ಸತೀಶ್, ವಿನಾಯಕ ರಾವ್, ಯುಗಾಂಧರ್, ವೀರಯ್ಯ ಮತ್ತಿತರರು ಹಾಜರಿದ್ದರು.

ಮ್ಯಾಗ್ನೋಲಿಯಾ ಟೆಂಪಲ್ ಟ್ರೀ ಬಡಾವಣೆಯಲ್ಲಿರುವ ಉದ್ಯಾನವನದ ಪಾತ್ ವೇ, ಪಾರ್ಕ್ ಮತ್ತು ಅಡಿಪಾಯದ ಕಲ್ಲುಗಳನ್ನು ಕಿತ್ತು ಅನಧಿಕೃತವಾಗಿ ರಸ್ತೆ ಅಗಲೀಕರಣ ಮಾಡಿ ಒತ್ತುವರಿ ಮಾಡಿರುವುದನ್ನು ತೆರವುಗೊಳಿಸುವಂತೆ ತಾಪಂ ಇಒ ಆದೇಶಿಸಿದ್ದಾರೆ. ಅದರಂತೆ ಒತ್ತುವರಿ ತೆರವು ಮಾಡಲಾಗುತ್ತಿದೆ.

- ಮಾದೇಗೌಡ, ಪಿಡಿಒ, ಮಾಯಗಾನಹಳ್ಳಿ ಗ್ರಾಪಂ