ಲೋಕಾಯುಕ್ತಕ್ಕೆ ದೂರು ನೀಡಲು ಜನರ ಹಿಂದೇಟು

| Published : Jun 29 2024, 12:33 AM IST

ಲೋಕಾಯುಕ್ತಕ್ಕೆ ದೂರು ನೀಡಲು ಜನರ ಹಿಂದೇಟು
Share this Article
  • FB
  • TW
  • Linkdin
  • Email

ಸಾರಾಂಶ

ನಗರಸಭೆಯಿಂದ ತ್ಯಾಜ್ಯ ವಿಲೇವಾರಿ ಮಾಡದಿದ್ದರೂ ಸುಮೋಟೋ ಪ್ರಕರಣ ದಾಖಲಿಸುತ್ತೇವೆ ಎಂದು ಲೋಕಾಯುಕ್ತಿ ಅಧಿಕಾರಿಗಳು ಎಚ್ಚರಿಸಿದರು.

ಶಿರಸಿ: ಲೋಕಾಯುಕ್ತಕ್ಕೆ ದೂರು ನೀಡಲು ಸಾರ್ವಜನಿಕರು ಹಿಂಜರಿಯುತ್ತಿದ್ದಾರೆ. ಜನರಲ್ಲಿ ಜಾಗೃತಿ ಮೂಡಿಸಲು ಲೋಕಾಯುಕ್ತದಿಂದ ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದ್ದು, ನಮ್ಮ ತಂಡವು ಜಿಲ್ಲೆಯ ಪ್ರತಿ ತಾಲೂಕಿನಲ್ಲಿ ೨ ದಿನ ಉಳಿದು ದೂರು ಸ್ವೀಕಾರ ಮಾಡಲಿದೆ ಎಂದು ಲೋಕಾಯುಕ್ತ ಎಸ್‌ಪಿ ಕುಮಾರಚಂದ್ರ ತಿಳಿಸಿದರು.

ಗುರುವಾರ ನಗರದ ಪ್ರವಾಸಿ ಮಂದಿರದಲ್ಲಿ ಮಾಧ್ಯಮದವರ ಜತೆ ಮಾತನಾಡಿ, ನಗರಸಭೆಯಿಂದ ತ್ಯಾಜ್ಯ ವಿಲೇವಾರಿ ಮಾಡದಿದ್ದರೂ ಸುಮೋಟೋ ಪ್ರಕರಣ ದಾಖಲಿಸುತ್ತೇವೆ. ಉತ್ತರಕನ್ನಡ ಜಿಲ್ಲೆಯಲ್ಲಿ ಕಂದಾಯ ಇಲಾಖೆಯ ಹಾಗೂ ರಾಜಕೀಯ ವ್ಯಕ್ತಿಗಳ ಮೇಲೆಯೂ ಬಹಳಷ್ಟು ದೂರುಗಳು ಕೇಳಿಬಂದಿದೆ. ಪ್ರತಿಯೊಂದು ದೂರನ್ನು ವಿಚಾರಣೆ ನಡೆಸಿ ಪ್ರಕರಣ ದಾಖಲಿಸಿ, ತನಿಖೆ ನಡೆಸುತ್ತೇವೆ.

ರಸ್ತೆ, ಸೇತುವೆ, ಚರಂಡಿ, ಸರ್ಕಾರಿ ಕಟ್ಟಡ ಕಳಪೆ ಗುಣಮಟ್ಟದಿಂದ ನಿರ್ಮಿಸಿರುವುದು ದೂರು ಬಂದರೆ ಅಥವಾ ಪತ್ರಿಕೆ ಹಾಗೂ ದೂರದರ್ಶನದಲ್ಲಿ ಪ್ರಕಟವಾದರೆ, ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡು, ಸ್ಥಳ ಪರಿಶೀಲಿಸಿ ತನಿಖೆ ನಡೆಸುತ್ತೇವೆ. ವರದಿಯನ್ನು ಉಪಲೋಕಾಯುಕ್ತಕ್ಕೆ ಸಲ್ಲಿಸುತ್ತೇವೆ ಎಂದರು.

ಕೆಲ ಇಲಾಖೆಯಲ್ಲಿ ಏಜೆಂಟರ ಹಾವಳಿ ಮೀತಿ ಮೀರುತ್ತಿದೆ ಎಂಬ ದೂರು ಬಹಳಷ್ಟು ಕೇಳಿಬಂದಿದ್ದು, ಕೆಲವು ಕಡೆ ಭೇಟಿ ನೀಡಿದ್ದೇವೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಬಿಗಿಗೊಳಿಸುತ್ತೇವೆ. ವೈಯಕ್ತಿಕ ದ್ವೇಷಕ್ಕಾಗಿ ಲೋಕಾಯುಕ್ತಕ್ಕೆ ಸುಳ್ಳು ದೂರು ನೀಡಿದರೆ ದೂರು ನೀಡಿದವರ ಮೇಲೆ ಪ್ರಕರಣ ದಾಖಲಿಸುತ್ತೇವೆ ಎಂದರು.

ಪಿಐ ವಿನಾಯಕ ಬಿಲ್ಲವ, ಸಿಬ್ಬಂದಿಗಳಾದ ಶಿವಕುಮಾರ, ಗಜೇಂದ್ರ, ಆನಂದ, ಸಂಜೀವ, ಸತೀಶ ಇದ್ದರು.