ದೇಶದಲ್ಲಿ ಹೊಸ ಆವಿಷ್ಕಾರದ ಮೂಲಕ ಬದಲಾವಣೆ ತರದೆ ವಿದೇಶಿ ತಂತ್ರಜ್ಞಾನವನ್ನೇ ಅವಲಂಬಿಸಿದ್ದರೆ ಮತ್ತೆ ನಾವು ಗುಲಾಮರಾಗಬೇಕಾಗುತ್ತದೆ.
ಕನ್ನಡಪ್ರಭ ವಾರ್ತೆ ನರಗುಂದ
ದೇಶದಲ್ಲಿ ಹೊಸ ಆವಿಷ್ಕಾರದ ಮೂಲಕ ಬದಲಾವಣೆ ತರದೆ ವಿದೇಶಿ ತಂತ್ರಜ್ಞಾನವನ್ನೇ ಅವಲಂಬಿಸಿದ್ದರೆ ಮತ್ತೆ ನಾವು ಗುಲಾಮರಾಗಬೇಕಾಗುತ್ತದೆ ಎಂದು ಧಾರವಾಡ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಮುಖ್ಯಸ್ಥ ಪ್ರೊ. ಎಸ್.ಎಂ. ಶಿವಪ್ರಸಾದ ಹೇಳಿದರು.ಪಟ್ಟಣದ ಶ್ರೀ ಯಡೆಯೂರ ಸಿದ್ಧಲಿಂಗೇಶ್ವರ ಬಿಇಡಿ ಕಾಲೇಜಿನಲ್ಲಿ ನಡೆದ ಬಿಇಡಿ ಪ್ರಶಿಕ್ಷಣಾರ್ಥಿಗಳ ವಾರ್ಷಿಕ ಸ್ನೇಹ ಸಮ್ಮೇಳನ, ದೀಪದಾನ ಹಾಗೂ ಸನ್ಮಾನ ಸಮಾರಂಭದಲ್ಲಿ ಮಾತನಾಡಿದರು.
ತಂತ್ರಜ್ಞಾನ ಕ್ಷಿಪ್ರಗತಿಯಲ್ಲಿ ಬೆಳವಣಿಗೆಯಾಗುತ್ತಿದೆ. ನ್ಯಾನೋ, ಬಯೋ ಟೆಕ್ನಾಲಜಿ, ಕೃತಕ ಬುದ್ಧಿಮತ್ತೆ ಜತೆಯಾಗಿ ಸಾಗುತ್ತಿರುವ ಕಾಲದಲ್ಲಿ ನಾವು ಬದುಕಿದ್ದೇವೆ. ರೋಬಾಟ್, ಚಾಟ್ ಜಿಪಿಟಿ ಅಭಿವೃದ್ಧಿಗೊಂಡು ಬಳಕೆಯಲ್ಲಿದ್ದು, ಅವು ಮುಂದಿನ 15 ವರ್ಷಗಳಲ್ಲಿ ಪ್ರಮುಖ ಕ್ಷೇತ್ರಗಳನ್ನು ಆವರಿಸಲಿದೆ. ಇದರಿಂದ ಅನೇಕ ಜನರು ಕೆಲಸ ಕಳೆದುಕೊಳ್ಳುವ ಸಾಧ್ಯತೆಯಿದೆ ಎಂದು ಆತಂಕ ವ್ಯಕ್ತಪಡಿಸಿದರು.ಹೊಸ ತಂತ್ರಜ್ಞಾನಗಳು ಉದ್ಯೋಗ ಕಸಿಯುತ್ತವೆ ಎನ್ನುವ ಆತಂಕದ ನಡುವೆಯೂ ಮಾನವ ಶಕ್ತಿಯನ್ನು ಉತ್ತೇಜಿಸಲು ಸಹಾಯಕವಾಗಿದೆ. ನ್ಯಾನೋ, ಬಯೋ ಟೆಕ್ನಾಲಜಿ, ಕೃತಕ ಬುದ್ಧಿಮತ್ತೆ ಮೂರು ತಂತ್ರಜ್ಞಾನಗಳು ಸಂಗಮವಾಗಿರುವ ಕಾಲದಲ್ಲಿ ಅವನ್ನು ಧನಾತ್ಮಕವಾಗಿ ತೆಗೆದುಕೊಂಡು ಹೊಸ ಬದಲಾವಣೆಯ ಬಗ್ಗೆ ಯುವ ಸಮೂಹ ಚಿಂತಿಸಬೇಕು. ವಿಜ್ಞಾನ ಹಾಗೂ ತಂತ್ರಜ್ಞಾನ ಸಾಕಷ್ಟು ಬದಲಾವಣೆ ಅಗುತ್ತಿದ್ದು, ಅದಕ್ಕೆ ನಾವೂ ಹೊಂದಿಕೊಳ್ಳುವ ಅಗತ್ಯವಿದೆ. ನಾವು ಹೆಚ್ಚಾಗಿ ವಿದೇಶಿ ತಂತ್ರಜ್ಞಾನ ಅವಲಂಬನೆ ಮಾಡುವುದನ್ನು ಮುಂದುವರಿಸಿದರೆ ಗುಲಾಮರಾಗಿ ಇರಬೇಕಾಗುತ್ತದೆ. ಆದ್ದರಿಂದ ಯುವ ಸಮೂಹ ಹೊಸ ಆವಿಷ್ಕಾರದ ಮೂಲಕ ಬದಲಾವಣೆ ತರಬೇಕು ಎಂದರು.
ದೊರೆಸ್ವಾಮಿ ವಿರಕ್ತಮಠದ ಶಾಂತಲಿಂಗ ಶ್ರೀಗಳು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಇತರ ವೃತ್ತಿಗಳಲ್ಲಿ ವ್ಯಕ್ತಿಯ ನಿರ್ಲಕ್ಷ್ಯದಿಂದ ನಿರ್ದಿಷ್ಟ ಕ್ಷೇತ್ರಕ್ಕೆ ಹಾನಿಯಾಗಬಹುದು. ಆದರೆ ಶಿಕ್ಷಕರು ಕರ್ತವ್ಯದಲ್ಲಿ ಬೇಜವಾಬ್ದಾರಿಯಿಂದ ನಡೆದುಕೊಂಡರೆ ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯದ ಮೇಲೆ ಪರಿಣಾಮ ಬೀರುತ್ತದೆ. ಆದ್ದರಿಂದ ಶಿಕ್ಷಕ ವೃತ್ತಿ ಅತ್ಯಂತ ಪವಿತ್ರವಾದದ್ದೆಂದರು.ಇದೇ ಸಂದರ್ಭ ಕಳೆದ ವರ್ಷ ಅತಿ ಹೆಚ್ಚು ಅಂಕಗಳಿಸಿದ ಪ್ರಶಿಕ್ಷಣಾರ್ಥಿ ರಂಜಿತಾ ಬಾವಿಕಟ್ಟಿ ಅವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧ್ಯಕ್ಷ ವೀರನಗೌಡ ಪಾಟೀಲ, ನಿದೇಶಕರಾದ ಎಸ್.ಎಸ್. ಸಂಗಳಮಠ, ಅಜ್ಜುನಗೌಡ ಪಾಟೀಲ, ಪ್ರೊ. ಎಸ್.ವಿ. ಕೋಟಿ, ಈರನಗೌಡ ಪಾಟೀಲ, ಶಿವನಗೌಡ ಪಾಟೀಲ, ಪ್ರಾಂಶುಪಾಲ ಆರ್.ಬಿ. ಪಾಟೀಲ, ಕಾಲೇಜಿನ ಒಕ್ಕೂಟದ ಎಲ್ಲ ವಿದ್ಯಾರ್ಥಿ ಪದಾಧಿಕಾರಿಗಳು ಇದ್ದರು.ಗಂಗಮ್ಮ ಲಕ್ಕುಂಡಿ ಸ್ವಾಗತಿಸಿ, ಕೋಮಾಕ್ಷಿ ಜೋರಲ ಕಾರ್ಯಕ್ರಮ ನಿರೂಪಿಸಿದರು. ದಾನೇಶ್ವರಿ ಶೆಲ್ಲಿಕೇರಿ ವಂದಿಸಿದರು.