ಮಾನವೀಯ ಮೌಲ್ಯಗಳು, ಧಾರ್ಮಿಕ ಸಂಸ್ಕಾರ ಹಾಗೂ ಸನಾತನ ಪರಂಪರೆಯನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಅಗತ್ಯವಿದೆ.

ಕನ್ನಡಪ್ರಭ ವಾರ್ತೆ ಶಿರಹಟ್ಟಿ

ಮಾನವೀಯ ಮೌಲ್ಯಗಳು, ಧಾರ್ಮಿಕ ಸಂಸ್ಕಾರ ಹಾಗೂ ಸನಾತನ ಪರಂಪರೆಯನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಅಗತ್ಯವಿದೆ. ಸಾವಿರಾರು ವರ್ಷಗಳಿಂದಲೂ ಹಿಂದೂ ಧರ್ಮದ ಮೇಲೆ ನಿರಂತರ ದಾಳಿ ನಡೆದಿದೆ. ಆದರೂ ಹಿಂದೂ ಧರ್ಮವನ್ನು ಯಾರಿಂದಲೂ ಅಳಿಸಲು ಸಾಧ್ಯವಾಗಿಲ್ಲ. ಇನ್ನು ಮುಂದೆಯೂ ಸಾಧ್ಯವಾಗದು. ಆದರೂ ಪ್ರತಿಯೊಬ್ಬರೂ ಸನಾತನ ಹಿಂದೂ ಧರ್ಮದ ರಕ್ಷಣೆಗೆ ಬದ್ಧರಾಗಬೇಕು ಎಂದು ಯುವ ವಾಗ್ಮಿ ಹಾರಿಕಾ ಮಂಜುನಾಥ ಹೇಳಿದರು.

ಶುಕ್ರವಾರ ಸಂಜೆ ಶಿರಹಟ್ಟಿಯ ಫಕೀರೇಶ್ವರ ನಗರದ ಶ್ರೀ ಬನ್ನಿಮಹಾಂಕಾಳಿ ದೇವಿ ಪುರಾಣ ಮಹೋತ್ಸವ ಕಾರ್ಯಕ್ರಮದಲ್ಲಿ ಹಮ್ಮಿಕೊಂಡಿದ್ದ ಧರ್ಮಸಭೆಯಲ್ಲಿ ಮಾತನಾಡಿದರು. ಮಾನವ ಧರ್ಮಕ್ಕೆ ಜಯವಾಗಲಿ ಎಂಬ ಉದಾತ್ತ ಸಂದೇಶವನ್ನು ಸಾರುವ ಸನಾತನ ಹಿಂದೂ ಧರ್ಮದ ವಾರಸುದಾರರು ನಾವೇ. ನಮ್ಮ ಧರ್ಮವನ್ನು ನಾವೇ ಉಳಿಸಿಕೊಳ್ಳಬೇಕು. ಧರ್ಮವು ಕೇವಲ ಆಚರಣೆಗಳಿಗೆ ಸೀಮಿತವಾಗದೆ, ಮಾನವೀಯತೆ, ಪರಸ್ಪರ ಗೌರವ, ಪ್ರೀತಿ, ಕರುಣೆ ಹಾಗೂ ಸಹಬಾಳ್ವೆಯ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವ ಮಾರ್ಗವಾಗಬೇಕು ಎಂದು ಅವರು ಹೇಳಿದರು.

ಇಂದಿನ ಆಧುನಿಕ ಯುಗದಲ್ಲಿ ಮಕ್ಕಳು ಶಿಕ್ಷಣದ ಜೊತೆಗೆ ನಮ್ಮ ಸಂಸ್ಕೃತಿ, ಸಂಪ್ರದಾಯ ಹಾಗೂ ಧಾರ್ಮಿಕ ಮೌಲ್ಯಗಳನ್ನೂ ತಿಳಿದುಕೊಳ್ಳುವುದು ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ತಾಯಂದಿರು ಮನೆಯಲ್ಲಿ ಮಕ್ಕಳಿಗೆ ಧಾರ್ಮಿಕ ಕಥೆಗಳು, ಮಹನೀಯರ ಜೀವನ ಸಂದೇಶಗಳು ಹಾಗೂ ನಮ್ಮ ಪರಂಪರೆಯ ಮಹತ್ವವನ್ನು ತಿಳಿಸಿಕೊಡಬೇಕು. ಹಬ್ಬ-ಹರಿದಿನಗಳ ಆಚರಣೆ, ಪೂಜೆ-ಪುನಸ್ಕಾರಗಳ ಹಿಂದಿನ ಉದ್ದೇಶವನ್ನು ಮಕ್ಕಳಿಗೆ ಮನವರಿಕೆ ಮಾಡಿಕೊಡುವ ಮೂಲಕ ಧರ್ಮದ ಬಗ್ಗೆ ಗೌರವ ಬೆಳೆಸಬೇಕು ಎಂದರು.

ಶರಣಬಸವಶಾಸ್ತ್ರಿಗಳು ಇಳಕಲ್, ಬಸವರಾಜ ತುಳಿ, ಸಂತೋಷ ಕುರಿ, ಎಚ್.ಎಂ. ದೇವಗೀರಿ, ಎಸ್.ಎಲ್. ಮುಳಗುಂದ, ಗೂಳಪ್ಪ ಕರಿಗಾರ, ಸುರೇಶ ಅಕ್ಕಿ, ಶಶಿ ದೇಗಾವಿ, ಅಶೋಕ ವರವಿ, ನೀಲಪ್ಪ ಹಮ್ಮಿಗಿ, ಬಿ.ಎಸ್. ಲಮಾಣಿ, ಸುರೇಶ ಕುರಿ, ವಿಠಲ ಬಿಡವೆ, ದೇವಪ್ಪ ಕಲ್ಯಾಣಿ, ಪ್ರವೀಣ ಗೊಜನೂರ ಇತರರಿದ್ದರು.