ಸಾರಾಂಶ
ಚಾರ್ಮಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅನ್ನಾರು ಸೇತುವೆ ಬಳಿ ಮೃತ್ಯುಂಜಯ ನದಿಗೆ ಯಾರೋ ಕಿಡಿಗೇಡಿಗಳು ಸುಮಾರು 11 ಗೋಣಿ ಚೀಲಗಳಲ್ಲಿ ಗೋಮಾಂಸವನ್ನು ತಂದು ಹಾಕಿರುವುದು ಮಂಗಳವಾರ ಬೆಳಕಿಗೆ ಬಂದಿದೆ.
ಕನ್ನಡಪ್ರಭ ವಾರ್ತೆ ಬೆಳ್ತಂಗಡಿ
ದನದ ತಲೆ, ಕರುವಿನ ಮೃತದೇಹ, ಚರ್ಮ, ಮೂಳೆ ಮೊದಲಾದ ಅವಶೇಷಗಳನ್ನು ನದಿಗೆ ಎಸೆದ ಘಟನೆ ಚಾರ್ಮಾಡಿಯಲ್ಲಿ ನಡೆದಿದೆ.ಚಾರ್ಮಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅನ್ನಾರು ಸೇತುವೆ ಬಳಿ ಮೃತ್ಯುಂಜಯ ನದಿಗೆ ಯಾರೋ ಕಿಡಿಗೇಡಿಗಳು ಸುಮಾರು 11 ಗೋಣಿ ಚೀಲಗಳಲ್ಲಿ ಗೋಮಾಂಸವನ್ನು ತಂದು ಹಾಕಿರುವುದು ಮಂಗಳವಾರ ಬೆಳಕಿಗೆ ಬಂದಿದೆ.
ಗೋಮಾಂಸ ತಯಾರಿಸಿ ಅದರ ಅವಶೇಷಗಳ ಜತೆ ಮೃತ ಕರುವಿನ ದೇಹವು ಕಂಡುಬಂದಿದೆ. ನದಿ ಪರಿಸರದಲ್ಲಿ ಅನೇಕ ಕುಟುಂಬಗಳು ವಾಸವಾಗಿದ್ದು ಇಲ್ಲಿಂದ ನೀರನ್ನು ದೈನಂದಿನ ಚಟುವಟಿಕೆಗಳಿಗೆ ಬಳಸುತ್ತಿದ್ದಾರೆ. ಇದೀಗ ಈ ಘಟನೆಯಿಂದ ಪರಿಸರದಲ್ಲಿ ಆತಂಕ ವ್ಯಕ್ತವಾಗಿದೆ. ಶಾಲಾ ಮಕ್ಕಳು ಸೇರಿದಂತೆ ಅನೇಕರು ಈ ಪರಿಸರದಲ್ಲಿ ತಿರುಗಾಡುತ್ತಿದ್ದು, ಸಾಂಕ್ರಾಮಿಕ ರೋಗ ಭೀತಿಯೂ ಎದುರಾಗಿದೆ. ಅಯ್ಯಪ್ಪ ವ್ರತಧಾರಿಗಳು ಇಲ್ಲಿ ಪ್ರತಿನಿತ್ಯ ಸ್ನಾನಕ್ಕಾಗಿ ಬರುತ್ತಾರೆ ಇಂತಹ ಸ್ಥಳದಲ್ಲಿ ಉದ್ದೇಶಪೂರ್ವಕವಾಗಿ ಈ ಕೃತ್ಯ ಎಸಗಲಾಗಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಧರ್ಮಸ್ಥಳ ಠಾಣೆಯ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ. ಕೃತ್ಯ ನಡೆಸಿದವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವುದು ಅಗತ್ಯವಾಗಿದೆ ಎಂದು ವಿಹಿಂಪ ಬಜರಂಗದಳ ಬೆಳ್ತಂಗಡಿ ತಾಲೂಕು ಅಧ್ಯಕ್ಷ ದಿನೇಶ್ ಚಾರ್ಮಾಡಿ ಆಗ್ರಹಿಸಿದ್ದಾರೆ.