ಸಾರಾಂಶ
ಕನ್ನಡಪ್ರಭ ವಾರ್ತೆ ವಿಜಯಪುರ
ರೈತರಿಗೆ ಗುಣಮಟ್ಟದ ವಿದ್ಯುತ್ ಪೂರೈಸಲು ಮತ್ತು ಟ್ರಾನ್ಸಫಾರ್ಮರ್ ಸಮಸ್ಯೆಗೆ ಪರಿಹಾರ ಒದಗಿಸಲು ಹಲವಾರು ಸುಧಾರಣೆ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಸಚಿವ ಎಂ.ಬಿ.ಪಾಟೀಲ ಹೇಳಿದರು.ಬಬಲೇಶ್ವರ ಪಟ್ಟಣದಲ್ಲಿ ಹೆಸ್ಕಾಂ ಪರೀಕ್ಷಾ ಕೇಂದ್ರದ ಆವರಣದಲ್ಲಿ ₹27 ಲಕ್ಷ ವೆಚ್ಚದಲ್ಲಿ ನಿರ್ಮಿಸಲಾಗಿರುವ ವಿದ್ಯುತ್ ಪರಿವರ್ತಕಗಳ ದುರಸ್ಥಿ ಮತ್ತು ಪರೀಕ್ಷಣಾ ಕೇಂದ್ರ ಉದ್ಘಾಟಿಸಿ ಮಾತನಾಡಿದ ಅವರು, ಒಂದು ಕಾಲದಲ್ಲಿ ರೈತರು ಟಿಸಿ ದುರಸ್ಥಿಗಾಗಿ ಸಾವಿರಾರು ರುಪಾಯಿ ಖರ್ಚುಮಾಡಿ ಅಲೆದಾಡಬೇಕಿತ್ತು. ಅಲ್ಲದೇ, ಹಣ ನೀಡಿದರೂ ಟಿಸಿ ದುರಸ್ಥಿಗೆ ತಿಂಗಳುಗಟ್ಟಲೆ ಕಾಯಬೇಕಿತ್ತು. ಇದಕ್ಕೆ ಪರಿಹಾರ ಒದಗಿಸಲು ಈಗ ಬಬಲೇಶ್ವರದಲ್ಲಿ ವಿದ್ಯುತ್ ಪರಿವರ್ತಕಗಳ ದುರಸ್ಥಿ ಮತ್ತು ಪರೀಕ್ಷಣಾ ಕೇಂದ್ರ ಉದ್ಘಾಟಿಸಲಾಗಿದೆ. ಇದರಿಂದ ಪ್ರತಿ ತಿಂಗಳು ಗರಿಷ್ಠ 120 ಟಿಸಿಗಳ ನಿರ್ವಹಣೆ ದುರಸ್ಥಿ ಮತ್ತು ಪರೀಕ್ಷೆ ಸಾಧ್ಯವಾಗಲಿದೆ. ಅಷ್ಟೇ ಅಲ್ಲ, ವಿದ್ಯುತ್ ಕ್ಷೇತ್ರದಲ್ಲಿ ಕೈಗೊಳ್ಳಲಾದ ಸುಧಾರಣೆ ಕ್ರಮಗಳಿಂದಾಗಿ ರೈತರಿಗೆ ಆಗುತ್ತಿದ್ದ ಕಿರುಕುಳ, ಅನ್ಯಾಯ, ತೊಂದರೆ ತಪ್ಪಿದೆ. ಗುಣಮಟ್ಟದ ವಿದ್ಯುತ್ ಪೂರೈಸಲು ಜಿಲ್ಲೆಯಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ವಿದ್ಯುತ್ ಪ್ರಸರಣ ಕೇಂದ್ರಗಳನ್ನು ಪ್ರಾರಂಭಿಸಲಾಗಿದೆ ಎಂದು ತಿಳಿಸಿದರು.ನಮ್ಮ ಹಿರಿಯರು ಅನುಭವಿಸುತ್ತಿದ್ದ ನೀರಿನ ಸಮಸ್ಯೆ ನಾನು ಜಲಸಂಪನ್ಮೂಲ ಸಚಿವನಾಗಿದ್ದಾಗ ದೂರದೃಷ್ಟಿವಿಟ್ಟುಕೊಂಡು ಮಾಡಿರುವ ಯೋಜನೆಗಳಿಂದಾಗಿ ನಿಗದಿತ ಅವಧಿಗಿಂತಲೂ ಸಾಕಷ್ಟು ಮುಂಚಿತವಾಗಿಯೇ ರೈತರ ಜಮೀನಿಗೆ ನೀರು ಬಂದಿದೆ. ಅಂದು ಮಾಡಲಾದ ಸಾಕಷ್ಟು ಟೀಕೆ, ಟಿಪ್ಪಣೆಗಳನ್ನು ಮೆಟ್ಟಿ ನಿಂತು ಒಂದು ಸಾವಿರ ಕಿ.ಮೀ ಮುಖ್ಯ ಕಾಲುವೆ ನಿರ್ಮಿಸಿದ್ದೇನೆ. ವಿತರಣಾ ಕಾಲುವೆ ನಿರ್ಮಿಸಿದ್ದೇವೆ ಎಂದರು.ಜಿಲ್ಲಾ ಪಂಚಾಯತಿ ಮಾಜಿ ಸದಸ್ಯ ವಿ.ಎನ್.ಬಿರಾದಾರ ಮಾತನಾಡಿ, ಬಬಲೇಶ್ವರ ಮತಕ್ಷೇತ್ರಕ್ಕೆ ಸಚಿವ ಎಂ.ಬಿ.ಪಾಟೀಲರು ಅಪಾರ ಕೊಡುಗೆ ನೀಡಿದ್ದಾರೆ. ನೀರು ಕಾಣದ ಜಾಗದಲ್ಲಿ ಜಲಕ್ರಾಂತಿ ಮೂಲಕ ಅಭಿವೃದ್ಧಿ ಮಾಡಿದ್ದಾರೆ. ನಮಗೆ ಉಪಕಾರ ಮಾಡಿದವರಿಗೆ ಬೆನ್ನಿಗೆ ಸದಾ ನಿಲ್ಲಬೇಕು. ಅವರನ್ನು ಉತ್ತರೋತ್ತರವಾಗಿ ಬೆಳೆಸಬೇಕು. ಇದರಿಂದ ಕ್ಷೇತ್ರದಲ್ಲಿ ಅಭಿವೃದ್ಧಿ ಪರ್ವ ಮುಂದುವರೆಯಲು ಸಾಧ್ಯ ಎಂದು ತಿಳಿಸಿದರು.ಮುಖಂಡ ಚನ್ನಪ್ಪ ಕೊಪ್ಪದ ಮಾತನಾಡಿ, ಎಂ.ಬಿ.ಪಾಟೀಲರ ದೂರದೃಷ್ಟಿ, ಅಭಿವೃದ್ಧಿಯಿಂದ ಕಾಳಜಿಯಿಂದ ಜಿಲ್ಲೆ ನಂದನವನವಾಗಿದೆ. ರೈತರಿಗೆ ಅಗತ್ಯವಾದ ನೀರು ಮತ್ತು ವಿದ್ಯುತ್ ವ್ಯವಸ್ಥೆ ಮಾಡಿದ್ದರಿಂದ ಬರದ ಬವಣೆ ತಪ್ಪಿದೆ. ಅಭಿವೃದ್ಧಿ ಕಾರ್ಯಗಳ ಮೂಲಕ ಅನ್ನದಾತರನ್ನು ಸಂಕಷ್ಟದಿಂದ ಪಾರು ಮಾಡಿದ್ದಾರೆ. ಕೈಗಾರಿಕೆ ಕ್ರಾಂತಿಗೆ ಮುನ್ನುಡಿ ಬರೆಯುತ್ತಿರುವ ಸಚಿವರಿಗೆ ಸದಾ ಬೆಂಬಲವಾಗಿ ನಿಲ್ಲಬೇಕು ಎಂದರು.ಮುಖಂಡ ಕೆ.ಎಚ್.ಮುಂಬಾರೆಡ್ಡಿ, ಜಿ.ಪಂ.ಮಾಜಿ ಅಧ್ಯಕ್ಷ ವಿ.ಎಸ್.ಪಾಟೀಲ, ಹೆಸ್ಕಾಂ ಅಧೀಕ್ಷಕ ಅಭಿಯಂತರ ಸಿದ್ದಪ್ಪ ಬಿಂಜಗೇರಿ, ತಹಸೀಲ್ದಾರ್ ಸಂತೋಷ ಮ್ಯಾಗೇರಿ, ಕೆಎಂಎಫ್ ಮಾಜಿ ಅಧ್ಯಕ್ಷ ಶ್ರೀಶೈಲಗೌಡ ಪಾಟೀಲ ನಿಡೋಣಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಈರಗೊಂಡ ಬಿರಾದಾರ, ಮುಖಂಡರಾದ ಬಿ.ಜಿ.ಬಿರಾದಾರ, ಅಪ್ಪುಗೌಡ ಪಾಟೀಲ, ಚನ್ನಪ್ಪ ಕೊಪ್ಪದ, ರಫೀಕ್ ಸೋನಾರ, ಪ್ರಕಾಶ ಸೊನ್ನದ, ಮುದಕನಗೌಡ ಬಿರಾದಾರ, ಪ್ರಕಾಶಗೌಡ ಪಾಟೀಲ, ಪುಟ್ಟು ಸಾವಳಗಿ, ಮಲ್ಲನಗೌಡ ಪಾಟೀಲ, ಸಿದ್ದಪ್ಪಗೌಡ ಬಿರಾದಾರ, ಸಿದ್ದಪ್ಪ ಹೊಸಮನಿ, ಚನ್ನಬಸಪ್ಪ ಕೋಟ್ಯಾಳ ಮುಂತಾದವರು ಉಪಸ್ಥಿತರಿದ್ದರು.ಅಸಾಧ್ಯ ಮತ್ತು ಮೂರ್ಖತನದ ಕೆಲಸ ಎಂದು ಅಪಹಾಸ್ಯ ಮಾಡುತ್ತಿದ್ದವರಿಗೆ ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸಿ ರೈತರ ಜಮೀನಿಗೆ ನೀರು ಹರಿಸುವ ಮೂಲಕ ಅನ್ನದಾತರ ಮೊಗದಲ್ಲಿ ಮಂದಹಾಸ ಮೂಡಿಸಿದ್ದೇನೆ. ಅಧಿಕಾರದಲ್ಲಿದ್ದಾಗ ಒಂದೂವರೆ ಲಕ್ಷ ಎಕರೆ ನೀರಾವರಿ ಮಾಡಿದ್ದೇನೆ.
-ಎಂ.ಬಿ.ಪಾಟೀಲ, ಸಚಿವರು.