ಅಕ್ಷರದವ್ವ ಸಾವಿತ್ರಿ ಬಾಫುಲೆಯನ್ನು ಸ್ಮರಿಸಿ: ದೊಡ್ಡಯ್ಯ

| Published : Jan 05 2025, 01:30 AM IST

ಸಾರಾಂಶ

ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ ಎಂಬ ತತ್ವದ ಅಡಿಯಲ್ಲಿ ಹೆಣ್ಣು ಮಕ್ಕಳ ಶಿಕ್ಷಣಕ್ಕಾಗಿ ಶಾಲೆ ತೆರೆದು ಮಹಿಳೆಯರ ಪಾಲಿನ ಅಕ್ಷರ ಮಾತೆ ಸಾವಿತ್ರಿ ಬಾಫುಲೆ ದಾರಿ ದೀಪವಾದರೆ, ಕುವೆಂಪು ಅವರು ಸಮಾನತೆಯನ್ನು ಸಾರಿದ ಮಹಾಪುರುಷರು ಆಗಿದ್ದಾರೆ.

ಕನ್ನಡ ಪ್ರಭ ವಾರ್ತೆ ಮಳವಳ್ಳಿ

ಭಾರತದ ಮೊಟ್ಟ ಮೊದಲ ಮಹಿಳಾ ಶಿಕ್ಷಕಿಯಾಗಿ 18 ಶಾಲೆಗಳನ್ನು ತೆರೆದು ಮಹಿಳೆಯರಿಗೆ ಶಿಕ್ಷಣ ನೀಡುವ ಮೂಲಕ ಸಮಾನತೆ ಸಾರಿದ ಅಕ್ಷರದವ್ವ ಸಾವಿತ್ರಿ ಬಾಫುಲೆ ಅವರನ್ನು ಸ್ಮರಿಸಿ, ಅವರ ಆದರ್ಶ ಪಾಲಿಸಬೇಕು ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ದೊಡ್ಡಯ್ಯ ತಿಳಿಸಿದರು.

ಪಟ್ಟಣದ ಕನ್ನಡ ಭವನದಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್‌ನಿಂದ ನಡೆದ ಅಕ್ಷರ ಮಾತೆ ಸಾವಿತ್ರಿ ಬಾಫುಲೆ ಹಾಗೂ ಯುಗದ ಕವಿ ಜಗದ ಕವಿ ಕುವೆಂಪು ಅವರ ಜನ್ಮ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.

ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ ಎಂಬ ತತ್ವದ ಅಡಿಯಲ್ಲಿ ಹೆಣ್ಣು ಮಕ್ಕಳ ಶಿಕ್ಷಣಕ್ಕಾಗಿ ಶಾಲೆ ತೆರೆದು ಮಹಿಳೆಯರ ಪಾಲಿನ ಅಕ್ಷರ ಮಾತೆ ಸಾವಿತ್ರಿ ಬಾಫುಲೆ ದಾರಿ ದೀಪವಾದರೆ, ಕುವೆಂಪು ಅವರು ಸಮಾನತೆಯನ್ನು ಸಾರಿದ ಮಹಾಪುರುಷರು ಆಗಿದ್ದಾರೆ ಎಂದರು.

ಮಹಿಳೆರಿಗೆ ಶಿಕ್ಷಣ ನಿಷೇಧವಿದ್ದ ವೇಳೆ ಶಿಕ್ಷಣ ಕೊಡಿಸಬೇಕೆಂದು ಶಾಲೆಗಳನ್ನು ತೆರೆದು ಸಂಪ್ರದಾಯವಾದಿಗಳ ಕೆಂಗಣ್ಣಿಗೆ ಗುರಿಯಾಗಿ ಅಂತಹ ಸಮಾಜದ ವಿರುದ್ಧ ಮೆಟ್ಟಿ ನಿಂತ ಪ್ರತಿಫಲದಿಂದಾಗಿ ಇಂದು ಪ್ರತಿಯೊಂದು ಮನೆಯಲ್ಲಿಯೂ ವಿದ್ಯಾವಂತ ಮಹಿಳೆಯರನ್ನು ಕಾಣಬಹುದಾಗಿದೆ ಎಂದರು.

ರಾಷ್ಟ್ರಕವಿ ಕುವೆಂಪು ಅವರು ಮನುಜ ಮತ ವಿಶ್ವ ಪಥ ಎಂದು ಜಗತ್ತಿಗೆ ಸಾರಿದರು. ನಾಡಗೀತೆಯನ್ನು ಬರೆದು ಪ್ರತಿನಿತ್ಯ ಕನ್ನಡಿಗರು ಹಾಡುವ ಮೂಲಕ ಕನ್ನಡದ ಅಭಿಮಾನ ಮೆರೆದರು. ಸಾಹಿತ್ಯ ಲೋಕದ ಮೇರು ಕವಿಗಳಾಗಿ ತಮ್ಮ ಸಾಹಿತ್ಯದ ಮೂಲಕ ಸಮಾಜಕ್ಕೆ ಬೆಳಕು ಚೆಲ್ಲುವ ಪ್ರಯತ್ನ ಮಾಡಿದ್ದಾರೆ. ಅವರ ಅದರ್ಶ ಇಂದಿನ ಯುವ ಸಮೂಹಕ್ಕೆ ಸ್ಫೂರ್ತಿಯಾಗಿದೆ ಎಂದರು.

ಮುಖಂಡ ಮೆಡಿಕಲ್ ಪ್ರಭು ಮಾತನಾಡಿ, ಪುರುಷನಷ್ಟೇ ಮಹಿಳೆಯರೂ ಸಮಾನರು ಎನ್ನುವುದನ್ನು ಅಂದಿನ ಕಾಲದಲ್ಲಿಯೇ ಸಾವಿತ್ರಿ ಬಾಫುಲೆ ತಿಳಿಸಿಕೊಟ್ಟಿದ್ದಾರೆ. ಕುವೆಂಪು ಬದುಕುವ ದಾರಿಯನ್ನು ತೋರಿಸಿ ಕೊಟ್ಟಿದ್ದಾರೆ. ಇಂತಹ ಅದರ್ಶ ವ್ಯಕ್ತಿಗಳ ಜಯಂತಿಗಳನ್ನು ಆಚರಿಸುವ ಜೊತೆಗೆ ಜೀವನ ಚರಿತ್ರೆಯನ್ನು ಓದಿ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕೆಂದು ಸಲಹೆ ನೀಡಿದರು.

ಸಾವಿತ್ರಿ ಬಾಫುಲೆ ಹಾಗೂ ಕುವೆಂಪುರವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸುವ ಮೂಲಕ ಗೌರವ ಸಲ್ಲಿಸಲಾಯಿತು. ಕಾರ್ಯಕ್ರಮದಲ್ಲಿ ಕಸಾಪ ಅಧ್ಯಕ್ಷ ಚೇತನ್ ಕುಮಾರ್, ಪೊಲೀಸ್ ಇಲಾಖೆ ಹರ್ಷವರ್ಧನ್, ಪರಿಷತ್ ಪದಾಧಿಕಾರಿಗಳಾದ ಪುಟ್ಟಸ್ವಾಮಿ, ಮಹಾಲಿಂಗಯ್ಯ, ಚುಂಚಣ್ಣ, ಬಿ.ಮಾದೇಗೌಡ, ಚಿಕ್ಕಮರಿಗೌಡ, ಪೇಟೆ ಶಿವಣ್ಣ, ಪುಟ್ಟಸ್ವಾಮಿ ಶೆಟ್ಟಹಳ್ಳಿ ಸೇರಿದಂತೆ ಹಲವು ಕನ್ನಡ ಅಭಿಮಾನಿಗಳು ಇದ್ದರು.