ರೈತರಿಗಾಗಿ ಶ್ರಮಿಸಿದ ಮಾಜಿ ಪ್ರಧಾನಿ ಚೌದರಿ ಚರಣ್‌ಸಿಂಗ್ ರನ್ನು ಸ್ಮರಿಸಿ: ಆರ್.ಹರೀಶ್ ಮನವಿ

| Published : Dec 31 2024, 01:00 AM IST

ರೈತರಿಗಾಗಿ ಶ್ರಮಿಸಿದ ಮಾಜಿ ಪ್ರಧಾನಿ ಚೌದರಿ ಚರಣ್‌ಸಿಂಗ್ ರನ್ನು ಸ್ಮರಿಸಿ: ಆರ್.ಹರೀಶ್ ಮನವಿ
Share this Article
  • FB
  • TW
  • Linkdin
  • Email

ಸಾರಾಂಶ

ಕುವೆಂಪು ಅವರು ನಾಡಿನ ಹೆಮ್ಮೆಯ ರಸಕವಿ. ಕನ್ನಡದ ಹಿರಿಮೆಯನ್ನು ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಸ್ತರಗಳಲ್ಲಿ ಎತ್ತಿ ಹಿಡಿದ ಮಹಾನ್ ಚೇತನ. ಕನ್ನಡ ಸಾಹಿತ್ಯವನ್ನು ವಿಶ್ವ ಸಾಹಿತ್ಯ ವೇದಿಕೆಗೆ ಕೊಂಡೊಯ್ದ ವಿಶ್ವಮಾನವ ಎಂದು ಬಣ್ಣಿಸಿದರು.

ಕನ್ನಡಪ್ರಭ ವಾರ್ತೆ ನಾಗಮಂಗಲ

ರೈತರು ಎಂತಹ ಪರಿಸ್ಥಿತಿ ಎದುರಾದರೂ ಸಹ ವಿಶ್ರಾಂತಿ ಪಡೆಯದೆ ತಮ್ಮ ಕೃಷಿ ಕಾಯಕದಲ್ಲಿ ತೊಡಗುವ ಮೂಲಕ ದೇಶಕ್ಕೆ ಅನ್ನ ನೀಡುವ ಕೆಲಸ ಮಾಡುತ್ತಾರೆ. ಅಂತಹ ರೈತರ ಏಳ್ಗೆಗಾಗಿ ಅನೇಕ ಕಾಯ್ದೆಗಳನ್ನು ಜಾರಿಗೊಳಿಸುವ ಜೊತೆಗೆ ಜನಪರ ಯೋಜನೆಗಳನ್ನು ಅನುಷ್ಠಾನಕ್ಕೆ ತಂದ ಮಾಜಿ ಪ್ರಧಾನಿ ಚೌದರಿ ಚರಣ್‌ಸಿಂಗ್ ಅವರನ್ನು ಪ್ರತಿಯೊಬ್ಬರೂ ಸ್ಮರಿಸಬೇಕಿದೆ ಎಂದು ಸಹಾಯಕ ಕೃಷಿ ನಿರ್ದೇಶಕ ಆರ್.ಹರೀಶ್ ತಿಳಿಸಿದರು.

ಪಟ್ಟಣದಲ್ಲಿ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ ಮತ್ತು ರಾಜ್ಯ ರೈತ ಕೃಷಿ ಸಂವರ್ಧನ ಕೇಂದ್ರ ತಾಲೂಕು ಘಟಕದ ಸಹಭಾಗಿತ್ವದಲ್ಲಿ ಸೋಮವಾರ ಆಯೋಜಿಸಿದ್ದ ರಾಷ್ಟ್ರಕವಿ ಕುವೆಂಪು ಜಯಂತಿ ಹಾಗೂ ರಾಷ್ಟ್ರೀಯ ರೈತ ದಿನಾಚರಣೆಯಲ್ಲಿ ಕುವೆಂಪು ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದ ಬಳಿಕ ಮಾತನಾಡಿದರು.

ರೈತ ದೇಶದ ಬೆನ್ನೆಲುಬು. ನಾವು ಎಷ್ಟೇ ಶ್ರೀಮಂತರಾಗಿದ್ದರೂ ಕೂಡ ರೈತರು ಬೆಳೆದುಕೊಡುವ ಅನ್ನ ತಿನ್ನಬೇಕೇ ಹೊರತು ಬೇರೆನೂ ತಿಂದು ಬದುಕಲು ಸಾಧ್ಯವಿಲ್ಲ. ಹಾಗಾಗಿ ಇಡೀ ಪ್ರಪಂಚದಲ್ಲಿ ಅತ್ಯಂತ ಸ್ವಾಭಿಮಾನದ ಬದುಕು ಇದ್ದರೆ ಅದು ರೈತನ ಬದುಕು ಮಾತ್ರ ಎಂದರು.

ತಾಲೂಕು ರೈತ ಸಂಘದ ಅಧ್ಯಕ್ಷ ಸಿ.ರಂಗೇಗೌಡ ಮಾತನಾಡಿ, ಸರ್ಕಾರದ ವತಿಯಿಂದ ಹಲವು ಮಹನೀಯರ ಜಯಂತಿ ಹಾಗೂ ರಾಷ್ಟ್ರೀಯ ಹಬ್ಬಗಳನ್ನು ಆಚರಿಸುವಂತೆ ದೇಶಕ್ಕೆ ಅನ್ನ ನೀಡುವ ರೈತರ ದಿನಾಚರಣೆಯನ್ನೂ ಕೂಡ ದೊಡ್ಡಮಟ್ಟದಲ್ಲಿ ಆಚರಿಸಬೇಕು ಎಂದು ತಿಳಿಸಿದರು.

ಪತ್ರಕರ್ತರ ಸಂಘದ ರಾಜ್ಯ ಸಮಿತಿ ಸದಸ್ಯ ಸಿ.ಎನ್.ಮಂಜುನಾಥ್ ಮಾತನಾಡಿ, ಕುವೆಂಪು ಅವರು ನಾಡಿನ ಹೆಮ್ಮೆಯ ರಸಕವಿ. ಕನ್ನಡದ ಹಿರಿಮೆಯನ್ನು ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಸ್ತರಗಳಲ್ಲಿ ಎತ್ತಿ ಹಿಡಿದ ಮಹಾನ್ ಚೇತನ. ಕನ್ನಡ ಸಾಹಿತ್ಯವನ್ನು ವಿಶ್ವ ಸಾಹಿತ್ಯ ವೇದಿಕೆಗೆ ಕೊಂಡೊಯ್ದ ವಿಶ್ವಮಾನವ ಎಂದು ಬಣ್ಣಿಸಿದರು.

ರೈತರು ಈ ದೇಶದ ಬಹುದೊಡ್ಡ ಶಕ್ತಿ ಅಂತಹ ರೈತರ ದಿನಾಚರಣೆಯನ್ನು ಮುಂದಿನ ದಿನಗಳಲ್ಲಿ ದೊಡ್ಡಮಟ್ಟದಲ್ಲಿ ಆಯೋಜಿಸಬೇಕಿದೆ. ಇದಕ್ಕೆ ಪೂರಕವಾಗಿ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ ಪೂರ್ಣಪ್ರಮಾಣದ ಸಹಕಾರ ನೀಡಲು ಸಿದ್ಧವಿದೆ ಎಂದು ಹೇಳಿದರು.

ರೈತ ಮುಖಂಡ ದಡಗ ಸತೀಶ್, ತಾಲೂಕು ಕೃಷಿಕ ಸಮಾಜದ ಉಪಾಧ್ಯಕ್ಷ ಮಹಾಬಲೇಶ್ವರ, ಪ್ರಗತಿಪರ ರೈತ ಬಿ.ಶೆಟ್ಟಹಳ್ಳಿ ರಾಮು ಹಾಗೂ ಪತ್ರಕರ್ತರ ಸಂಘದ ಅಧ್ಯಕ್ಷ ಕೆ.ಸೀತಾರಾಮು ಅಧ್ಯಕ್ಷತೆ ವಹಿಸಿ ಮಾತನಾಡಿದರು. ಇದೇ ವೇಳೆ ತಾಲೂಕಿನ ಬಿ.ಶೆಟ್ಟಹಳ್ಳಿ ಪ್ರಗತಿಪರ ರೈತ ಎಸ್.ಬಿ.ರಾಮು ಅವರಿಗೆ ಕೃಷಿ ಕಾಯಕ ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಯಿತು.

ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ವಸಂತಕುಮಾರ್, ಖಜಾಂಚಿ ಎನ್.ಮಹೇಶ್, ಸದಸ್ಯರಾದ ಪುಟ್ಟರಾಜು, ಬಿ.ಎಚ್.ರವಿ, ಎನ್.ಡಿ.ವಸಂತಕುಮಾರ್, ಬಿ.ಆರ್.ಕುಮಾರ್, ಡಿ.ಆರ್.ಜಗದೀಶ್, ಶ್ರೀನಿವಾಸ್, ಯೋಗೇಶ್ ಸೇರಿದಂತೆ ಹಲವು ರೈತರು ಇದ್ದರು.