ಸಾರಾಂಶ
ಹೊಸಪೇಟೆ: ದೇಶದ ಸ್ವಾತಂತ್ರ್ಯಕ್ಕಾಗಿ ಶ್ರಮಿಸಿದ ಎಲ್ಲ ವೀರಯೋಧರನ್ನು ಸ್ಮರಿಸುವುದು ನಮ್ಮೆಲ್ಲರ ಕರ್ತವ್ಯ ಎಂದು ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹ್ಮದ್ ಖಾನ್ ಹೇಳಿದರು.
ಜಿಲ್ಲಾಡಳಿತ, ಜಿಪಂ, ಹೊಸಪೇಟೆ ನಗರಸಭೆ ಸಹಯೋಗದಲ್ಲಿ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಗುರುವಾರ ಆಯೋಜಿಸಲಾದ 78ನೇ ಸ್ವಾತಂತ್ರ್ಯೋತ್ಸವ ದಿನಾಚರಣೆ ಕಾರ್ಯಕ್ರಮದಲ್ಲಿ ಧ್ವಜಾರೋಹಣ, ಮಹನೀಯರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಹಾಗೂ ರಾಷ್ಟ್ರ ಧ್ವಜಾರೋಹಣ ನೆರವೇರಿಸಿ, ಪಥ ಸಂಚಲನ ವೀಕ್ಷಿಸಿ ಗೌರವ ವಂದನೆ ಸ್ವೀಕರಿಸಿ, ಜ್ಯೋತಿ ಬೆಳಗಿಸಿ ಅವರು ಮಾತನಾಡಿದರು.ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ, ಬಲಿದಾನದಿಂದ ದೇಶಕ್ಕೆ ಸ್ವಾತಂತ್ರ್ಯ ಬಂದಿದೆ. ರಾಷ್ಟ್ರಕ್ಕೆ ಸ್ವಾತಂತ್ರ್ಯ ತಂದು ಕೊಟ್ಟ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ, ಸರ್ದಾರ್ ವಲ್ಲಭಭಾಯಿ ಪಟೇಲ್, ನೆಹರು, ಸುಭಾಷ್ ಚಂದ್ರಬೋಸ್, ದಾದಾಭಾಯಿ ನವರೋಜಿ, ಮೌಲಾನ ಅಬುಲ್ ಕಲಾಂ ಆಜಾದ್, ಭಗತ್ ಸಿಂಗ್, ಚಂದ್ರಶೇಖರ ಅಜಾದ್, ರಾಜ್ ಗುರು, ಸುಖ್ ದೇವ್ ಹಾಗೂ ಸಾವಿರಾರು ವೀರಯೋಧರನ್ನು ನಾವು ನೆನಪಿಸಿಕೊಳ್ಳುತ್ತಿದ್ದೇವೆ. ಬೇರೆ ದೇಶಗಳಿಗೆ ಹೋಲಿಸಿದರೆ ನಮ್ಮ ಭಾರತವು ನಂಬರ್ ವನ್ ದೇಶವಾಗಿದೆ ಎಂದರು.
ರಾಜ್ಯ ಸರ್ಕಾರ ಐದು ಗ್ಯಾರಂಟಿ ಯೋಜನೆಗಳ ಅನುಷ್ಠಾನಕ್ಕಾಗಿ ₹55 ರಿಂದ 60 ಸಾವಿರ ಕೋಟಿ ಖರ್ಚು ಮಾಡುತ್ತಿದೆ. ಈ ನಡುವೆ ಸಿಎಂ ಬಡವರಿಗಾಗಿ 6ನೇ ಗ್ಯಾರಂಟಿ ಯೋಜನೆ ಮಾದರಿಯಲ್ಲಿ ಸರ್ಕಾರದಿಂದ 2.30 ಲಕ್ಷ ಫಲಾನುಭವಿಗಳಿಗೆ ಮನೆ ಮಂಜೂರು ಮಾಡಿದ್ದಾರೆ. ವಸತಿ ಯೋಜನೆಗಳಡಿ ಕೇಂದ್ರ ಸರ್ಕಾರದಿಂದ ₹1.50 ಲಕ್ಷ, ರಾಜ್ಯ ಸರ್ಕಾರದಿಂದ ₹1.20 ಲಕ್ಷ, ಎಸ್ಸಿ, ಎಸ್ಟಿಯವರಿಗೆ ₹2 ಲಕ್ಷ ಸಹಾಯಧನ ನೀಡಲಾಗುತ್ತದೆ. ಮನೆ ನಿರ್ಮಾಣಕ್ಕೆ ಬಡವರಿಗೆ ತಮ್ಮ ಪಾಲಿನ ವಂತಿಕೆ ಪಾವತಿಸಲು ಕಷ್ಟ ಉಂಟಾಗುತ್ತಿರುವುದನ್ನು ಮನಗಂಡ ನಮ್ಮ ಸರ್ಕಾರವು ವಸತಿ ಯೋಜನೆಗಳಿಗೆ ₹9,500 ಕೋಟಿ ಅನುದಾನ ಮಂಜೂರಾಗಿದೆ ಎಂದರು.ಗೇಟ್ ಚೈನ್ ಲಿಂಕ್ ಕಟ್ ಹಿನ್ನೆಲೆ ಸ್ಟಾಪ್ ಗೇಟ್ ಅಳವಡಿಕೆಗೆ ಕ್ರಮ:
ತುಂಗಭದ್ರಾ ಆಣೆಕಟ್ಟಿನ 19ನೇ ಗೇಟ್ ಚೈನ್ ಲಿಂಕ್ ಕಟ್ ಹಿನ್ನೆಲೆಯಲ್ಲಿ ಹೆಚ್ಚಿನ ಪ್ರಮಾಣದ ನೀರು ನದಿಗೆ ಹರಿಯುತ್ತಿದ್ದು, ರೈತರು ಆತಂಕದಲ್ಲಿದ್ದರು. ಆದರೆ, ಎಂಜನಿಯರ್ಸ್ ಮತ್ತು ತಾಂತ್ರಿಕ ತಂಡದವರು ಸ್ಟಾಪ್ ಗೇಟ್ ಅಳವಡಿಕೆಗೆ ತ್ವರಿತವಾಗಿ ಕ್ರಮ ಕೈಗೊಳ್ಳುತ್ತಿದ್ದಾರೆ ಎಂದರು.ಶಾಸಕ ಎಚ್.ಆರ್. ಗವಿಯಪ್ಪ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಹೊಸಪೇಟೆ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಚ್.ಎನ್.ಎಫ್ ಇಮಾಮ್ ನಿಯಾಜಿ, ಡಿಸಿ ದಿವಾಕರ್, ಜಿಪಂ ಸಿಇಒ ಅಕ್ರಮ ಶಾ, ಎಸ್ಪಿ ಶ್ರೀಹರಿಬಾಬು, ಪ್ರಾದೇಶಿಕ ಉಪ ಅರಣ್ಯ ಸಂರಕ್ಷಣಾಧಿಕಾರಿ ಅರ್ಸಲನ್, ಎಡಿಸಿ ಬಾಲಕೃಷ್ಣಪ್ಪ ಇದ್ದರು.
ಪರೇಡ್ ಕಮಾಂಡರ್ ಶಶಿಕುಮಾರ್ ನೇತೃತ್ವದಲ್ಲಿ ಪೊಲೀಸ್, ಗೃಹರಕ್ಷದಳ, ಎನ್.ಸಿ.ಸಿ., ಗೈಡ್ಸ್, ಸೇವಾದಳ, ವಿವಿಧ ಶಾಲೆಗಳು ಒಳಗೊಂಡಂತೆ ಒಟ್ಟು 12 ತಂಡಗಳಿಂದ ಆಕರ್ಷಕ ಪಥಸಂಚಲನ ನಡೆಯಿತು. ವಿವಿಧ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಮಕ್ರಮಗಳು ನಡೆದವು. ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.