ಬಸವಾದಿ ಶರಣರ ಸಾಹಿತ್ಯ ಮನನ ಮಾಡಿಕೊಳ್ಳಿ: ಮಂಜುನಾಥ ಅಡವೇರ

| Published : Aug 12 2024, 01:02 AM IST

ಬಸವಾದಿ ಶರಣರ ಸಾಹಿತ್ಯ ಮನನ ಮಾಡಿಕೊಳ್ಳಿ: ಮಂಜುನಾಥ ಅಡವೇರ
Share this Article
  • FB
  • TW
  • Linkdin
  • Email

ಸಾರಾಂಶ

ಬಸವಾದಿ ಶರಣರು ಅನುಭವದ ಮೂಲಕ ಅನುಭಾವದ ಎತ್ತರಕ್ಕೆ ಏರಿದ ವಚನಗಳನ್ನು ರಚಿಸಿದ್ದಾರೆ. ಅವು ನಮ್ಮ ಬದುಕಿನ ದಾರಿ ದೀಪವಾಗಿವೆ ಎಂದು ಮಂಜುನಾಥ ಅಡವೇರ ಹೇಳಿದರು.

ಧಾರವಾಡ: ಹಿಂಸೆ, ಸುಳ್ಳು, ನಿಂದೆ, ವ್ಯಭಿಚಾರ, ದೈಹಿಕ ದುರಾಚಾರದಲ್ಲಿ ಕೆಲವರು ತೊಡಗಿಕೊಂಡು ತಮ್ಮನ್ನು ತಾವೇ ಹಾಳು ಮಾಡಿಕೊಳ್ಳುತ್ತಾರೆ. ಇದರಿಂದ ದೂರ ಸರಿಯಬೇಕಾದರೆ ಬಸವಾದಿ ಶರಣ ಸಾಹಿತ್ಯ ಮನನ ಮಾಡಿಕೊಂಡು ಜೀವನ ಮೌಲ್ಯ ಹೆಚ್ಚಿಸಿಕೊಳ್ಳಬೇಕು ಎಂದು ಕ್ಷೇತ್ರ ಸಂಪನ್ಮೂಲ ಕೇಂದ್ರದ ಸಮನ್ವಯಾಧಿಕಾರಿ ಮಂಜುನಾಥ ಅಡವೇರ ಹೇಳಿದರು.

ಶ್ರಾವಣ ಮಾಸದ ನಿಮಿತ್ತ ಇಲ್ಲಿಯ ಆರ್‌ಎಲ್‌ಎಸ್‌ ಕಾಲೇಜಿನಲ್ಲಿ ಬಸವ ಕೇಂದ್ರ ವತಿಯಿಂದ ಶಾಲಾ ಮಕ್ಕಳಿಗೆ ಏರ್ಪಡಿಸಿದ್ದ ವಚನ ಕಂಠಪಾಠ ಲೇಖನ ಸ್ಪರ್ಧೆ ಉದ್ಘಾಟಿಸಿ, ಜೀವನ ಮೌಲ್ಯ ಗ್ರಂಥ ಬಿಡುಗಡೆಗೊಳಿಸಿ ಮಾತನಾಡಿದರು.

ಬಸವಾದಿ ಶರಣರು ಅನುಭವದ ಮೂಲಕ ಅನುಭಾವದ ಎತ್ತರಕ್ಕೆ ಏರಿದ ವಚನಗಳನ್ನು ರಚಿಸಿದ್ದಾರೆ. ಅವು ನಮ್ಮ ಬದುಕಿನ ದಾರಿ ದೀಪವಾಗಿವೆ. ಹಾಲಿಗೆ ಉಪ್ಪು ಬೆರೆಸಿದಾಗ ಅದು ಮೊಸರಿನ ರೂಪ ಪಡೆಯುತ್ತದೆ. ನಂತರ, ಮಜ್ಜಿಗೆಯಾಗಿ, ಬೆಣ್ಣೆಯಾಗಿ ಕಾಣಿಸುತ್ತದೆ. ಬೆಣ್ಣೆ ಕಾಯಿಸಿದಾಗ ತುಪ್ಪವಾಗಿ ಪರಿಣಮಿಸುತ್ತದೆ. ಅದೇ ರೀತಿ ವಿದ್ಯಾರ್ಥಿಗೆ ಬಸವಾದಿ ಶರಣರ ವಚನ ಸಾಹಿತ್ಯ, ಧಾರ್ಮಿಕತೆ, ವೈಚಾರಿಕತೆ, ಅರಿವಿನ ಜ್ಞಾನ ಕೊಟ್ಟಾಗ ಸಂಸ್ಕಾರ ಪಡೆದು ಸಮಾಜದಲ್ಲಿ ಉತ್ತಮ ನಾಗರಿಕನಾಗಿ ತನ್ನ ಜೀವನದ ಮೌಲ್ಯ ಹೆಚ್ಚಿಸಿಕೊಳ್ಳುತ್ತಾನೆ ಎಂದರು.

ಆರ್.ಎಲ್.ಎಸ್. ಮಹಾವಿದ್ಯಾಲಯದ ಉಪ ಪ್ರಾಚಾರ್ಯ ಆರ್.ಬಿ. ಬಾನಪ್ಪನವರ ಮಾತನಾಡಿ, ಶ್ರಾವಣ ಪವಿತ್ರ ಮಾಸ. ಈ ಸಮಯದಲ್ಲಿ ಮನೆ ಸದಸ್ಯರು ನಿತ್ಯ ಒಂದು ವಚನ ಓದಿ ಅದರ ಭಾವಾರ್ಥವನ್ನು ತಿಳಿಸಿದರೆ ಮನೆಯಲ್ಲಿ ಸಂತಸದ ಹೊನಲು ಹರಿಯುತ್ತದೆ. ಮಕ್ಕಳಿಗೆ ಬುದ್ಧಿ ಹೇಳಿ ತಿಳಿವಳಿಕೆ ನೀಡುವ ಬದಲಾಗಿ ವಚನ ಓದುವ, ಬರೆಯುವ ಅರ್ಥ ಮಾಡಿಕೊಳ್ಳುವ ಪ್ರಯತ್ನ ಮಾಡಿಸಿದರೆ ಅವರಿಗೆ ಜೀವನ ಮೌಲ್ಯದ ಅರಿವು ಸಿಗುತ್ತದೆ ಎಂದರು.

ಬಸವ ಕೇಂದ್ರ ಅಧ್ಯಕ್ಷ ಸಿದ್ದರಾಮ ನಡಕಟ್ಟಿ ಅಧ್ಯಕ್ಷತೆ ವಹಿಸಿದ್ದರು. ಕೆ.ಎನ್. ಕರಿಗಾರ, ಶಕುಂತಲಾ ಮನ್ನಂಗಿ ಇದ್ದರು. ಎಫ್.ಬಿ. ಕಣವಿ ನಿರೂಪಿಸಿದರು. ಬಸವಂತ ತೋಟದ ಸ್ವಾಗತಿಸಿದರು. ಡಾ. ಗಿರೀಶ ದೇಸೂರ ವಂದಿಸಿದರು. 800ಕ್ಕೂ ಹೆಚ್ಚು ಪ್ರಾಥಮಿಕ ಹಾಗೂ ಪ್ರೌಢ ಶಾಲಾ ಮಕ್ಕಳು ವಚನ ಲೇಖನ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಎಲ್ಲ ಮಕ್ಕಳಿಗೆ ಉಚಿತ ನೋಟಪುಸ್ತಕ ಹಾಗೂ ಜೀವನ ಮೌಲ್ಯ ಗ್ರಂಥವನ್ನು ವಿತರಣೆ ಮಾಡಿತು.