ಸ್ವಾಮಿ ವಿವೇಕಾನಂದರ ಬೋಧನೆಗಳು, ನುಡಿಗಳು ಎಂತವರ ಜೀವನದಲ್ಲೂ ಹೂವು ಅರಳುವಂತೆ ಮಾಡುತ್ತದೆ. ಯಶಸ್ಸು, ಗುರಿ ಸಾಧಿಸಲು ನೀಡಿದ್ದ ಬೋಧನೆಗಳನ್ನು ಪ್ರತಿದಿನ ಸ್ಮರಿಸಬೇಕು ಎಂದು ಕೆಪಿಸಿಸಿ ರಾಜ್ಯ ಪ್ರಧಾನ ಕಾರ್ಯದರ್ಶಿ ಹಾಗೂ ಅಖಿಲ ಭಾರತ ವೀರಶೈವ ಮಹಾಸಭೆಯ ರಾಷ್ಟ್ರೀಯ ಮಹಿಳಾ ಘಟಕದ ಅಧ್ಯಕ್ಷರಾದ ವೀಣಾ ವಿಜಯಾನಂದ ಕಾಶಪ್ಪನವರ ಹೇಳಿದರು.

ಕನ್ನಡಪ್ರಭ ವಾರ್ತೆ ಮುದ್ದೇಬಿಹಾಳ

ಸ್ವಾಮಿ ವಿವೇಕಾನಂದರ ಬೋಧನೆಗಳು, ನುಡಿಗಳು ಎಂತವರ ಜೀವನದಲ್ಲೂ ಹೂವು ಅರಳುವಂತೆ ಮಾಡುತ್ತದೆ. ಯಶಸ್ಸು, ಗುರಿ ಸಾಧಿಸಲು ನೀಡಿದ್ದ ಬೋಧನೆಗಳನ್ನು ಪ್ರತಿದಿನ ಸ್ಮರಿಸಬೇಕು ಎಂದು ಕೆಪಿಸಿಸಿ ರಾಜ್ಯ ಪ್ರಧಾನ ಕಾರ್ಯದರ್ಶಿ ಹಾಗೂ ಅಖಿಲ ಭಾರತ ವೀರಶೈವ ಮಹಾಸಭೆಯ ರಾಷ್ಟ್ರೀಯ ಮಹಿಳಾ ಘಟಕದ ಅಧ್ಯಕ್ಷರಾದ ವೀಣಾ ವಿಜಯಾನಂದ ಕಾಶಪ್ಪನವರ ಹೇಳಿದರು.

ಪಟ್ಟಣದ ವಿಬಿಸಿ ಹೈಸ್ಕೂಲ್‌ನ ಶ್ರೀ ಸಿದ್ದೇಶ್ವರ ವೇದಿಕೆಯಲ್ಲಿ ಕರ್ನಾಟಕ ರಾಜ್ಯ ಯುವ ಸಂಘಗಳ ಒಕ್ಕೂಟ (ರಿ) ಬೆಂಗಳೂರು ಹಾಗೂ ವಿಜಯಪುರ ಜಿಲ್ಲಾ, ಮುದ್ದೇಬಿಹಾಳ ತಾಲೂಕು ಘಟಕದಿಂದ ನಡೆದ ಸ್ವಾಮಿ ವಿವೇಕಾನಂದರ ರಾಜ್ಯ, ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಮಾರ್ಗದರ್ಶಕ, ಬೆಳಕು, ಯೋಗಿ, ದೇಶಭಕ್ತ ಸಂತ, ಆಧುನಿಕ ಭಾರತದ ಪ್ರವಾದಿ ಹೀಗೆ ನಾವು ಸ್ವಾಮಿ ವಿವೇಕಾನಂದರನ್ನು ಹಲವಾರು ಹೆಸರುಗಳಿಂದ ಕರೆಯುತ್ತೇವೆ. ವಾಸ್ತವವಾಗಿ ಅವರ ಬೋಧನೆಗಳು, ತತ್ವಗಳು, ನುಡಿಗಳು ಯಾವಾಗಲೂ ನಮ್ಮ ದೇಶದ ಯುವಕರ ಮೇಲೆ ಪ್ರಭಾವ ಬೀರುವ ಕೆಲಸ ಮಾಡುತ್ತಲೇ ಬಂದಿದೆ. ನಮ್ಮ ಬೌದ್ಧಿಕ ಉನ್ನತಿ, ಆಧ್ಯಾತ್ಮಿಕ ಮತ್ತು ಭೌತಿಕ ಸಮೃದ್ಧಿಯಲ್ಲಿ ಯುವಕರು ವಹಿಸಬೇಕಾದ ಮುಖ್ಯ ಪಾತ್ರದ ಬಗ್ಗೆ ಸ್ವಾಮಿ ವಿವೇಕಾನಂದರು ಧ್ವನಿ ಎತ್ತುವ ಮೂಲಕ ಯುವಕರನ್ನು ಎಚ್ಚರಗೊಳಿಸಿದರು ಎಂದರು. ದೇವಿಕಾ ಸುಬ್ಬರಾವ ಫೌಂಡೇಶನ್ ಮುಖ್ಯಸ್ಥೆ ಹಾಗೂ ಕರ್ನಾಟಕ ಕಾಂಗ್ರೆಸ್‌ ಮಹಿಳಾ ಘಟಕದ ರಾಜ್ಯ ಪ್ರಧಾನ ಕಾರ್ಯದರ್ಶಿ ಪಲ್ಲವಿ ನಾಡಗೌಡ ಮಾತನಾಡಿ, ಏಳಿ ಎದ್ದೇಳಿ ಗುರಿ ಮುಟ್ಟುವತನಕ ನಿಲ್ಲದಿರಿ ಎಂದು ಸ್ವಾಮಿ ವಿವೇಕಾನಂದರು ಹೇಳಿದಂತೆ ಯಾವ ವ್ಯಕ್ತಿ ಈ ಬೋಧನೆ ಅರ್ಥ ಮಾಡಿಕೊಳ್ಳುತ್ತಾರೋ ಅವರು ಇಂದಲ್ಲ, ನಾಳೆ ತನ್ನ ಜೀವನದಲ್ಲಿ ಏನನ್ನಾದರೂ ಸಾಧಿಸುತ್ತಾರೆ. ನಮ್ಮಲ್ಲಿ ಹೆಚ್ಚಿನವರು ನಮ್ಮ ಮಾನಸಿಕ ಶಕ್ತಿ ಮತ್ತು ಏಕಾಗ್ರತೆ ವ್ಯರ್ಥ ಮಾಡಿ ಅತಿಯಾಗಿ ಬೇಡದ ವಿಚಾರಗಳತ್ತ ಗಮನ ಹರಿಸಿ ಜೀವನ ವ್ಯರ್ಥ ಮಾಡಿಕೊಳ್ಳುತ್ತಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದರು. ನಾವು ಬಹಳಷ್ಟು ಭವ್ಯ ಮತ್ತು ಸಂಕಿರಣ ವಿಚಾರಗಳನ್ನು ಯೋಚಿಸಬಹುದು. ಆದರೆ, ನಾವು ಅವುಗಳನ್ನು ಆಚರಣೆಗೆ ತರದಿದ್ದರೆ ಜಗತ್ತಿನ ಅತ್ಯಂತ ಅಮೂಲ್ಯವಾದ ಕಲ್ಪನೆಯೂ ಅರ್ಥಹೀನವಾಗಿರುತ್ತದೆ. ಆದ್ದರಿಂದ, ನಿಜವಾದ ಯಶಸ್ಸು ಸಾಧಿಸಲು, ನಾವು ಸರಿಯಾದ ಯೋಜನೆಯತ್ತ ಗಮನಹರಿಸಬೇಕು ಎಂದರು.ಯುವಕರು ವಿದ್ಯಾರ್ಥಿ ಜೀವನವನ್ನು ಸಂತೋಷದಿಂದ ಸಂಭ್ರಮಿಸುವ ಮೂಲಕ ಉತ್ತಮ ಗುಣಮಟ್ಟ ಶಿಕ್ಷಣ ಪಡೆದು ಹೆತ್ತವರ, ಗುರುಗಳ, ದೇಶಕ್ಕೆ ಕಿರ್ತಿ ತರುವಂತಹ ಉತ್ತಮ ನಾಗರಿಕರಾಗಲು ಶ್ರಮಿಸಬೇಕು. ಧ್ಯಾನ, ವ್ಯಾಯಾಮ ಹಾಗೂ ಯೋಗವನ್ನು ಅಭ್ಯಾಸ ಮಾಡಿಕೊಳ್ಳಬೇಕು. ಕಠಿಣವಾದ ಏಕಾಗ್ರತೆಯಿಂದ ನಿಮ್ಮ ಗುರಿಗಳ ಮೇಲೆ ಕೆಲಸ ಮಾಡಿ. ಇದರಿಂದಾಗಿ ನೀವು ನಿಮ್ಮ ವ್ಯಕ್ತಿತ್ವದಲ್ಲಿ ಬದಲಾವಣೆ ಕಾಣಲು ಸಾಧ್ಯ ಎಂದು ತಿಳಿಸಿದರು.ಸಿದ್ಧನಕೊಳ್ಳದ ಶಿವಕುಮಾರ ಮಹಾಸ್ವಾಮಿಗಳು ಆಶೀರ್ವಚನ ನೀಡಿದರು. ತಂಗಡಗಿ ಹಡಪದ ಅಪ್ಪಣ್ಣ ಗುರುಪೀಠದ ಅನ್ನದಾನ ಭಾರತಿ

ಅಪ್ಪಣ್ಣ ಸ್ವಾಮೀಜಿ, ರವಿ ಪವಾರ್, ತಂಗಡಗಿ ಡಾ.ಎಸ್.ಬಾಲಾಜಿ, ಸುಚಿತ ಚಳಗೇರಿ, ಸಂಗಣ್ಣ ಕಂಚ್ಯಾಣಿ, ವಿಜಯಪುರ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಕುಲಸಚಿವ ಶಂಕರಗೌಡ ಸೋಮನಾಳ, ಕಸಾಪ ಅಧ್ಯಕ್ಷ ಕಾಮರಾಜ ಬಿರಾದಾರ, ಅಸ್ಕಿ ಫೌಂಡೇಶನ್‌ ಮುಖ್ಯಸ್ಥ ಸಿ.ಬಿ.ಅಸ್ಕಿ, ರಾಜುಗೌಡ ತುಂಬಗಿ, ಪುರಸಭೆ ಮಾಜಿ ಅಧ್ಯಕ್ಷ ಮೈಬೂಬ್‌ ಗೊಳಸಂಗಿ, ಎಂ.ಎಂ.ಬೆಳಗಲ್ಲ. ಸತೀಶ ಓಸ್ವಾಲ್, ಗಣೇಶ ಅನ್ನಗೌನಿ ಸೇರಿದಂತೆ ಅನೇಕರು ಇದ್ದರು.

ವಿವೇಕಾನಂದರ ಬೋಧನೆ, ತತ್ವಗಳನ್ನು ನಮ್ಮಲ್ಲಿ ಅಳವಡಿಸಿಕೊಳ್ಳುವುದರ ಮೂಲಕ ಎಂತದ್ದೇ ಕಠಿಣ ಸಂದರ್ಭದಲ್ಲೂ ನಾವು ಯಶಸ್ಸು ಪಡೆಯಬಹುದು. ಸ್ವಾಮಿ ವಿವೇಕಾನಂದರ ಜನ್ಮದಿನ ಜಯಂತಿ ಎಂದು ಆಚರಿಸಿದರೇ ಸಾಲದು ಈ ಶುಭ ದಿನದಂದು ನಾವು ಅವರ ತತ್ವ ಸ್ಮರಿಸುವುದು ಒಳ್ಳೆಯದು.

-ವೀಣಾ ವಿಜಯಾನಂದ ಕಾಶಪ್ಪನವರ, ಅಖಿಲ ಭಾರತ ವೀರಶೈವ ಮಹಾಸಭೆಯ ರಾಷ್ಟ್ರೀಯ ಮಹಿಳಾ ಘಟಕದ ಅಧ್ಯಕ್ಷರು.