ಈಗ ರಾಜ್ಯಾದ್ಯಂತ ನಡೆಯುತ್ತಿರುವುದು ರಾಷ್ಟ್ರರಾಜಕಾರಣದಲ್ಲಿ ವಿಶೇಷ ಛಾಪು ಮೂಡಿಸಿದ ರಾಮಕೃಷ್ಣ ಹೆಗಡೆಯವರ ಜನ್ಮ ಶತಮಾನೋತ್ಸವದ ವರ್ಷ. ಉತ್ತರ ಕನ್ನಡದಲ್ಲಿ ೧೯೫೭ರಲ್ಲಿ ಅಧಿಕೃತವಾಗಿ ತಮ್ಮ ರಾಜಕೀಯ ಜೀವನ ಪ್ರಾರಂಭಿಸಿದ ಹೆಗಡೆಯವರು ಈಗಲೂ ಹೆಗ್ಡೇರು ಆಗಿ ಜನಮಾನಸದಲ್ಲಿ ಬದುಕಿ, ಬೆಳೆದು, ಬೆಳಗುತ್ತಿದ್ದಾರೆ. ೧೯೮೩ರಲ್ಲಿ ಕರ್ನಾಟಕದಲ್ಲಿ ಹೆಗಡೆಯವರ ನಾಯಕತ್ವದಲ್ಲಿ ಮೊಟ್ಟ ಮೊದಲಿಗೆ ಕಾಂಗ್ರೆಸ್ಸೇತರ ಸರ್ಕಾರ ಪ್ರಜಾಸತ್ತಾತ್ಮಕ ರೀತಿಯಲ್ಲಿ ಜನ್ಮತಾಳಿದಾಗಲೇ ನಾಡಿನಲ್ಲಿ ಹೊಸ ಶಕೆ ಪ್ರಾರಂಭ.
ಈಗ ರಾಜ್ಯಾದ್ಯಂತ ನಡೆಯುತ್ತಿರುವುದು ರಾಷ್ಟ್ರರಾಜಕಾರಣದಲ್ಲಿ ವಿಶೇಷ ಛಾಪು ಮೂಡಿಸಿದ ರಾಮಕೃಷ್ಣ ಹೆಗಡೆಯವರ ಜನ್ಮ ಶತಮಾನೋತ್ಸವದ ವರ್ಷ. ಉತ್ತರ ಕನ್ನಡದಲ್ಲಿ ೧೯೫೭ರಲ್ಲಿ ಅಧಿಕೃತವಾಗಿ ತಮ್ಮ ರಾಜಕೀಯ ಜೀವನ ಪ್ರಾರಂಭಿಸಿದ ಹೆಗಡೆಯವರು ಈಗಲೂ ಹೆಗ್ಡೇರು ಆಗಿ ಜನಮಾನಸದಲ್ಲಿ ಬದುಕಿ, ಬೆಳೆದು, ಬೆಳಗುತ್ತಿದ್ದಾರೆ. ೧೯೮೩ರಲ್ಲಿ ಕರ್ನಾಟಕದಲ್ಲಿ ಹೆಗಡೆಯವರ ನಾಯಕತ್ವದಲ್ಲಿ ಮೊಟ್ಟ ಮೊದಲಿಗೆ ಕಾಂಗ್ರೆಸ್ಸೇತರ ಸರ್ಕಾರ ಪ್ರಜಾಸತ್ತಾತ್ಮಕ ರೀತಿಯಲ್ಲಿ ಜನ್ಮತಾಳಿದಾಗಲೇ ನಾಡಿನಲ್ಲಿ ಹೊಸ ಶಕೆ ಪ್ರಾರಂಭ.
ಭಾವನೆಗಳಿಂದ ಹೆಗ್ಡೇರಿಗೆ ತೀರ ಹತ್ತಿರದವರಾಗಿದ್ದ ಕವಿ ಕುವೆಂಪು ಹೇಳಿದ್ದನ್ನು ಸ್ಮರಿಸಬೇಕಾಗಿದೆ, ಜೀವನದ ಸಂಪತ್ತು ಅದರ ಅನುಭವಗಳಲ್ಲಿದೆ. ನೆನಪು ಆ ಅನುಭವಗಳ ನಿಧಿ. ರಾಮಕೃಷ್ಣ ಹೆಗಡೆಯವರ ಜನ್ಮಶತಮಾನೋತ್ಸವದ ವರ್ಷದುದ್ದಕ್ಕೂ ಅವರ ವಿವಿಧ, ವಿಶೇಷ ಅನುಭವಗಳ ನಿಧಿ ಗೋಚರಿಸಲಿದೆ. ವೈಯಕ್ತಿಕ ಏಳು-ಬೀಳುಗಳಿದ್ದರೂ ಪ್ರಜಾಪ್ರಭುತ್ವ, ಒಕ್ಕೂಟ ವ್ಯವಸ್ಥೆಗಳಿಗೆ ಅವರಿಗಿದ್ದ ಸ್ಪಷ್ಟ ಬದ್ಧತೆಯ ದರ್ಶನವಾಗುವುದು ಖಚಿತ. ಅವರಿಗಿದ್ದ ಅಭಿವೃದ್ಧಿಯ ಒಲವು, ಅವರು ಪಡೆದ ಅನುಭವಗಳ ವೈವಿಧ್ಯತೆಯನ್ನು ಅಧ್ಯಯನ ಮಾಡಿದರೆ ಅವರ ಜನ್ಮಶತಮಾನೋತ್ಸವ ಆಚರಿಸುವುದು ಈಗೆಷ್ಟು ಅಗತ್ಯವೆನ್ನುವುದು ತಿಳಿಯುತ್ತದೆ.ರಾಜ್ಯದ ಮುಖ್ಯಮಂತ್ರಿಯಾಗಿ ಜನಾನುರಾಗಿಯಾಗಿ ಉತ್ತರ ಕರ್ನಾಟಕದ ಮನೆ ಮನೆಯಲ್ಲೂ ತಮ್ಮ ಪ್ರಭಾವ ಬಿಟ್ಟು ಹೋದ ಹೆಗ್ಡೇರು ನೆನಪಿನ ದೋಣಿಯಲ್ಲಿ ನಗುಮುಖದೊಂದಿಗೆ ಈಗಲೂ ಕೈ ಬೀಸುತ್ತ ತೇಲುತ್ತಿದ್ದಾರೆ. ನಾಯಕರಲ್ಲಿ ನಾಯಕನಾಗುವ ಮೂಲಕ ಮಹಾ ನಾಯಕನಾದ ರಾಮಕೃಷ್ಣ ಹೆಗಡೆಯವರ ಜನ್ಮ ಶತಮಾನೋತ್ಸವದ ಮಹತ್ವ ಕಾಪಾಡಿಕೊಳ್ಳಲು ಅವರ ಸಾಧನೆ, ವರ್ಚಸ್ಸು ಮತ್ತು ಪ್ರಭಾವಗಳನ್ನಷ್ಟೇ ಸ್ಮರಿಸುವ ಕಾಮನ್ ಸೆನ್ಸ್ ನಮಗಿರಲಿ.
ಹೆಗಡೆಯವರ ಅಧ್ಯಯನಶೀಲತೆಗೊಂದು ಬಲವಾದ ಸಾಕ್ಷಿಯಾಗಿದ್ದ ಅವರ ಸರ್ಕಾರವೇ ಪಾಸುಮಾಡಿದ ಪಂಚಾಯತ್ ರಾಜ್ ಕಾನೂನಿನಡಿಯಲ್ಲಿ (ಮಂಡಳ ಪಂಚಾಯತಗಳ ರಚನೆಗೆ ದಾರಿ ಮಾಡಿದ ಕಾನೂನು) ಕರ್ನಾಟಕದ ಆಯ್ಕೆಯಾದ ಸದಸ್ಯರನ್ನುದ್ದೇಶಿಸಿ ಬೆಂಗಳೂರಿನಲ್ಲಿ ಅವರು ಮಾಡಿದ ಸುಂದರ ಭಾಷಣವನ್ನು ಈಗಲೂ ನೆನಪಿಸಿಕೊಂಡು ಧಾರಾಳವಾಗಿ ಹೊಗಳುವವರಿದ್ದಾರೆ. ಅಂದು ಅವರು ತಳಮಟ್ಟದಲ್ಲಿ ಅಧಿಕಾರಿಗಳ ಮತ್ತು ಜನಪ್ರತಿನಿಧಿಗಳ ನಡುವೆ ಘರ್ಷಣೆ ನಡೆಯುವ ಸಾಧ್ಯತೆಯನ್ನು ವಿವರಿಸಿದ ರೀತಿ ಅವರೊಬ್ಬ ಪ್ರತಿಭಾವಂತ ರಾಜಕಾರಣಿ ಎನ್ನುವುದನ್ನು ಸಾರಿ ಹೇಳುತ್ತಿತ್ತು.ಕರ್ನಾಟಕದ ಕಾನೂನಿನಲ್ಲಿ ಅಭಿವೃದ್ಧಿ ಆಧಾರಿತ ವಿಧಾನ ಇತ್ತೆಂದು ಸಮಾಜ ವಿಜ್ಞಾನಿಗಳು ಈಗ ಹೇಳುತ್ತಿರುತ್ತಾರೆ. ಅರಸು ಸರ್ಕಾರ ಅನುಷ್ಠಾನಕ್ಕೆ ತಂದ ಉಳುವವನನ್ನೇ ಹೊಲದೊಡೆಯನನ್ನಾಗಿ ಮಾಡಿದ ೧೯೭೪ರ ಕ್ರಾಂತಿಕಾರಿ ಭೂಸುಧಾರಣಾ ಕಾನೂನನ್ನು ಹೊಗಳಿದ ಲಂಡನ್ ವಿ.ವಿಯ ಸಂಶೋಧಕ ಜೇಮ್ಸ್ ಮೇನರ್ ಅವರೇ ಹೆಗಡೆ- ನಜೀರ್ ಸಾಬ್ ಜತೆಗೂಡಿ ರೂಪಿಸಿದ ಪಂಚಾಯತ್ ರಾಜ್ ವ್ಯವಸ್ಥೆಯ ಕಾನೂನನ್ನು ಅಧ್ಯಯನ ಮಾಡಿ ಹೊಗಳಿದ್ದಕ್ಕೆ ಹೆಚ್ಚಿನ ಮಹತ್ವವಿದೆ.
ಇದೇ ಕಾನೂನು ಮುಂದೆ ಸ್ಥಾನಿಕ ಸ್ವರಾಜ್ಯ ಸಂಸ್ಥೆಗಳನ್ನು ಬಲಪಡಿಸುವ ಧ್ಯೇಯ ಹೊಂದಿದ ಭಾರತದ ಸಂವಿಧಾನದ ೭೩ ಮತ್ತು ೭೪ನೇ ತಿದ್ದುಪಡಿಗಳಿಗೆ ಪ್ರೇರಣೆ ನೀಡಿತೆಂದು ಇತ್ತೀಚೆಗೆ ಬೆಂಗಳೂರಿನಲ್ಲಿ ಜನ್ಮ ಶತಮಾನೋತ್ಸವ ಕಾರ‍್ಯಕ್ರಮದಲ್ಲಿ ಮುಖ್ಯಮಂತ್ರಿ ಡಿಕೆ ಶಿ ಪಕ್ಷ ರಾಜಕೀಯ ಬದಿಗಿಟ್ಟು ಮನಸಾರೆ ಒಪ್ಪಿಕೊಂಡಿದ್ದರು. ಹೆಗಡೆ ರಾಜಕಾರಣದ ಹೊಣೆಗಾರಿಕೆ ಎಲ್ಲರಿಗೂ ಎಲ್ಲರಿಗೂ ಸಿಗುವಂತೆ ಮಾಡಿದ ಮತ್ತು ನಾಗರಿಕ ಸಹಭಾಗಿತ್ವ ಬೆಳೆಸಿದ ಶ್ರೇಷ್ಠ ರಾಜಕಾರಣಿ ಎಂದು ಉಪರಾಷ್ಟ್ರಪತಿ ಸಿ.ಪಿ.ರಾಧಾಕೃಷ್ಣನ್ ಹೇಳಿದ್ದು ಅವರ ಹಿರಿಮೆಗೆ ಸಂದ ಕಿರೀಟ. ಈ ಪ್ರಾಮಾಣಿಕ ಪ್ರಶಂಸೆಯ ನುಡಿ ಸ್ಮರಿಸಿದಾಗ ಗ್ರಾಮೀಣ ಕರ್ನಾಟಕದಲ್ಲಿ ಅಧಿಕಾರ ವಿಕೇಂದ್ರೀಕರಣಕ್ಕೆ ಹೊಸ ಭಾಷ್ಯ ಬರೆದ ಹೆಗ್ಡೇರು ಈಗಲೂ ನಮ್ಮ ಜತೆಗಿದ್ದಾರೆಂಬ ಭಾವನೆ ಬಂದರೆ ಅದು ಸಹಜವೇ.ಭೂಸುಧಾರಣೆ ಕಾನೂನಿಲ್ಲೂ ತಿದ್ದುಪಡಿ ಮಾಡಿ ಪ್ರಥಮ ಅವಧಿಯಲ್ಲೇ ಹೆಗಡೆ ಸರ್ಕಾರ ಹೊಸ ರೀತಿಯಲ್ಲಿ ಒಡೆತನ ಪಡೆದ ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ನೆರವಾಗಿದ್ದು ಈಗ ಸ್ಮರಣಾರ್ಥ ಉತ್ತರ ಕನ್ನಡ, ಅವಿಭಜಿತ ದಕ್ಷಿಣ ಕನ್ನಡ ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲಿ ಗಣನೀಯವಾಗಿ ಪರಿಣಾಮ ಬೀರಿದ ೧೯೭೪ರ ಭೂಸುಧಾರಣಾ ಕಾಯದೆಯನ್ವಯ ಕೊಡಬೇಕಾಗಿದ್ದ ಪರಿಹಾರದ ಮೊತ್ತವನ್ನು ಮನ್ನಾ ಮಾಡುವ ನಿರ್ಣಯ ರಾಜ್ಯ ಸಂಪುಟ ಸಭೆಯಲ್ಲಿ ಪಾಸಾದಾಗ ಬಡ ರೈತಸಮೂಹಕ್ಕೆ ಅನುಕೂಲವಾಯಿತು. ಏಷ್ಯಾ ಖಂಡದಲ್ಲೇ ಪ್ರಥಮ ಬಾರಿಗೆ ಇಂಥ ಕ್ರಾಂತಿಕಾರಿ ನೀತಿ ಕರ್ನಾಟಕದಲ್ಲಿ ಜಾರಿಯಾಗುತ್ತಿದೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ನಜೀರ್ ಸಾಬ್ ಪತ್ರಿಕಾಗೋಷ್ಠಿಯಲ್ಲಿ ಸಾರಿದ್ದರಲ್ಲಿ ಸತ್ಯಾಂಶವಿತ್ತು.
ಸಮಾಜ ವಿಜ್ಞಾನಗಳ ಸಂಶೋಧಕರಾಗಿ ಹೆಸರು ಮಾಡಿದ ಆರ್.ಪಿ ಡೋರ್, ಸಿಡ್ನಿ ಕ್ಲೈನ್, ಎ ಜೆ ಗ್ರೇಡ್ ಮುಂತಾದವರ ಲಕ್ಷ ಸೆಳೆದ ದ್ವಿತೀಯ ಮಹಾಯುದ್ಧದ ನಂತರ ಕೇವಲ ಎರಡು ವರ್ಷಗಳ ಅವಧಿಯಲ್ಲಿ ಜಪಾನಿನಲ್ಲಿ ಜಾರಿಯಾದ ಕ್ರಾಂತಿಕಾರಿ ಭೂಸುಧಾರಣಾ ಕಾನೂನಿನ ಫಲಾನುಭವಿಗಳು ಪರಿಹಾರ ಕೊಡಲೇಬೇಕಾಯಿತು. ಆದರೆ ಕರ್ನಾಟಕದಲ್ಲಿ ಭೂಒಡೆಯರಾದ ದುರ್ಬಲ ವರ್ಗಕ್ಕೆ ಸೇರಿದ ರೈತರಿಗೆ ಪರಿಹಾರ ಕೊಡುವ ಸಮಸ್ಯೆಯೇ ಉಳಿಯಲಿಲ್ಲ. ಹೆಗ್ದೇರ ಮುಂದಾಳತ್ವದಲ್ಲಿ ಕರ್ನಾಟಕ ಜಪಾನ್ ದೇಶಕ್ಕಿಂತ ಒಂದು ಹೆಜ್ಜೆ ಮುಂದೆ ಹೋಗಿದ್ದು ಇತಿಹಾಸದ ಪುಟಗಳಲ್ಲಿ ಭದ್ರವಾಗಿ ಉಳಿದುಕೊಂಡಿದೆ.ಕಾಲ ಉರುಳಿದಂತೆ ಅಟಲ್ ಬಿಹಾರಿ ವಾಜಪೇಯಿ ಎರಡನೇ ಬಾರಿ ಪ್ರಧಾನಿಯಾದರು. ಹೆಗ್ಡೇರೆ ಅಗಾಗ ಹೇಳಿದಂತೆ ಕವಿ ಹೃದಯದ ಪ್ರಧಾನಿಯ ಕ್ಯಾಬಿನೆಟ್‌ನಲ್ಲಿ ಹೆಗಡೆ ವಾಣಿಜ್ಯ ಸಚಿವರಾಗಿದ್ದರು. ಯಾವ ಜಟಿಲ ಸಮಸ್ಯೆಯೇ ಆಗಲಿ ಶೀಘ್ರದಲ್ಲಿ ತಿಳಿಯುವ ಚಾಕಚಕ್ಯತೆಯುಳ್ಳ ಹೆಗ್ಡೇರಿಂದ ವಿಶ್ವ ವ್ಯಾಪಾರ ಸಂಸ್ಥೆಯ ಒಪ್ಪಂದದ ಅಧ್ಯಯನ. ವಿಳಂಬ ಮಾಡದೆ ಅಡಿಕೆ ಆಮದಿಗೆ ತಡೆ. ಅಡಿಕೆ ದರ ಏರಲು ಪ್ರಾರಂಭಿಸಿದಾಗ ದೇಶದ ಕೊಟ್ಯಾಂತರ ಅಡಿಕೆ ಬೆಳೆಗಾರರು ಹೆಗಡೆಯವರನ್ನು ಅರಸದೆ ಹರಸಿದರು. ಶಿರಸಿಯ ಜನರಿಂದ ಹೆಗಡೆಯವರಿಗೆ ಸಂಭ್ರಮದ ಸತ್ಕಾರ. ಅಡಿಕೆಯ ಸುಂದರ ಹಾರಾರ್ಪಣೆ ಮಾಡಿದ ಅಭಿಮಾನಿಗಳಿಂದ ಹರ್ಷೋದ್ಘಾರ. ವಾಜಪೇಯಿ ಕ್ಯಾಬಿನೆಟ್ ನಲ್ಲಿ ವಿತ್ತ ಸಚಿವರಾಗಲು ಕ್ಷುದ್ರ ರಾಜಕೀಯದಿಂದ ಸೋತ ಹೆಗ್ಡೇರು ವಾಣಿಜ್ಯ ಸಚಿವರಾಗಿ ಭಾರತದ ಅಸಂಖ್ಯಾತ ಅಡಿಕೆ ಬೆಳೆಗಾರರ ಹೃದಯ ಸಿಂಹಾಸನದಲ್ಲಿ ಕುಳಿತು ಗೆದ್ದರು.
೧೯೮೪ರ ಲೋಕಸಭಾ ಚುನಾವಣೆಯಲ್ಲಿ ರಾಜೀವ ಗಾಂಧಿ ನೇತೃತ್ವದ ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ನೀಡಿದ ರಾಜ್ಯದ ಮತದಾರರೇ ಕೆಲವೇ ತಿಂಗಳಿನ ನಂತರ ನಡೆದ ವಿಧಾನ ಸಭಾ ಚುನಾವಣೆಯಲ್ಲಿ ಹೆಗಡೆ ಮುಂದಾಳತ್ವದ ಜನತಾ ಪಕ್ಷಕ್ಕೆ ರಾಕ್ಷಸ ಬಹುಮತ ನೀಡಿದಾಗ ಕಾಂಗ್ರೆಸ್ ಮುಖಂಡರು ತಬ್ಬಿಬ್ಬಾಗಿ ಹೆಗಡೆಯವರ ಸಾರಥ್ಯವನ್ನು ಸರಿಯಾಗಿ ಅರ್ಥಮಾಡಿಕೊಳ್ಳದೆ ಎಡವಿದ್ದೇವೆಂದು ಹೇಳುವಂತಾಯ್ತು. ನಮ್ಮ ರಾಜ್ಯದ ಮತದಾರರು ಪ್ರಬುದ್ಧತೆ ಪ್ರದರ್ಶಿಸಿದ್ದರು. ಅದಕ್ಕೆ ಜಾತಿಬಲವಿಲ್ಲದ, ಹಣದ ತಾಕತ್ತುರಹಿತ ಹೆಗ್ಡೇರು ಸರ್ಕಾರ ನಡೆಸುವಲ್ಲೂ, ಪಕ್ಷಕಟ್ಟುವಲ್ಲೂ ಮೇಲುಗೈ ಹೊಂದಿದ್ದೇ ಪ್ರಧಾನ ಕಾರಣ.ಉತ್ತರ ಕನ್ನಡದ ದೊಡ್ಡ ರಾಜಕೀಯ ನಾಯಕನಾಗಿ, ಕರ್ನಾಟಕದ ಪ್ರಮುಖ ರಾಜಕೀಯ ನಾಯಕರಲ್ಲೊಬ್ಬರಾಗಿ ಮತ್ತು ಕೇವಲ ಸಾಮರ್ಥ್ಯದಿಂದ ರಾಷ್ಟ್ರಮಟ್ಟದ ರಾಜಕೀಯ ನಾಯಕನಾಗಿ ಅವರು ಬಿಟ್ಟು ಹೋದ ಹೆಜ್ಜೆಗಳ ಸಂಖ್ಯೆ ದೊಡ್ಡದು. ಆ ಹೆಜ್ಜೆಗಳನ್ನು ಗುರುತುತಿಸುವಾಗ ಖ್ಯಾತ ಶೇಕ್ಸ್‌ಫಿಯರ್‌ನನ್ನು ನೆನಪಿಸಿಕೊಂಡು ಮತ್ತೆ ಇಂಥವನೊಬ್ಬ ಎಂದು ಬಂದಾನು ?ʼಎಂದು ಕೇಳಬೇಕಾದ ಸನ್ನಿವೇಶ.
ಪ್ರೊ.ಜಿ.ವಿ.ಜೋಶಿ, ಕೆಕ್ಕಾರು ಲೇಖಕರು ಆರ್ಥಿಕ ತಜ್ಞರು