ನಾಡು ನುಡಿಗಾಗಿ ಸೇವೆ ಸಲ್ಲಿಸಿದ ಹಿರಿಯರ ಸ್ಮರಿಸಿ: ಡಾ. ಶಂಭು ಬಳಿಗಾರ

| Published : Jul 28 2025, 12:32 AM IST

ಸಾರಾಂಶ

ಆರು ದಶಕಕ್ಕೂ ಹೆಚ್ಚು ಕಾಲ ನಾಡು, ನುಡಿಗಾಗಿ ಯಾವ ಸದ್ದುಗದ್ದಲಗಳಿಲ್ಲದೆ ಮೌನವಾಗಿ ಕೊಡುಗೆ ನೀಡಿದ, ಗೆಳೆಯರ ಬಳಗ ಅದರ ಸಾಧನೆಯ ಅರ್ಹತೆಯ ಮೇಲೆ ಈ ಪ್ರಶಸ್ತಿ ಬಂದಿದ್ದು, ಅದನ್ನು ಕಟ್ಟಿದ ಹಿರಿಯರನ್ನು ಸದಾಕಾಲ ಸ್ಮರಿಸುವಂತಾಗಬೇಕು.

ಹಾವೇರಿ: ನಮ್ಮ ಸೈದ್ಧಾಂತಿಕ ಬದ್ಧತೆಗಳನ್ನು ಒಮ್ಮೊಮ್ಮೆ ಮೀರಿ ಮನುಷ್ಯ ಪ್ರೀತಿಗಾಗಿ ಹಳೆಯದನ್ನು ಮುರಿದು, ಹೊಸದನ್ನು ಕಟ್ಟಬೇಕು. ಇಂದಿನ ಹರಿದು ತಿನ್ನುವ ದಿನಮಾನಗಳಲ್ಲಿ ಶರಣರ ದಾಸೋಹ ನೀತಿಯಂತೆ ಹಂಚಿಕೊಂಡು ಬದುಕುವ ಕಲೆ ಅಗತ್ಯವಿದೆ ಎಂದು ಜಾನಪದ ವಿದ್ವಾಂಸ ಡಾ. ಶಂಭು ಬಳಿಗಾರ ತಿಳಿಸಿದರು.ಸ್ಥಳೀಯ ಹಂಚಿನಮನಿ ಆರ್ಟ್ ಗ್ಯಾಲರಿಯಲ್ಲಿ ಸಾಹಿತಿ ಕಲಾವಿದರ ಬಳಗ ಆಯೋಜಿಸಿದ್ದ ಈ ಬಾರಿಯ ಕರ್ನಾಟಕ ವಿದ್ಯಾವರ್ಧಕ ಸಂಘದ ರಾ.ಹ. ದೇಶಪಾಂಡೆ ಸಿರಿಗನ್ನಡ ಪ್ರಶಸ್ತಿ ಪುರಸ್ಕೃತ ಗೆಳೆಯರ ಬಳಗದ ಸಂಸ್ಥೆಯ ಅಭಿನಂದನಾ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು. ಆರು ದಶಕಕ್ಕೂ ಹೆಚ್ಚು ಕಾಲ ನಾಡು, ನುಡಿಗಾಗಿ ಯಾವ ಸದ್ದುಗದ್ದಲಗಳಿಲ್ಲದೆ ಮೌನವಾಗಿ ಕೊಡುಗೆ ನೀಡಿದ, ಗೆಳೆಯರ ಬಳಗ ಅದರ ಸಾಧನೆಯ ಅರ್ಹತೆಯ ಮೇಲೆ ಈ ಪ್ರಶಸ್ತಿ ಬಂದಿದ್ದು, ಅದನ್ನು ಕಟ್ಟಿದ ಹಿರಿಯರನ್ನು ಸದಾಕಾಲ ಸ್ಮರಿಸುವಂತಾಗಬೇಕು ಎಂದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯಶೋದಾ ವಂಟಗೋಡಿ ಮಾತನಾಡಿ, ವೃತ್ತಿ ಒತ್ತಡಗಳ ನಡುವೆ ಚಿತ್ರಕಲೆ, ಸಾಹಿತ್ಯ ಕಲೆಯಂತಹ ಯಾವುದಾದರೂ ಹವ್ಯಾಸ ಇರಬೇಕು. ಆಗ ಮಾತ್ರ ಚೈತನ್ಯಶೀಲರಾಗಿ ಜೀವನ ಸಾಗಿಸಬಹುದು. ನನಗೂ ಚಿತ್ರಕಲೆಯಲ್ಲಿ ಹೆಚ್ಚಿನ ಆಸಕ್ತಿ ಇತ್ತು. ಆದರೆ ಸ್ಪರ್ಧಾತ್ಮಕ ಪರೀಕ್ಷೆಗಳ ಓಟದಲ್ಲಿ ಬದಿಗೆ ಸರಿಸಬೇಕಾಯಿತು ಎಂದರು. ಸನ್ಮಾನವನ್ನು ಸ್ವೀಕರಿಸಿದ ಡಾ. ಸುದೀಪ ಪಂಡಿತ ಮಾತನಾಡಿ, ಈ ಪ್ರಶಸ್ತಿ ಹಾವೇರಿ ಜಿಲ್ಲೆಗೆ ಸಲ್ಲುವ ಗೌರವವಾಗಿದೆ ಎಂದರು. ಈ ಕಾರಣದಿಂದ ಗೆಳೆಯರ ಬಳಗದ ಘನತೆ ಹೆಚ್ಚಿದ್ದು, ನಾವೆಲ್ಲ ಹೆಚ್ಚು ಜವಾಬ್ದಾರಿಯುತವಾಗಿ ಕೆಲಸ ಮಾಡಬೇಕೆಂಬ ಸಂದೇಶ ಕೊಟ್ಟಿದೆ ಎಂದರು. ವೇದಿಕೆಯಲ್ಲಿ ಜ್ಞಾನಗಂಗಾ ಶಿಕ್ಷಣ ಸಮಿತಿಯ ಚೇರಮನ್ ಡಾ. ಶ್ರವಣ ಪಂಡಿತ, ಬಳಗದ ಕಾರ್ಯದರ್ಶಿ ಡಾ. ಗೌತಮ ಲೋಡಾಯಾ, ಶಿಕ್ಷಣ ಸಮಿತಿಯ ಕಾರ್ಯದರ್ಶಿ ಡಾ. ಗುಹೇಶ್ವರ ಪಾಟೀಲ ಹಾಗೂ ಕೋಶಾಧ್ಯಕ್ಷ ಸಂಜೀವಕುಮಾರ ಬಂಕಾಪೂರ ಇದ್ದರು. ಹಂಚಿನಮನಿ ಆರ್ಟ್ ಗ್ಯಾಲರಿಯ ಪರವಾಗಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಯಶೋದಾ ವಂಟಗೋಡಿ ಅವರನ್ನು ರೇಖಾ ಹಂಚಿನಮನಿ ಮತ್ತಿತರರು ಸನ್ಮಾನಿಸಿದರು. ಆರ್.ಸಿ. ನಂದಿಹಳ್ಳಿ ಪ್ರಾರ್ಥಿಸಿದರು. ಕಲಾವಿದ ಕರಿಯಪ್ಪ ಹಂಚಿನಮನಿ ಸ್ವಾಗತಿಸಿದರು.