ರೋಣ: ದೇಶ ಕಾಯುವ ಯೋಧರ ಸ್ಮರಣೆ ಅತೀ ಮುಖ್ಯವಾಗಿದ್ದು, ಅವರಿಂದಲೇ ನಾವಿಂದು ದೇಶದೊಳಗೆ ಯಾವುದೇ ಭಯವಿಲ್ಲದೇ ಸ್ವತಂತ್ರವಾಗಿ ಸುಂದರ ಬದುಕನ್ನು ಸಾಗಿಸುತ್ತಿದ್ದು, ದೇಶಕ್ಕೆ ಯೋಧರ ಕೊಡುಗೆ ಅಪಾರವಿದೆ ಎಂದು ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಮಿಥುನ ಜಿ. ಪಾಟೀಲ ಹೇಳಿದರು.

ಶನಿವಾರ ಪಟ್ಟಣದ ದ್ರೋಣಾಚಾರ್ಯ ತಾಲೂಕು ಕ್ರೀಡಾಂಗಣದಲ್ಲಿ ತಾಲೂಕು ಆಡಳಿತ, ಪುರಸಭೆ ಹಾಗೂ ವಿವಿಧ ಇಲಾಖೆ ವತಿಯಿಂದ ಜರುಗುದ 80ನೇ ಸ್ವಾತಂತ್ರ್ಯೋತ್ಸವ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಅನೇಕ ಮಹನೀಯರ ತ್ಯಾಗ, ಬಲಿದಾನದಿಂದ ಸ್ವಾತಂತ್ರ್ಯ ಸಿಕ್ಕಿದೆ. ದೇಶ ಸ್ವತಂತ್ರಗೊಳ್ಳಲು ಅಂದು ಹೋರಾಡಿದ ಮಹನೀಯರ ಬದಕು ಆದರ್ಶನಿಯವಾಗಿದೆ. ದೇಶದ ನೈಜ ಅಭಿವೃದ್ಧಿ ಸಾಧ್ಯವಾಗುವುದು. ಪ್ರತಿಯೊಬ್ಬರಿಗೂ ಉತ್ತಮ ಶಿಕ್ಷಣ ಮತ್ತು ಗುಣಮಟ್ಟದ ಆರೋಗ್ಯ ಸೇವೆ ಸಿಕ್ಕಾಗ ಮಾತ್ರ. ತಾಲೂಕಿನ ಪ್ರತಿಯೊಂದು ಕಟ್ಟಕಡೆಯ ವ್ಯಕ್ತಿಗೂ ಸರ್ಕಾರದ ಜನಪರ ಯೋಜನೆಗಳು ತಲುಪಬೇಕು. ಯುವಜನತೆ ಶಿಕ್ಷಣ ಮತ್ತು ಆರೋಗ್ಯದ ಕಡೆಗೆ ಹೆಚ್ಚಿನ ಗಮನಹರಿಸಿ ದೇಶದ ಪ್ರಗತಿಗೆ ಕೊಡುಗೆ ನೀಡಬೇಕು ಎಂದರು.

​ಸರ್ಕಾರದ ಯೋಜನೆಗಳ ತಲುಪುವಿಕೆ, ಪ್ರಸ್ತುತ ಜಾರಿಯಲ್ಲಿರುವ ಗ್ಯಾರಂಟಿ ಯೋಜನೆಗಳು ಬಡ ಮತ್ತು ಮಧ್ಯಮ ವರ್ಗದ ಕುಟುಂಬಗಳ ಸಾಮಾಜಿಕ, ಆರ್ಥಿಕ ಮಟ್ಟವನ್ನು ಹೆಚ್ಚಿಸಲು ಪೂರಕವಾಗಿವೆ ಎಂದರು.

ಧ್ವಜಾರೋಹಣ ನೆರವೇರಿಸಿ ತಹಸೀಲ್ದಾರ್ ನಾಗರಾಜ ಕೆ. ಮಾತನಾಡಿ, ಸಮಾಜದ ಏಳ್ಗೆಗೆ ಎಲ್ಲರೂ ಶ್ರಮಿಸಬೇಕು. ನಮ್ಮ‌ ಮುಂದಿನ ಪೀಳಿಗೆಗೆ ಸಂಪೂರ್ಣ ಸುಸ್ಥಿರ ಸಮಾಜ ಸಿಗುವಂತಾಗಬೇಕು. ಸ್ವಾತಂತ್ರ್ಯ ಸಿಗಲು ಪ್ರಾಣಾರ್ಪಣೆ ಮಾಡಿದ ಕ್ರಾಂತಿಕಾರರ ಜೀವನ ಸಾಹಸಗಾಥೆಗಳ ಬಗ್ಗೆ ನಮ್ಮ‌ಮಕ್ಕಳಿಗೆ ತಿಳಿಸಬೇಕಾಗಿದೆ ಎಂದರು.


ವಿವಿಧ ಶಾಲೆಯ ವಿದ್ಯಾರ್ಥಿಗಳು ಹಾಗೂ ಪೊಲೀಸರಿಂದ ಆಕರ್ಷಕ ಪಥಸಂಚಲನೆ ಜರುಗಿತು. ವಿವಿಧ ಶಾಲಾ- ಕಾಲೇಜು ವಿದ್ಯಾರ್ಥಿಗಳಿಂದ ದೇಶಭಕ್ತಿ ಸಾರುವ ಮನೋಜ್ಞ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ ಸಾಧಕರನ್ನು ಹಾಗೂ ಕ್ರೀಡೆ ಮತ್ತು ಶಿಕ್ಷಣದಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.

​ಕಾರ್ಯಕ್ರಮದಲ್ಲಿ ಸಿಪಿಐ ವಿಜಯಕುಮಾರ, ಪುರಸಭೆ ಮುಖ್ಯಾಧಿಕಾರಿ‌ ರಮೇಶ ಹೊಸಮನಿ, ಸಮಾಜ ಕಲ್ಯಾಣ ಸಹಾಯಕ ನಿರ್ದೇಶಕಿ‌ ಗೀತಾ ಆಲೂರ, ಸಿಡಿಪಿಒ ಲಲಿತಾ ಅಳವಂಡಿ, ಪಿಎಸ್‌ಐ ಪ್ರಕಾಶ ಬಣಕಾರ, ಬಿಇಒ ದಯಾನಂದ ಯಾವಗಲ್ಲ, ಅಕ್ಷರ ದಾಸೋಹ ಅಧಿಕಾರಿ ಆರ್.ಎಲ್. ನಾಯಕ ಸೇರಿದಂತೆ ತಾಲೂಕು ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು. ಮಮತಾ ದೊಡ್ಡಮನಿ‌ ನಿರೂಪಿಸಿದರು.