ಸಾರಾಂಶ
ಸಂತರ ನಾಮಸ್ಮರಣೆ ಮಾಡುವುದರಿಂದ ಅನುಗ್ರಹ ಪ್ರಾಪ್ತವಾಗುತ್ತದೆ ಎಂದು ಕೇರಳದ ಸಾಸ್ತಾನ ಕೊಟ್ಟದ ಫಾ.ಬೇಹನ್ನಾನ್ ಕೋರೋತ್ ತಿಳಿಸಿದರು.
- ಕರಗುಂದ ಸೆಂಟ್ ಜಾರ್ಜ್ ಆರ್ಥೋಡೆಕ್ಸ್ ಸಿರಿಯಲ್ ಚರ್ಚ್ ನಲ್ಲಿ ಸಂತ ಜಾರ್ಜ್ ರವರ ದಿವ್ಯ ಬಲಿ ಪೂಜೆ
ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರಸಂತರ ನಾಮಸ್ಮರಣೆ ಮಾಡುವುದರಿಂದ ಅನುಗ್ರಹ ಪ್ರಾಪ್ತವಾಗುತ್ತದೆ ಎಂದು ಕೇರಳದ ಸಾಸ್ತಾನ ಕೊಟ್ಟದ ಫಾ.ಬೇಹನ್ನಾನ್ ಕೋರೋತ್ ತಿಳಿಸಿದರು.
ಗುರುವಾರ ತಾಲೂಕಿನ ಕರಗುಂದದ ಸೆಂಟ್ ಜಾರ್ಜ್ ಅರ್ಥೋಡೆಕ್ಸ್ ಸಿರಿಯಲ್ ನಲ್ಲಿ ನಡೆದ ಸಂತ ಜಾರ್ಜ್ ವರ ವಾರ್ಷಿಕ ಹಬ್ಬದ ದಿವ್ಯ ಬಲಿ ಪೂಜೆ ಹಾಗೂ ಸಂದೇಶ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು. ಸಂತ ಜಾರ್ಜ್ ಅವರು ವೃತ್ತಿಯಲ್ಲಿ ಸೈನಿಕರಾಗಿದ್ದರು. ಅವರು ಏಸು ಕ್ರಿಸ್ತರಲ್ಲಿ ಅಚಲವಾದ ಭಕ್ತಿಯುಳ್ಳವರಾಗಿದ್ದು ತಮ್ಮ ವೃತ್ತಿಗೆ ವಿದಾಯ ಹೇಳಿ ದೇವರಿಗಾಗಿ ಬಲಿದಾನ ಅರ್ಪಿಸಿಕೊಂಡ ಶ್ರೇಷ್ಠ ಸಂತರಾಗಿದ್ದರು. ಅವರ ಮದ್ಯಸ್ಥಿಕೆಯಲ್ಲಿ ಪ್ರಾರ್ಥನೆ ಮಾಡಿದರೆ ಅಥವಾ ಅಪೇಕ್ಷಿಸಿದರೆ ಎಲ್ಲಾ ಕಾರ್ಯಗಳು ಯಶಸ್ವಿಯಾಗಲಿದೆ. ಇದರಿಂದ ದೇವರ ಕೃಪೆಗೆ ಪಾತ್ರರಾಗಲು ಸಾಧ್ಯವಾಗುತ್ತದೆ. ನಮ್ಮ ಪೂರ್ವಿಕರು ಮತ್ತು ಎಲ್ಲಾ ಸಂತರ ದಾರಿಯಲ್ಲಿಯೇ ನಡೆದು ಉತ್ತಮ ಜೀವನ ನಡೆಸಬೇಕು. ಎಲ್ಲರನ್ನು ಗೌರವಿಸುವುದನ್ನು ಕಲಿಯಬೇಕು. ಎಲ್ಲಾ ಮತ, ಧರ್ಮದವರನ್ನುಪ್ರೀತಿಯಿಂದ ಕಾಣಬೇಕು ಎಂದು ಕರೆನೀಡಿದರು.
ಈ ಹಬ್ಬದಲ್ಲಿ ಎಲ್ಲಾ ಧರ್ಮದ ಭಕ್ತಾದಿಗಳು ಭಾಗವಹಿಸುವ ಮೂಲಕ ಸರ್ವ ಧರ್ಮದ ಸಂದೇಶವನ್ನು ಸಮಾಜಕ್ಕೆ ರವಾನಿಸಿದಂತಾಗಿದೆ. ಇದೇ ರೀತಿಯಲ್ಲಿ ಎಲ್ಲರೂ ಸಾಮರಸ್ಯದಿಂದ ಬಾಳಿ ಬದುಕಬೇಕು ಎಂದರು. ಸಭೆಯಲ್ಲಿ ಫಾ. ಬೆನ್ನಿ ಮ್ಯಾಥ್ಯೂ,ಫಾ.ಜೋಸೆಫ್ ಚಾಕ್ಯೂ, ಫಾ.ಪೌಲ್ ಕೆ.ಬೆನ್ನಿ,ಫಾ.ಥೋಮಸ್ ಮ್ಯಾಥ್ಯೂ ಇದ್ದರು.ಹಬ್ಬದ ಕಾರ್ಯಕ್ರಮದಲ್ಲಿ ತಾಲೂಕಿನ ವಿವಿಧ ಚರ್ಚನ ಭಕ್ತರು, ಹಿಂದೂ ಹಾಗೂ ಮುಸ್ಲಿಂ ಸಹೋದರರು ಭಾಗವಹಿಸಿದ್ದರು. ಈ ಹಬ್ಬವನ್ನು ಜಾರ್ಜ್ ನಾಳೆಯಲ್ ಕುಟಂಬ ಮತ್ತು ಶ್ರೀ ಯೋಹನ್ ಪಾರಾಟು ಕುಡಿ ಕುಟುಂಬ ದವರು ನಡೆಸಿಕೊಟ್ಟರು. ಹಬ್ಬದ ಪ್ರಯುಕ್ತ ಮೆರವಣಿಗೆ, ಅನ್ನ ಸಂತರ್ಪಣೆ ನಡೆಯಿತು.