ಸಾರಾಂಶ
ಹಿರಿಯೂರು: ಭಾರತೀಯ ಸಂಸ್ಕೃತಿಯಲ್ಲಿ ಗುರುವಿಗೆ ಅತ್ಯುನ್ನತವಾದ ಸ್ಥಾನವಿದ್ದು, ಮಾನವ ಜೀವನ ಸಾರ್ಥಕವಾಗಬೇಕಾದರೆ ಗುರುವಿನ ಸಾಕ್ಷಾತ್ಕಾರವಾಗಬೇಕಾಗುತ್ತದೆ ಎಂದು ಶಿಕ್ಷಣ ಇಲಾಖೆ ನಿವೃತ್ತ ಜಂಟಿ ನಿರ್ದೇಶಕ ಎಂ.ರೇವಣ್ಣ ಸಿದ್ದಪ್ಪ ಹೇಳಿದರು.
ತಾಲೂಕಿನ ಖಂಡೇನಹಳ್ಳಿ ಗ್ರಾಮದ ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ ಹಳೇ ವಿದ್ಯಾರ್ಥಿಗಳು ಮತ್ತು ಗೆಳೆಯರ ಬಳಗದಿಂದ ಆಯೋಜಿಸಿದ್ದ ಗುರುವಂದನಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ದೇಶಕ್ಕೆ ಉತ್ತಮ ನಾಗರೀಕರನ್ನು ರೂಪಿಸಿಕೊಡುವಲ್ಲಿ ಗುರುವಿನ ಪಾತ್ರ ಮಹತ್ತರವಾದುದಾಗಿದೆ. ನಮ್ಮಲ್ಲಿರುವ ಅಜ್ಞಾನ ಹೊರಗೆ ಹಾಕಲು ಶಿಕ್ಷಕರು ಮಾರ್ಗದರ್ಶಿಯಾಗುತ್ತಾರೆ. ಗುರು ಶಬ್ದದ ಅರ್ಥವೂ ಇದನ್ನೇ ಹೇಳುತ್ತದೆ. ಅಂಧಕಾರ ದೂರವಾಗಿಸುವವನು, ಏಳು ಬೀಳುಗಳಲ್ಲಿ ಸನ್ಮಾರ್ಗ ತೋರುವವನು ಗುರುವಾಗುತ್ತಾನೆ ಎಂದರು.
ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಸಾವಿತ್ರಮ್ಮ ಈಶ್ವರಪ್ಪ ಮಾತನಾಡಿ, ಉತ್ತಮ ಬದುಕು ಕಟ್ಟಿಕೊಡುವ ಶಿಕ್ಷಣದ ಜತೆಗೆ ಕೂಡಿ ಬಾಳುವ ಸಮಾನತೆ ಪಾಠ ಹೇಳುವ ಗುರುಗಳ ಅವಶ್ಯಕತೆ ಸಮಾಜಕ್ಕಿದೆ. ಭೇದ ಭಾವ ಎಣಿಸದೆ ನಿಷ್ಕಲ್ಮಷ ಪ್ರೀತಿ ಮತ್ತು ನಿಷ್ಠೆಯಿಂದ ಗ್ರಾಮೀಣ ಶಾಲೆಗಳಲ್ಲಿ ಪಾಠ ಮಾಡಿದವರು ಉದಾತ್ತ ಶಿಷ್ಯರನ್ನು ಹೊಂದಿರುತ್ತಾರೆ. ಶಿಕ್ಷಕರ ಕ್ರಿಯಾಶೀಲತೆ ಮಕ್ಕಳಲ್ಲಿ ದೀರ್ಘ ಕಾಲದ ಜ್ಞಾನ ಮತ್ತು ಕಾಳಜಿಯಾಗಿ ಬೆಳೆಯುತ್ತದೆ. ವಿವಿಧ ಕ್ಷೇತ್ರದ ಸಾಧಕರನ್ನು ಕೊಟ್ಟಿರುವ ಗಡಿ ಗ್ರಾಮದ ಶಾಲೆಯ ಶಿಕ್ಷಕರು ಮಾದರಿಯಾಗಿದ್ದಾರೆ ಎಂದರು.ನಿವೃತ್ತ ಮುಖ್ಯ ಶಿಕ್ಷಕ ಹೊಸಕೆರೆ ಹನುಮಂತರಾಯಪ್ಪ ಮಾತನಾಡಿ, ಸಮಾಜದ ಬಗ್ಗೆ ಚಿಂತಿಸುವವರು ಕಡಿಮೆಯಾಗಿರುವ ಈಗಿನ ಕಾಲದಲ್ಲಿ ಶಿಕ್ಷಕರ ಜವಾಬ್ದಾರಿ ಹೆಚ್ಚುತ್ತಿದೆ. ಸಾಮಾಜಿಕ ಚಿಂತನೆಯುಳ್ಳ ಯುವ ಶಕ್ತಿಯನ್ನು ಕಟ್ಟಲು ಶಿಕ್ಷಕರ ಪಾತ್ರ ಬಹು ಮುಖ್ಯ ಎಂದರು.
ಇದೇ ವೇಳೆ ಪ್ರಾಥಮಿಕ,ಪ್ರೌಢಶಾಲೆಯಲ್ಲಿ ಶಿಕ್ಷಕರಾಗಿದ್ದ ಎಂ.ರೇವಣ್ಣ ಸಿದ್ದಪ್ಪ, ಜಿ.ಗುಜ್ಜಾರಪ್ಪ, ಜಿ.ಎನ್.ನರಸಿಂಹಮೂರ್ತಿ, ಚಂದ್ರಹಾಸ್, ಹನುಮಂತರಾಯಪ್ಪ, ನರಸಿಂಹಯ್ಯ, ವಿಶಾಲಾಕ್ಷಿ, ನಿಂಗಣ್ಣ, ಜಯರಾಮಪ್ಪ, ಬಸವರಾಜ್, ಗೋವಿಂದಪ್ಪ, ತಿಮ್ಮಾರೆಡ್ಡಿ, ಎಂ.ಆರ್.ಲಕ್ಷ್ಮಣಪ್ಪ ಅವರನ್ನು ಸನ್ಮಾನಿಸಲಾಯಿತು.ಈ ಸಂದರ್ಭದಲ್ಲಿ ಗ್ರಾಮ ಪಂಚಾಯ್ತಿ ಉಪಾಧ್ಯಕ್ಷ ಕೆಟಿ.ಶ್ರೀನಿವಾಸ್, ಸದಸ್ಯರಾದ ರಾಘವೇಂದ್ರ, ಬಸವರಾಜ್, ಮಂಗಳಾ ಯೋಗೇಶ್, ಸೌಮ್ಯ. ಎಸ್‍ಡಿಎಂಸಿ ಅಧ್ಯಕ್ಷ ಲಾಲಾಸಾಬ್, ತಿಮ್ಮರಾಯ, ನಾಗರಾಜ್, ತಿಮ್ಮಣ್ಣ, ಕೆ.ಜಿ.ವಿರೂಪಾಕ್ಷ, ಡಾ. ಇಸ್ಮಾಯಿಲ್, ಶಿಕ್ಷಕಿ ವೀಣಾ, ಗೆಳೆಯರ ಬಳಗದ ಜ್ಯೋತಿ, ಆನಂದ್, ಶ್ರೀನಿವಾಸ್, ನಾಗರಾಜ್, ಜ್ಯೋತಿ ಲಕ್ಷ್ಮಿ, ನಾಗಮಣಿ ಮುಂತಾದವರು ಹಾಜರಿದ್ದರು.