ಹುಬ್ಬಳ್ಳಿಯ ಹೊಸೂರು ಬಾವಿಯಲ್ಲಿ ವಿಸರ್ಜಿಸಿ ಹಾಗೆ ಬಿಟ್ಟಿದ್ದ ಗಣೇಶನ ಮೂರ್ತಿಗಳ ಅವಶೇಷಗಳ ತೆರವು ಕಾರ್ಯವನ್ನು ಕೊನೆಗೂ ಮಹಾನಗರ ಪಾಲಿಕೆಯೂ ಶುಕ್ರವಾರ ಬೆಳಗ್ಗೆ ಆರಂಭಿಸಿದೆ.
ಹುಬ್ಬಳ್ಳಿ:
ಇಲ್ಲಿನ ಹೊಸೂರು ಬಾವಿಯಲ್ಲಿ ವಿಸರ್ಜಿಸಿ ಹಾಗೆ ಬಿಟ್ಟಿದ್ದ ಗಣೇಶನ ಮೂರ್ತಿಗಳ ಅವಶೇಷಗಳ ತೆರವು ಕಾರ್ಯವನ್ನು ಕೊನೆಗೂ ಮಹಾನಗರ ಪಾಲಿಕೆಯೂ ಶುಕ್ರವಾರ ಬೆಳಗ್ಗೆ ಆರಂಭಿಸಿದೆ.ಗಣೇಶೋತ್ಸವ ಮುಗಿದು ಒಂದೂವರೆ ತಿಂಗಳು ಕಳೆದರೂ ಬಾವಿಯಲ್ಲಿನ ಅವಶೇಷಗಳನ್ನು ತೆರವುಗೊಳಿಸದೆ ಪಾಲಿಕೆ ನಿರ್ಲಕ್ಷ್ಯ ವಹಿಸಿತ್ತು. ಮುರಿದ ಕೈಕಾಲು, ಬೇರ್ಪಟ್ಟ ಸೊಂಡಿಲು, ಕಿರೀಟ, ಕೊಳೆತ ಹೂವು, ಬಟ್ಟೆ ಹಾಗೂ ಕಟ್ಟಿಗೆಯ ತುಂಡುಗಳಿಂದ ದುರ್ನಾತ ಹರಡುತ್ತಿತ್ತು. ಇದರಿಂದ ಸುತ್ತಮುತ್ತಲಿನ ನಿವಾಸಿಗಳು ಮತ್ತು ವ್ಯಾಪಾರಸ್ಥರು ತೀವ್ರ ತೊಂದರೆ ಅನುಭವಿಸುತ್ತಿದ್ದರು. ಈ ಸಮಸ್ಯೆಯನ್ನು ಮುನ್ನೆಲೆಗೆ ತಂದು "ಪಾಲಿಕೆಗೆ ಕೇಳಿಸುತ್ತಿಲ್ಲ ಗಣೇಶನ ಆರ್ತನಾದ " ಶೀರ್ಷಿಕೆಯಡಿ "ಕನ್ನಡಪ್ರಭ " ಶುಕ್ರವಾರ ವಿಸ್ತೃತ ವರದಿ ಪ್ರಕಟಿಸಿತ್ತು. ವರದಿ ಪ್ರಕಟವಾಗುತ್ತಿದ್ದಂತೆಯೇ ಅಧಿಕಾರಿಗಳು ಕಾರ್ಯಪ್ರವೃತ್ತರಾಗಿದ್ದಾರೆ.ಕ್ರೇನ್ ಮೂಲಕ ಕಾರ್ಯಾಚರಣೆ:
ಬಾವಿಯಲ್ಲಿದ್ದ ಬೃಹತ್ ಗಾತ್ರದ ಮೂರ್ತಿಗಳ ಅವಶೇಷ ಹಾಗೂ ಇತರ ತ್ಯಾಜ್ಯವನ್ನು ಕ್ರೇನ್ ಬಳಸಿ ಹೊರತೆಗೆಯಲಾಗುತ್ತಿದೆ. ಹಲವು ದಿನಗಳಿಂದ ದುರ್ವಾಸನೆಯ ನಡುವೆ ದಿನದೂಡುತ್ತಿದ್ದ ಸ್ಥಳೀಯರಿಗೆ ಈ ಕ್ರಮ ಕೊಂಚ ನಿರಾಳತೆ ತಂದಿದೆ.ಉತ್ತರ ಕರ್ನಾಟಕದಲ್ಲೇ ಪ್ರಸಿದ್ಧಿ ಪಡೆದಿರುವ ಹುಬ್ಬಳ್ಳಿ ಗಣೇಶೋತ್ಸವದ ವಿಸರ್ಜನಾ ಮೆರವಣಿಗೆಯಲ್ಲಿ ಲಕ್ಷಾಂತರ ಭಕ್ತರು ಪಾಲ್ಗೊಳ್ಳುತ್ತಾರೆ. ನಗರದ ನೂರಾರು ಸಾರ್ವಜನಿಕ ಗಣೇಶ ಮೂರ್ತಿಗಳನ್ನು ವಿವಿಧ ಸ್ಥಳಗಳಲ್ಲಿ ವಿಸರ್ಜಿಸಲಾಗುತ್ತದೆ. ಆದರೆ, ಉತ್ಸವದ ಸಂಭ್ರಮ ಮುಗಿದ ಬಳಿಕ ವಿಸರ್ಜನಾ ತಾಣಗಳ ಸ್ವಚ್ಛತೆ ಕಡೆಗಣಿಸಿರುವುದು ಸಾರ್ವಜನಿಕರ ಅಸಮಾಧಾನಕ್ಕೆ ಕಾರಣವಾಗಿತ್ತು.ಗಣೇಶ ಮೂರ್ತಿಗಳ ಅವಶೇಷಗಳಿಂದ ದುರ್ವಾಸನೆ ಹರಡುತ್ತಿರುವುದು ಗಮನಕ್ಕೆ ಬಂದಿದ್ದು, ತೆರವು ಕಾರ್ಯ ಆರಂಭಿಸಲಾಗಿದೆ. ಬಾವಿಯಲ್ಲಿರುವ ಅವಶೇಷಗಳನ್ನು ಶನಿವಾರ ಸಂಜೆಯೊಳಗೆ ಸಂಪೂರ್ಣವಾಗಿ ತೆರವುಗೊಳಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು.ವಿಜಯಕುಮಾರ್, ಹು-ಧಾ ಮಹಾನಗರ ಪಾಲಿಕೆ ಉಪ ಆಯುಕ್ತ